ವಾಲಿಬಾಲ್ ಚತುರೆಗೆ ಬೇಕು ಸರ್ಕಾರದ ಆಸರೆ
ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟು
-ಜೆ. ಮಹದೇವ
ಮೈಸೂರು: ವಾಲಿಬಾಲ್ ಕೋರ್ಟ್ನಲ್ಲಿ ನಿಂತು ಎದುರಿನಿಂದ ಬರುವ ಬಾಲ್ ಅನ್ನು ಚತುರತೆಯಿಂದ ತಡೆದು ಮತ್ತೆ ಪ್ರತಿಸ್ಪರ್ಧಿಗಳತ್ತ ಹೊಡೆಯುವ ಈಕೆಯ ಆಟಕ್ಕೆ ಇಲ್ಲಿಯವರೆಗೆ ಯಾವ ಪ್ರಶಸ್ತಿಯೂ ಮಿಸ್ ಆಗಿಲ್ಲ. ಒಂದೆರಡು ಟೂರ್ನಿಯಲ್ಲಿ ಪ್ರಶಸ್ತಿ ಬಂದಿಲ್ಲದಿದ್ದರೂ ತೀರಾ ಕಳಪೆ ಮಟ್ಟದ ಪ್ರದರ್ಶನವನ್ನಂತೂ ನೀಡಿಯೇ ಇಲ್ಲ. ಹಾಗಾಗಿಯೇ ಇವರು ಸಿಕ್ಕ ಅಲ್ಪ ಸಮಯದಲ್ಲೇ ರಾಜ್ಯ ಹಾಗೂ ರಾಷ್ಟ್ರ ತಂಡದಲ್ಲಿ ಸ್ಥಾನ ಗಳಿಸಿ, ಕ್ರೀಡಾ ವಲಯದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೈಸೂರಿನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಡೆಸುವ ಕ್ರೀಡಾ ವಸತಿನಿಲಯದಲ್ಲಿ ವಾಲಿಬಾಲ್ ತರಬೇತಿ ಪಡೆಯುತ್ತಿರುವ ಸಿ.ಜೆ. ರಂಜಿತಾ ವಾಲಿಬಾಲ್ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಸದ್ಯ ಟೆರಿಷಿಯನ್ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಕಾಂ ಓದುತ್ತಿರುವ ಇವರು ಕಳೆದ ಐದು ವರ್ಷಗಳಿಂದ ಬಾಲಿಬಾಲ್ ಕ್ರೀಡೆಯಲ್ಲಿ ಸತತ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸಿ ಇಲಾಖೆ, ಕಾಲೇಜು ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ವಾಲಿಬಾಲ್ನತ್ತ ಆಸಕ್ತಿ: ಮೂಲತಃ ಶಿವಮೊಗ್ಗ ತಾಲೂಕು ಮಲವಗೊಪ್ಪ ಗ್ರಾಮದವರಾದ ಮೆಕಾನಿಕ್ ಸಿ.ಎಸ್. ಜಾಕೋಬ್ ಮತ್ತು ಸೌಮ್ಯಾ ಅವರ ಪುತ್ರಿ ರಂಜಿತಾ. ಓದುತ್ತಿರುವಾಗಲೆ ವಾಲಿಬಾಲ್ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡ ಇವರು ಪದವಿಪೂರ್ವ ಶಿಕ್ಷಣ ಅಭ್ಯಾಸ ಮಾಡಲು ಮೈಸೂರಿಗೆ ಬಂದರು. ಇಲ್ಲಿನ ಸಿದ್ದಾರ್ಥನಗರದ ಟೆರಿಷಿಯನ್ ಕಾಲೇಜಿಲ್ಲಿ ಪ್ರವೇಶ ಪಡೆದು ಚಾಮುಂಡಿ ವಿಹಾರದ ಕ್ರೀಡಾ ವಸತಿನಿಲಯದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪಿಯು ಹಂತದಿಂದಲೇ ಪಂದ್ಯಗಳಲ್ಲಿ ಭಾಗವಹಿಸಿ ಪ್ರಶಸ್ತಿಗೆ ಲಗ್ಗೆ ಹಾಕಿ, ಇಂದಿಗೂ ಪ್ರಶಸ್ತಿಗಳ ಬೇಟೆಯನ್ನು ನಿಲ್ಲಿಸಿಲ್ಲ. ಈಗ ಪದವಿಯ ಅಂತಿಮ ವರ್ಷದಲ್ಲಿದ್ದು ಮುಂದಿನ ಭವಿಷ್ಯಕ್ಕಾಗಿ ಚಿಂತಿಸುತ್ತಿದ್ದಾರೆ.
ಕ್ರೀಡಾಪಟುಗಳಿಗೆ ರೇಲ್ವೆ ಇಲಾಖೆಯಲ್ಲಿ ಉದ್ಯೋಗ ಮೀಸಲಾತಿ ಹೊರತುಪಡಿಸಿದರೆ ಮಿಕ್ಕ ಯಾವ ಇಲಾಖೆಗಳಲ್ಲೂ ಮೀಸಲಾತಿ ಕಲ್ಪಿಸಿಲ್ಲ. ಇದು ರಂಜಿತಾ ಅವರ ಚಿಂತೆಯಲ್ಲ. ಎಲ್ಲಾ ಕ್ರೀಡಾಪಟುಗಳ ಚಿಂತೆ ಇದೇ ಆಗಿದೆ. ಕಷ್ಟಪಟ್ಟು ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಯಾವ ಉದ್ಯೋಗವೂ ಸಿಗುವುದಿಲ್ಲ. ಆದಕ್ಕಾಗಿ ಯಾಕೆ ಇಷ್ಟೊಂದು ಕಷ್ಟಪಡಬೇಕು ಎಂಬುದು ಇವರ ವಾದ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೀಡಾಪಟುಗಳ ಪ್ರತಿಭೆ ಗುರುತಿಸಿ ಅವರಿಗೆ ಇನ್ನಿತರ ಇಲಾಖೆಗಳಲ್ಲಿ ಮೀಸಲಾತಿ ತಂದು ಉದ್ಯೋಗ ನೀಡಬೇಕಿದೆ.