ಜಗ್ರೆಬ್: ಭಾರತದ ಸೋಮ್ದೇವ್ ದೇವ್ವರ್ಮನ್ ಅವರು ವಿಶ್ವದ ನಂ.29 ಆಟಗಾರ ಜಗ್ರೇನ್ ಮೆಲ್ಜರ್ ವಿರುದ್ಧ, ಎಟಿಪಿ ಜಗ್ರೆಬ್ ಒಳಾಂಗಣ ಚಾಂಪಿಯನ್ಷಿಪ್ನ ಎರಡನೇ ಸುತ್ತಿನ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿ ಕೈಚೆಲ್ಲಿದರು.
ಆದರೆ, ಶ್ರೇಯಾಂಕ ರಹಿತ ಸೋಮ್ದೇವ್ ಪಂದ್ಯದಲ್ಲಿ ಆಸ್ಟ್ರೇಲಿಯಾದ 4ನೇ ಶ್ರೇಯಾಂಕದ ಆಟಗಾರ ಜಗ್ರೇನ್ ವಿರುದ್ಧ 6-1, 6-7(5), 2-6 ಸೆಟ್ಗಳ ಅಂತರದಿಂದ ಸೋಲನುಭವಿಸಿದರು.
ತಮಗಿಂತ ಅಗ್ರ ಸ್ಥಾನದ ಆಟಗಾರನ ವಿರುದ್ಧ ಸಮರ್ಥ ಪ್ರದರ್ಶನ ನೀಡಿದ ಸೋಮ್ದೇವ್ ಮೊದಲ ಸೆಟ್ನಲ್ಲಿ ಜಯ ಕಂಡುಕೊಂಡರು. ಆದರೆ, ತೀವ್ರ ಪೈಪೋಟಿಯಿಂದ ನಡೆದ ಎರಡನೇ ಸೆಟ್ನಲ್ಲಿ ತಿರುಗಿಬಿದ್ದ ಎದುರಾಳಿ ಮೈಲುಗೈ ಸಾಧಿಸಿದರು. ನಂತರ ಮೂರನೇ ಸೆಟ್ನಲ್ಲೂ ಜಯ ಕಾಣುವಲ್ಲಿ ಯಶಸ್ವಿಯಾದ ಜಗ್ರೇನ್ ಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಈ ಹಿಂದೆ ಸೋಮ್ದೇವ್ ಅವರು ತಮಗಿಂತ ಅಗ್ರ ಆಟಗಾರರಾದ ಸಿಪ್ರಸ್ ಮ್ಯಾಕ್ರೋಸ್, ಇವಾ ಕಾರ್ಲೋವಿಚ್ ಹಾಗೂ ಕ್ರೋವೇಷಿಯಾದ ಮೆರಿನ್ ಸಿಲಿಕ್ ಅವರನ್ನು ಸೋಲಿಸಿದ್ದಾರೆ.
ಡಬಲ್ಸ್ ವಿಭಾಗದಲ್ಲಿ ಸೋಮ್ದೇವ್ ಮತ್ತು ಅವರ ಜತೆಯಾಟಗಾರ ಎಫ್. ಸಿಪೋಲ್ಲಾ ಆರಂಭಿಕ ಸುತ್ತಿನಲ್ಲಿ ಎಂ. ಡೆಲಿಕ್ ಮತ್ತು ಎಫ್ ಸ್ಕುಗೋರ್ ಜೋಡಿಯನ್ನು 6-4, 6-2 ಅಂತರದಿಂದ ಸೋಲಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.