ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏನಿದು ವಿಶ್ವ ಹಾಕಿ ಲೀಗ್ ?

Srinivasa Murthy VN
Updated On : 18 Feb 2013, 11:12 am

ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ (ಐಎಚ್‌ಎಫ್) ವತಿಯಿಂದ ಆಯೋಜಿತವಾಗಿರುವ 'ವಿಶ್ವ ಹಾಕಿ ಲೀಗ್‌' ಪಂದ್ಯಾವಳಿ ಹಾಕಿ ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಹಾಕಿ ಪಂದ್ಯಾವಳಿಗಳಿಗಾಗಿ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯಾವಳಿಯಾಗಿದೆ. ಎರಡು ವರ್ಷಗಳ ಕಾಲಾವಧಿಯ ಈ ಪಂದ್ಯಾವಳಿಯನ್ನು ಪ್ರಥಮ ಸುತ್ತು, ದ್ವಿತೀಯ ಸುತ್ತು ಹಾಗೂ ತೃತೀಯ ಸುತ್ತುಗಳನ್ನಾಗಿ ವರ್ಗೀಕರಿಸಲಾಗಿರುತ್ತದೆ. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಈ ಪಂದ್ಯಾವಳಿಯನ್ನು ನಡೆಸಲಾಗುತ್ತದೆ.
ಪಂದ್ಯಾವಳಿ ಸ್ವರೂಪ: ಒಂದು ಬಾರಿ ಹಾಕಿ ವಿಶ್ವಕಪ್, ಒಲಿಂಪಿಕ್ಸ್ ಪಂದ್ಯಾವಳಿಗಳು ನಡೆದ ನಂತರ, ಮತ್ತೊಂದು ಬಾರಿಯ ವಿಶ್ವಕಪ್, ಒಲಿಂಪಿಕ್ಸ್ ಪಂದ್ಯಾವಳಿ ನಡೆಯುವ ನಡುವಿನ ಕಾಲದಲ್ಲಿ 'ವಿಶ್ವ ಹಾಕಿ ಲೀಗ್‌' ಪಂದ್ಯಾವಳಿಯನ್ನು ಎರಡು ಬಾರಿ ಆಯೋಜಿಸಲಾಗುತ್ತದೆ.
'ವಿಶ್ವ ಹಾಕಿ ಲೀಗ್- ಆವೃತ್ತಿ 1'ರ ಪಂದ್ಯಾವಳಿಯು ವಿಶ್ವಕಪ್ ಹಾಕಿಯ ಅರ್ಹತಾ ಸುತ್ತು ಎಂದು ಪರಿಗಣಿತವಾಗುತ್ತದೆ. ಈ ಆವೃತ್ತಿಯಲ್ಲಿ ನಡೆಯುವ ಪಂದ್ಯಗಳು ರೌಂಡ್ ರಾಬಿನ್ ಆಧಾರಿತ ಪಂದ್ಯಗಳಾಗಿವೆ. ಇನ್ನು, 'ವಿಶ್ವ ಹಾಕಿ ಲೀಗ್ - ಆವೃತ್ತಿ 2'ರ ಪಂದ್ಯಾವಳಿಯು ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನ ಪಂದ್ಯಾವಳಿಯಾಗಿರುತ್ತದೆ. ಈ ಆವೃತ್ತಿಯ ಪಂದ್ಯಗಳು ವರ್ಗೀಕೃತ ಪಂದ್ಯಗಳಾಗಿರುತ್ತವೆ.
ಕಳೆದ ವರ್ಷವಷ್ಟೇ ಒಲಿಂಪಿಕ್ಸ್ ಮುಗಿದಿದೆ. ಇನ್ನು, ಮುಂದಿನ ಒಲಿಂಪಿಕ್ಸ್ 2016ರಲ್ಲಿ ಬ್ರೆಜಿಲ್‌ನ ರಿಯೋ ಡಿ ಜುನೈರೋದಲ್ಲಿ ನಡೆಯಲಿದೆ. ಇನ್ನು, ಹಾಕಿ ವಿಶ್ವಕಪ್ 2014ರಲ್ಲಿ ಹಾಲೆಂಡ್‌ನ ಹೇಗ್‌ನಲ್ಲಿ ನಡೆಯಲಿದೆ.
ಹಾಗಾಗಿ, ಈಗ ಆರಂಭವಾಗಿರುವ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯು 2014ರ ಹಾಕಿ ವಿಶ್ವಕಪ್ ಹಾಗೂ 2016ರ ಒಲಿಂಪಿಕ್ಸ್ - ಎರಡಕ್ಕೂ ಅರ್ಹತಾ ಸುತ್ತಿನ ಪಂದ್ಯಾವಳಿಯಾಗಿದೆ.
ಹಾಲಿ, ನಡೆಯುತ್ತಿರುವ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯು 2012ರ ಆಗಸ್ಟ್ ತಿಂಗಳಿನಲ್ಲೇ ಆರಂಭಗೊಂಡಿತ್ತು. ಇದು ಮುಂದಿನ ವರ್ಷದ ಫೆಬ್ರವರಿವರೆಗೂ ಮುಂದುವರೆಯಲಿದ್ದು, ಈ ಪಂದ್ಯಾವಳಿಯು 2014ರ ಹಾಕಿ ವಿಶ್ವಕಪ್‌ಗಾಗಿ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯಾವಳಿಯಾಗಿದೆ.
ಇದನ್ನು ಹೊರತಾಗಿ, 2013-14ರಲ್ಲಿ ನಡೆಯಲಿರುವ ಮತ್ತೊಂದು ಆವೃತ್ತಿಯ ವಿಶ್ವ ಹಾಕಿ ಲೀಗ್, 2016ರ ಒಲಿಂಪಿಕ್ಸ್‌ಗಾಗಿ ನಡೆಯುವ ಅರ್ಹತಾ ಸುತ್ತಿನ ಪಂದ್ಯಾವಳಿ ಆಗಿರುತ್ತದೆ.
ವಿಶ್ವ ಹಾಕಿ ಲೀಗ್- ದ್ವಿತೀಯ ಸುತ್ತಿನ ಪಂದ್ಯಾವಳಿಯಲ್ಲಿನ ಅಗ್ರ 8 ಸ್ಥಾನಗಳನ್ನು ಪಡೆಯಲಿರುವ ತಂಡಗಳು, ವಿಶ್ವ ಹಾಕಿ ಲೀಗ್‌ನ 2ನೇ ಆವೃತ್ತಿಯಲ್ಲಿ ಆಡುವ ಅರ್ಹತೆ (ಬೈ ಮೂಲಕ)ಪಡೆಯುತ್ತವೆ. ವಿಶ್ವ ಹಾಕಿ ಲೀಗ್ 2ನೇ ಆವೃತ್ತಿಯನ್ನು ಸೆಮಿಫೈನಲ್ ಹಂತವೆಂದೂ ಪರಿಗಣಿಸಲಾಗುತ್ತದೆ. ಅಲ್ಲಿ, ಅಗ್ರ 6 ಸ್ಥಾನಗಳನ್ನು ಪಡೆಯುವ ತಂಡಗಳು ವಿಶ್ವಕಪ್ ಅಥವಾ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಲಿವೆ. ಈ ಆರೂ ತಂಡಗಳು, ವಿಶ್ವಕಪ್ ಅಥವಾ ಒಲಿಂಪಿಕ್ಸ್ ಆತಿಥ್ಯ ವಹಿಸುವ ದೇಶವನ್ನು ಪ್ರತಿನಿಧಿಸುವ ತಂಡ ಹಾಗೂ ಐದು ಖಂಡಗಳ ಚಾಂಪಿಯನ್ ತಂಡಗಳ ಜೊತೆಗೆ ವಿಶ್ವಕಪ್ ಅಥವಾ ಒಲಿಂಪಿಕ್ಸ್‌ಗಳಲ್ಲಿ ಆಡಬೇಕಿರುತ್ತದೆ.
ಎಲ್ಲಿಲ್ಲಿ ಪಂದ್ಯಗಳು?: ಇದೀಗ, ಆರಂಭಗೊಂಡಿರುವ ವಿಶ್ವ ಹಾಕಿ ಲೀಗ್‌ನ ದ್ವಿತೀಯ ಸುತ್ತಿನ ಪಂದ್ಯಗಳು ಕ್ರಮವಾಗಿ, ನವದೆಹಲಿ, ರಿಯೋ ಡಿ ಜುನೈರೋ (ಬ್ರೆಜಿಲ್), ಸೇಂಟ್ ಜರ್ಮೇನ್-ಎನ್-ಲಾಯೆ (ಫ್ರಾನ್ಸ್) ಹಾಗೂ ಎಲೆಕ್ಟ್ರೋಸ್ಟಲ್ (ರಷ್ಯಾ)ನಲ್ಲಿ ನಡೆಯಲಿವೆ.

ಭಾರತದ ಸ್ಥಿತಿ-ಗತಿ
ಹಾಲಿ ನಡೆಯುತ್ತಿರುವ 2012-14ರ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಆಡಿದ್ದ ಭಾರತ ಪುರುಷರ ಹಾಕಿ ತಂಡ, ದ್ವಿತೀಯ ಸುತ್ತಿನಲ್ಲಿ 'ಬೈ' ಮೂಲಕ ಆಡುವ ಅರ್ಹತೆಯನ್ನು ಪಡೆದಿತ್ತು. ದ್ವಿತೀಯ ಸುತ್ತಿನಲ್ಲಿ, ಸರ್ದಾರ ಸಿಂಗ್ ನೇತೃತ್ವದ ಭಾರತ ತಂಡಕ್ಕೆ ಫಿಜಿ, ಒಮನ್, ಐರ್ಲೆಂಡ್, ಚೀನಾ ಹಾಗೂ ಬಾಂಗ್ಲಾದೇಶ ತಂಡಗಳು ಎದುರಾಳಿಗಳಾಗಿವೆ. 2014ರಲ್ಲಿ ವಿಶ್ವಕಪ್ ದೃಷ್ಟಿಯಿಂದ ಹೇಳುವುದಾದರೆ, ಇದು ಭಾರತ ಪುರುಷರ ತಂಡಕ್ಕೆ ಮಹತ್ವದ ಪಂದ್ಯಾವಳಿ.
ಮಹಿಳೆಯರ ತಂಡದ ಸವಾಲು: ಇನ್ನು, ವಿಶ್ವ ಹಾಕಿ ಲೀಗ್‌ನ ದ್ವಿತೀಯ ಸುತ್ತಿನಲ್ಲಿ ಭಾರತ ಮಹಿಳೆಯರ ತಂಡವೂ ಕಣಕ್ಕಿಳಿದಿದೆ. ಆ ತಂಡದ ನೇತೃತ್ವವನ್ನು ರಿತು ರಾಣಿ ಅವರು ನೇತೃತ್ವ ವಹಿಸಿದ್ದಾರೆ. ಭಾರತ ಮಹಿಳೆಯರ ತಂಡಕ್ಕೆ ಜಪಾನ್, ಫಿಜಿ, ರಷ್ಯಾ, ಮಲೇಷ್ಯಾ ಹಾಗೂ ಕಜಿಕಿಸ್ತಾನಗಳು ಪೈಪೋಟಿ ನೀಡಲಿವೆ. ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಲು ಈ ಪಂದ್ಯಾವಳಿಯು ಭಾರತ ಮಹಿಳಾ ಹಾಕಿ ತಂಡಕ್ಕೆ ಮಹತ್ವದ್ದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement