ಆರ್ಸಿಬಿ ತಂಡಕ್ಕೆ ವಿರಾಟ ಕೊಹ್ಲಿ ಸಾರಥ್ಯ
ವಿರಾಟ್ ಕೊಹ್ಲಿಗೆ 6ನೇ ಆವೃತ್ತಿಯಲ್ಲಿ ತಂಡದ ನಾಯಕತ್ವದ ಪಟ್ಟ ನೀಡಲಾಗಿದೆ.
ಬೆಂಗಳೂರು: ಐಪಿಎಲ್ನ 6ನೇ ಆವೃತ್ತಿಗೆ ಕೆಲವೇ ವಾರಗಳು ಬಾಕಿ ಇದ್ದು, ಪಂದ್ಯಾವಳಿಯ ಬಲಿಷ್ಠ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ತಯಾರಿ ನಡೆಸುತ್ತಿದೆ. ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿಗೆ ಈ ಆವೃತ್ತಿಯಲ್ಲಿ ತಂಡದ ನಾಯಕತ್ವದ ಪಟ್ಟ ನೀಡಲಾಗಿದೆ.
ಕಳೆದ ಆವೃತ್ತಿಯಲ್ಲಿ ನ್ಯೂಜಿಲೆಂಡ್ನ ಡೇನಿಯಲ್ ವೆಟೋರಿ ಅನುಪಸ್ಥಿತಿಯಲಿ ತಂಡದ ನಾಯಕತ್ವ ವಹಿಸಿದ್ದ ಕೊಹ್ಲಿ, ವೆಟೋರಿ ಅವರ ಮಾರ್ಗದರ್ಶನದಲ್ಲಿ ತಂಡದ ನಾಯಕತ್ವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದರು.
ಕಳೆದ ವರ್ಷ ಕೆಲ ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡರು, ಉತ್ತಮವಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದ ಕೊಹ್ಲಿ, ಈ ಆವೃತ್ತಿಯಲ್ಲಿ ವೆಟ್ಟೊರಿಯವರಿಂದ ಪೂರ್ಣ ಪ್ರಮಾಣದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಈ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಲ್ರೌಂಡರ್ ಆಟಗಾರರನ್ನು ತಂಡಕ್ಕೆ ತೆಗೆದುಕೊಂಡ ಆರ್ಸಿಬಿ ತಂಡ ಇತ್ತೀಚೆಗೆ ಎಡಗೈ ಸ್ಪಿನ್ನರ್ ಮುರಳಿ ಕಾರ್ತಿಕ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಈ ಮೂಲಕ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸುವ ಬಗ್ಗೆ ಆರ್ಸಿಬಿ ತಂಡ ಹೆಚ್ಚು ಗಮನಹರಿಸಿದೆ.
ವಿರಾಟ್ ಕೊಹ್ಲಿಯವರನ್ನು ತಂಡದ ನಾಯಕ ಎಂದು ಘೋಷಿಸಲು ತುಂಬಾ ಸಂತಸವಾಗಿದೆ. ಕೊಹ್ಲಿ ಉತ್ತಮ ಕಲಿಕಾಗಾರನಾಗಿದ್ದು, ಆತನ ಆಸಕ್ತಿ ಹಾಗೂ ಮುಂದಾಳತ್ವ ಪ್ರಶ್ನಾತೀತವಾದುದು ಎಂದು ತಂಡದ ಮಾಲಿಕ ವಿಜಯ್ ಮಲ್ಯ ತಿಳಿಸಿದರು.
ಈ ಬಾರಿಯ ಆರ್ಸಿಬಿ ತಂಡದಲ್ಲಿ ಬೌಲರ್ಗಳಾದ ಆರ್.ಪಿ ಸಿಂಗ್, ಪಂಕಜ್ ಸಿಂಗ್, ಉನಾದ್ಕತ್, ರವಿ ರಾಂಪಾಲ್, ಮುರಳಿ ಕಾರ್ತಿಕ್, ಸಂದೀಪ್ ವಾರಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಬ್ಯಾಟಿಂಗ್ನಲ್ಲಿ ಶೆಲ್ಡಾನ್ ಜಾಕ್ಸನ್, ಅಭಿನವ್ ಮುಕುಂದ್ ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡ ಬ್ಯಾಟ್ಸ್ಮನ್ಗಳಾಗಿದ್ದಾರೆ. ಆಲ್ರೌಂಡರ್ಗಳಾಗಿ ಆಸೀಸ್ನ ಮೊಯ್ಸಿಸ್ ಹೆನ್ರಿಕ್ಸ್, ಡೆನಿಯಲ್ ಕ್ರಿಶ್ಚಿನ್, ಕ್ರಿಸ್ಟೋಫರ್ ಬಾರ್ನ್ವೆಲ್ ಆಯ್ಕೆಯಾಗಿದ್ದಾರೆ.
ಹೀಗಾಗಿ ಕಳೆದ ವರ್ಷಗಳಲ್ಲಿ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದ ಆರ್ಸಿಬಿ, ಬೌಲಿಂಗ್ ವಿಭಾಗದಲ್ಲಿ ಮಂಕಾಗಿತ್ತು. ಈ ಹಿಂದೆ ಜಹಿರ್ ಖಾನ್, ವಿನಯ್ ಕುಮಾರ್, ವೆಟ್ಟೊರಿ, ಮುರಳಿಧರನ್ ಜತೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಬೌಲರ್ಗಳು ಹಾಗೂ ಆಲ್ರೌಂಡರ್ಗಳು ತಂಡದಲ್ಲಿ ಸಮತೋಲ ಕಾಯ್ದುಕೊಳ್ಳುವಂತಾಗಿದೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್, ಕೊಹ್ಲಿ, ದಿಲ್ಷಾನ್, ಸೌರಬ್ ತಿವಾರಿ, ಮಾಯಾಂಕ್ ಅಗರ್ವಾಲ್, ಜತೆಗೆ ಹೊಸ ಆಟಗಾರರಿಂದ ಬ್ಯಾಟಿಂಗ್ ವಿಭಾಗದಲ್ಲೂ ಹೆಚ್ಚು ತೀಕ್ಷ್ಣತೆ ಕಂಡುಕೊಂಡಂತಾಗಿದೆ.
ತಂಡದ ಇದುವರೆಗಿನ ಹಾದಿಯನ್ನು ಗಮನಿಸಿದರೆ, ಮೊದಲ ಆವೃತ್ತಿಯಲ್ಲಿ ಹಿನಾಯ ಪ್ರದರ್ಶನ ನೀಡಿದ್ದು, ನಂತರದ ಆವೃತ್ತಿಗಳಲ್ಲಿ ಎರಡು ಬಾರಿ ರನ್ನರ್ ಅಪ್ ಹಾಗೂ ಒಂದು ಬಾರಿ ಸೆಮಿಫೈನಲ್ ಹಂತ ತಲುಪಿರುವುದು ತಂಡದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.