ಅಂತಿಮ ದಿನ ಮೈದಾನಕ್ಕಿಳಿಯದ ಧೋನಿ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ, ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರು ದಿನಗಳ ಕಾಲ ನಡೆದ ಟೀಂ ಇಂಡಿಯಾ ತರಬೇತಿ ಶಿಬಿರ ಸೋಮವಾರ ಅಂತ್ಯಗೊಂಡಿತು.
ಬೆಂಗಳೂರಿನಲ್ಲಿ ನಡೆದ ಭಾರತ ತಂಡದ ಮೂರು ದಿನಗಳ ತರಬೇತಿ ಶಿಬಿರ ಅಂತ್ಯ
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ, ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರು ದಿನಗಳ ಕಾಲ ನಡೆದ ಟೀಂ ಇಂಡಿಯಾ ತರಬೇತಿ ಶಿಬಿರ ಸೋಮವಾರ ಅಂತ್ಯಗೊಂಡಿತು. ಆದರೆ, ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಅಂತಿಮ ದಿನ ಅಭ್ಯಾಸದಲ್ಲಿ ಪಾಲ್ಗೊಳ್ಳದಿರುವುದು ಅಚ್ಚರಿ ಮೂಡಿಸಿತು.
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ಭಾರತದ ಎಲ್ಲ ಅಗ್ರ ಕ್ರಮಾಕಂದ ಬ್ಯಾಟ್ಸ್‌ಮನ್‌ಗಳು ಕಠಿಣ ಅಭ್ಯಾಸ ನಡೆಸಿದರು.
ಅಂತಿಮ ದಿನ ಬ್ಯಾಟಿಂಗ್ ಮತ್ತು ಬೌಲಿಂಗ್ ಮೇಲೆ ಹೆಚ್ಚು ಗಮನ ಹರಿಸಲಾಯಿತು. ನಾಯಕ ಧೋನಿ ಮಾತ್ರ ಅಭ್ಯಾಸದಲ್ಲಿ ಪಾಲ್ಗೊಳ್ಳಲಿಲ್ಲ. ತಂಡದೊಂದಿಗೇ ಇದ್ದ ಧೋನಿ, ತಂಡದ ಇತರ ಸದಸ್ಯರಾದ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್ ಹಾಗೂ ಚೇತೇಶ್ವರ ಪೂಜಾರ ಅವರೊಂದಿಗೆ ತರಬೇತಿ ಸಮಯದಲ್ಲಿ ಮಾತುಕತೆ ನಡೆಸಿದ್ದು ಕಂಡುಬಂದಿತು.
ಮೊದಲ ಎರಡು ದಿನಗಳಲ್ಲಿ ಭಾರತ ತಂಡ ಎರಡು ಬಾರಿ ನೆಟ್ ಅಭ್ಯಾಸಕ್ಕಿಳಿದಿತ್ತು. ಆದರೆ, ಮೂರನೇ ಮತ್ತು ಅಂತಿಮ ದಿನ ಕೇವಲ ಮಧ್ಯಾಹ್ನ ಒಂದು ಬಾರಿ ಮಾತ್ರ ಅಭ್ಯಾಸಕ್ಕಿಳಿಯಿತು.
ಮಧ್ಯಾಹ್ನ 3 ಗಂಟೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಆಗಮಿಸಿದ ಆಟಗಾರರು ನೇರವಾಗಿ ನೆಟ್ ಪ್ರಾಕ್ಟೀಸ್‌ಗೆ ತೆರಳಿದರು. ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಮುರಳಿ ವಿಜಯ್, ವೀರೇಂದ್ರ ಸೆಹ್ವಾಗ್ ಹಾಗೂ ಪೂಜಾರ್ ಬ್ಯಾಟಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದರು.
ಬ್ಯಾಟ್ಸ್‌ಮನ್‌ಗಳು ಅಭ್ಯಾಸದಲ್ಲಿ ಅಶೋಕ್ ದಿಂಡಾ, ಭುವನೇಶ್ವರ ಕುಮಾರ್, ಇಶಾಂತ್ ಶರ್ಮಾ, ಪ್ರಗ್ಯಾನ್ ಓಜಾ ಹಾಗೂ ಆರ್. ಅಶ್ವಿನ್ ಅವರ ಬೌಲಿಂಗ್‌ನಲ್ಲಿ ವೇಗದ ಮತ್ತು ಸ್ಪಿನ್ ಬೌಲಿಂಗ್ ಅಭ್ಯಾಸ ನಡೆಸಿದರು.
ಅಭ್ಯಾಸದಲ್ಲಿ ಮೂರು ಬ್ಯಾಟ್‌ಗಳನ್ನು ಬಳಸಿದ ಸಚಿನ್ ಅವರು 45 ನಿಮಿಷಗಳ ಕಾಲ ಅಭ್ಯಾಸ ನಡೆಸಿದರು. ಬೌಲರ್ ಹರ್ಭಜನ್ ಸಿಂಗ್ ಸಹ ಸುಮಾರು ಒಂದು ಗಂಟೆ ಕಾಲ ಅಭ್ಯಾಸ ನಡೆಸಿದರು. ಅವರೊಂದಿಗೆ ಓಜಾ, ದಿಂಡಾ ಹಾಗೂ ಇಶಾಂತ್ ಸಹ ಕೊಂಚ ಹೊತ್ತು ಬ್ಯಾಟಿಂಗ್ ನಿರತರಾಗಿದ್ದು ಕಂಡುಬಂದಿತು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಫೆಬ್ರವರಿ 22ರಿಂದ ಆರಂಭವಾಗಲಿದ್ದು, ಧೋನಿ ನಾಯಕತ್ವದ ತಂಡ ಮಂಗಳವಾರ ಚೆನ್ನೈಗೆ ತೆರಳಲಿದೆ.