ಪಾಕಿಸ್ತಾನ ಹಾಕಿಗೆ ಆರ್ಥಿಕ ಬಿಕ್ಕಟ್ಟು
ಕರಾಚಿ: ಪಾಕಿಸ್ತಾನ ಹಾಕಿ ಫೆಡರೇಷನ್ ಈಗ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಹೀಗಾಗಿ ಬರುವ ತಿಂಗಳು ಮಲೇಷ್ಯಾದಲ್ಲಿ ನಡೆಯಲಿರುವ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಗೆ ಪಾಕ್ ತನ್ನ ರಾಷ್ಟ್ರೀಯ ತಂಡವನ್ನು ಕಳುಹಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಅಲ್ಲಿನ ಸರ್ಕಾರ ಹಣ ಬಿಡುಗಡೆ ಮಾಡಿದರೆ ಮಾತ್ರ ಅದು ಹಿರಿಯ ಮತ್ತು ಕಿರಿಯರ ತಂಡಗಳನ್ನು ಮುಂಬರುವ ಪಂದ್ಯಾವಳಿಗಳಿಗೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನ ಹಾಕಿ ಫಡರೇಷನ್ (ಪಿಎಚ್ಎಫ್) ತಿಳಿಸಿದೆ. ಪಿಎಚ್ಎಫ್ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಹೀಗಾಗಿ ಪಾಕಿಸ್ತಾನ ಸರ್ಕಾರ 100 ದಶಲಕ್ಷ ಹಣ ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಆದರೆ, ಇದುವರೆಗೂ ಹಣ ಬಿಡುಗಡೆ ಮಾಡಲಾಗಿಲ್ಲ. ಪಂಜಾಬ್ ಸರ್ಕಾರ ಸಹ 30 ದಶಲಕ್ಷ ಹಣ ಬಿಡುಗಡೆ ಮಾಡಲು ಒಪ್ಪಿಕೊಂಡಿತ್ತು. ಆದರೆ, ಅದನ್ನೂ ಬಿಡುಗಡೆ ಮಾಡಲಾಗಿಲ್ಲ ಎಂದು ಪಿಎಚ್ಎಫ್ ಕಾರ್ಯದರ್ಶಿ ಆಸೀಫ್ ಬಿಜ್ವಾ ಹೇಳಿದ್ದಾರೆ.