ಭಾರತಕ್ಕೆ ಸುಲಭ ಜಯದ ನಿರೀಕ್ಷೆ
ನವದೆಹಲಿ: ತಮ್ಮ ಆರಂಭಿಕ ಪಂದ್ಯದಲ್ಲಿ ಫಿಜಿ ವಿರುದ್ಧ ಸುಲಭ ಜಯ ಸಾಧಿಸಿ ವಿಶ್ವಾಸದಲ್ಲಿರುವ ಭಾರತ ಹಾಕಿ ತಂಡದ ಆಟಗಾರರು, ವಿಶ್ವ ಹಾಕಿ ಲೀಗ್ನಲ್ಲಿ ಬುಧವಾರ ನಡೆಯಲಿರುವ ಒಮನ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ದೊಡ್ಡ ಜಯದ ನಿರೀಕ್ಷೆಯಲ್ಲಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತನಗಿಂತ ಕಡಿಮೆ ರ್ಯಾಂಕಿಂಗ್ ಹೊಂದಿರುವ ಫಿಜಿ ತಂಡದ ವಿರುದ್ಧ 16-0 ಗೋಲುಗಳ ಅಂತರದಿಂದ ಜಯ ಸಾಧಿಸಿತ್ತು. ಜಯದ ಉತ್ಸಾಹದಲ್ಲಿರುವ ಸರ್ದಾರ್ ಸಿಂಗ್ ನೇತೃತ್ವದ ತಂಡ, ಬುಧವಾರ ಮೇಜರ್ ಧ್ಯಾನ್ಚಂದ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರ್ಯಾಂಕಿಂಗ್ನಲ್ಲಿ 36ನೇ ಸ್ಥಾನ ಹೊಂದಿರುವ ಒಮನ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಕಾತರದಲ್ಲಿದೆ.
ಫಿಜಿ ವಿರುದ್ಧದ ಪಂದ್ಯದಲ್ಲಿ ಭಾರತದ 10 ಆಟಗಾರರು ಗೋಲ್ ದಾಖಲಿಸಿದ್ದರು. ಇದರಲ್ಲಿ ಉಪನಾಯಕ ವಿ.ಆರ್. ರಘುನಾಥ್ ಮತ್ತು ದನಿಶ್ ಮುಜ್ತಾಬಾ ಅವರು ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
ನಾಯಕ ಸರ್ದಾರ್ ಸಿಂಗ್ ಮಾತ್ರ ಗೋಲು ಗಳಿಸುವ ಅಕವಾಶದಿಂದ ವಂಚಿತವಾದ ಏಕೈಕ ಆಟಗಾರ ಎನಿಸಿದ್ದರು. ಸ್ಫೂರ್ತಿಯ ಪ್ರದರ್ಶನ ನೀಡುತ್ತಿರುವ ಮಿಡ್ಫೀಲ್ಡರ್ ಸರ್ದಾರ್ ಸಿಂಗ್ ಒಮನ್ ವಿರುದ್ಧ ಗೋಲು ದಾಖಲಿಸುವ ವಿಶ್ವಾಸ ಹೊಂದಿದ್ದಾರೆ.
70ನೇ ರ್ಯಾಂಕ್ ಹೊಂದಿದ್ದ ಫಿಜಿ ವಿರುದ್ಧ ನೀಡಿದ ಪ್ರದರ್ಶನವನ್ನೇ ಒಮನ್ ತಂಡದ ವಿರುದ್ಧ ನೀಡಲು ಭಾರತ ತಂಡದ ಆಟಗಾರರು ನಿರೀಕ್ಷೆಯಲ್ಲಿದ್ದಾರೆ.
ಎದುರಾಳಿ ತಂಡದ ದೌರ್ಬಲ್ಯ ಮನಗಂಡಿರುವ ಭಾರತ ತಂಡದ ಮುಖ್ಯ ತರಬೇತುದಾರ ಮೈಕೆಲ್ ನಾಬ್ಸ್ ಅವರು, ಒಮನ್ ವಿರುದ್ಧ ತಮ್ಮ ಮೀಸಲು ಆಟಗಾರರನ್ನು ಪರೀಕ್ಷೆಗಳಿಸುವ ಸಾಧ್ಯತೆಗಳಿವೆ.
ಪಂದ್ಯಾವಳಿಯಲ್ಲಿ ಯಾವುದೇ ಗುಣಮಟ್ಟದ ತಂಡಗಳು ಭಾಗವಹಿಸಿಲ್ಲ ಎಂದು ಭಾರತ ತಂಡ ಯಾವುದೇ ಪಂದ್ಯವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಹಾಗೊಂದು ವೇಳೆ ನಿರ್ಲಕ್ಷ್ಯ ಮಾಡಿದಲ್ಲಿ 2014ರಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಭಾರತದ ಕನಸೇ ಭಗ್ನಗೊಳ್ಳುವ ಸಾಧ್ಯತೆಗಳಿವೆ. ವಿಶ್ವಕಪ್ ಪಂದ್ಯಾವಳಿ ಹಾಲೆಂಡ್ನಲ್ಲಿ ನಡೆಯಲಿದೆ. ಹೀಗಾಗಿ ಪಂದ್ಯಾವಳಿಯ ಮಹತ್ವವನ್ನು ತರಬೇತುದಾರ ನಾಬ್ಸ್ ಗಮನದಲ್ಲಿಟ್ಟಿಕೊಳ್ಳಬೇಕಾಗುತ್ತದೆ.
'ಯಾವುದೇ ಸಮಯದಲ್ಲಿ ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಕಾರಣ ಇದು ಬರುವ ವರ್ಷ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯ ಅರ್ಹತಾ ಪಂದ್ಯಾವಳಿಯಾಗಿದೆ. ಹೀಗಾಗಿ ಯಾವುದೇ ದೇಶದ ವಿರುದ್ಧದ ಪಂದ್ಯವನ್ನು ನಾವು ಹಗುರವಾಗಿ ಪರಿಗಣಿಸುವಂತಿಲ್ಲ' ಎಂದು ನಾಬ್ಸ್ ಹೇಳಿದ್ದಾರೆ.
'ನಮ್ಮ ಆಟಗಾರರು ಯಾವತ್ತೂ ಪಂದ್ಯವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಪಂದ್ಯಾವಳಿಯಲ್ಲಿ ಚೀನಾ ಮತ್ತು ಐರ್ಲೆಂಡ್ನಂತಹ ರಾಷ್ಟ್ರಗಳ ವಿರುದ್ಧದ ಪಂದ್ಯದಲ್ಲಿ ನಾವು ಕಠಿಣ ಸವಾಲು ಎದುರಿಸಬೇಕಾಗಬಹುದು' ಎಂದು ನಾಬ್ಸ್ ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಭಾರತ, ಐರ್ಲೆಂಡ್ ಹಾಗೂ ಚೀನಾ ವಿರುದ್ಧ ನಮ್ಮ ಆಟ ನಡೆಯುವುದಿಲ್ಲ ಎಂಬುದು ಒಮನ್ ತಂಡಕ್ಕೆ ಭಾರತಕ್ಕೆ ಆಗಮಿಸುವ ಮೊದಲೇ ತಿಳಿದಿದೆ.
ಆದರೆ, ಪಂದ್ಯಾವಳಿಯಲ್ಲಿ ದಿಟ್ಟ ಪ್ರದರ್ಶನ ನೀಡುವ ಯೋಚನೆಯಲ್ಲಿ ಒಮನ್ ಇಲ್ಲಿಗೆ ಆಗಮಿಸಿದೆ. ಹೀಗಾಗಿ ಭಾರತದ ವಿರುದ್ಧದ ಪಂದ್ಯದಲ್ಲಿ ಅವರು ಕಡಿಮೆ ಗೋಲುಗಳ ಅಂತರದಿಂದ ಸೋಲಲು ಎದುರು ನೋಡುತ್ತಿದ್ದಾರೆ. ಅಲ್ಲದೆ ಫಿಜಿ ತಂಡಕ್ಕಿಂತ ಉತ್ತಮ ಪ್ರದರ್ಶನ ನೀಡುವುದು ಆ ತಂಡದ ಗುರಿಯಾಗಿದೆ.
ಆರಂಭಿಕ ಪಂದ್ಯದಲ್ಲಿ ಚೀನಾ ವಿರುದ್ಧ ಈಗಾಗಲೇ 0-4 ಅಂತರದಿಂದ ಸೋಲನುಭವಿಸಿರುವ ಒಮನ್ ತಂಡ ಭಾರತದ ವಿರುದ್ಧ ಗೌರವ ಹೋರಾಟ ನಡೆಸುವ ಇರಾದೆ ಹೊಂದಿದೆ. ಆದರೆ, ಒಮನ್ಸ್ ತಂಡಕ್ಕೆ ಪಂದ್ಯಾವಳಿಯಲ್ಲಿ ತನಗಿಂತ ಕಡಿಮೆ ರ್ಯಾಂಕಿಂಗ್ ಹೊಂದಿರುವ ಬಾಂಗ್ಲಾದೇಶ ಮತ್ತು ಫಿಜಿ ವಿರುದ್ಧ ಯಶಸ್ಸು ಸಾಧಿಸಲು ಉತ್ತಮ ಅವಕಾಶವನ್ನು ಹೊಂದಿದೆ.
ಒಮನ್ ವಿರುದ್ಧದ ಪಂದ್ಯದ ನಂತರ, ಭಾರತ ತಂಡ ಗುರುವಾರ ಐರ್ಲೆಂಡ್ ವಿರುದ್ಧ ಸೆಣಸಲಿದ್ದು, ಶನಿವಾರ ಚೀನಾ ಹಾಗೂ ಭಾನುವಾರ ಬಾಂಗ್ಲಾದೇಶದ ವಿರುದ್ಧ ಹೋರಾಟ ನಡೆಸಲಿದೆ.