ಅಸಭ್ಯವಾಗಿ ವರ್ತಿಸಿದ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ಗೆ ದಂಡ
ಪರ್ತ್: ಇತ್ತೀಚೆಗೆ ಆಸೀಸ್ನ ಸ್ಪಿನ್ ದಂತಕತೆ ಶೇನ್ ವಾರ್ನ್ ವೆಸ್ಟ್ ಇಂಡೀಸ್ನ ಮರ್ಲಾನ್ ಸ್ಯಾಮ್ಯೂಯೆಲ್ಸ್ ಜತೆ ಜಗಳ ಮಾಡಿಕೊಂಡು ದಂಡ ತೆತ್ತಿದ್ದರು. ಈ ಘಟನೆ ಮರೆಯುವ ಮುನ್ನವೇ ಆಸೀಸ್ನ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ಅಸಭ್ಯ ವರ್ತನೆಗೆ ದಂಡ ತೆರಬೇಕಾದ ಪರಿಸ್ಥಿತಿ ಎದುರಾಗಿದೆ.
ಮಂಗಳವಾರ ನಡೆದ ಆರ್ವೈಒಬಿಐ ಏಕದಿನ ಪಂದ್ಯಾವಳಿಯಲ್ಲಿ ತಸ್ಮೇನಿಯಾ ಹಾಗೂ ವೆಸ್ಟ್ರನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಸಭ್ಯ ವರ್ತನೆ ತೋರಿದ ರಿಕಿ ಪಾಂಟಿಂಗ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾದ ದಂಡ ವಿಧಿಸಿದೆ.
ಪಾಂಟಿಂಗ್ ಕ್ರಿಕೆಟ್ ಆಸ್ಟ್ರೇಲಿಯಾದ 1.1ರ ನಿಯಮಾವಳಿ ಮುರಿದ ಹಿನ್ನಲೆಯಲ್ಲಿ ಪಾಂಟಿಂಗ್ಗೆ ದಂಡ ವಿಧಿಸಲಾಗಿದೆ. ಈ ನಿಯಮಾವಳಿ ಪ್ರಕಾರ ಯಾವುದೇ ಆಟಗಾರ ಮೈದಾನದಲ್ಲಿ ಕ್ರಿಕೆಟ್ ಸಲಕರಣೆ, ಬಟ್ಟೆ, ಮೈದಾನದ ಸಲಕರಣೆಗೆ ಹಾನಿ ಮಾಡಬಾರದು ಎಂದು ತಿಳಿಸಲಾಗಿದೆ. ಈ ಪಂದ್ಯದ ವೇಳೆ ಪಾಂಟಿಂಗ್ ತಸ್ಮೇನಿಯ ಪರ ಬ್ಯಾಟಿಂಗ್ ಮಾಡುವಾಗ ಅವರಿಗೆ ರನೌಟ್ ಎಂದು ತೀರ್ಪು ನೀಡಲಾಯಿತು. ಈ ವೇಳೆ ಕೋಪಗೊಂಡ ಪಾಂಟಿಂಗ್ ತಮ್ಮ ಬ್ಯಾಟನ್ನು ಗಾಳಿಯಲ್ಲಿ ಮೇಲಕ್ಕೆಸೆದರು. ನಂತರ ಅದು ಕೆಲ ಮೀಟರ್ ದೂರದಲ್ಲಿ ಬಿತ್ತು. ಪಾಂಟಿಂಗ್ ಈ ವರ್ತನೆಯನ್ನು ಖಂಡಿಸಿದ ಕ್ರಿಕೆಟ್ ಆಸ್ಟ್ರೇಲಿಯಾ, ವಿಚಾರಣೆ ನಡೆಸಿ ಅವರಿಗೆ 13,500 ದಂಡ ವಿಧಿಸಲಾಗಿದೆ.