ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇತ್ಯರ್ಥವಾಗದ ಆರಂಭಿಕ ಕಗ್ಗಂಟು

ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಆರಂಭಿಕರಾಗಿ ಯಾರು ಅಂಗಣಕ್ಕಿಯುತ್ತಾರೆ ಎಂಬುದು ಈಗ ಹೆಚ್ಚು ಕುತೂಹಲ ಮೂಡಿಸಿದೆ.

Srinivasa Murthy VN
Updated On : 20 Feb 2013, 11:56 am

ಚೆನ್ನೈನಲ್ಲಿ ಆರಂಭವಾದ ಅಭ್ಯಾಸ: ಸೆಹ್ವಾಗ್ ಜತೆ ಯಾರು ಇನಿಂಗ್ಸ್ ಆರಂಭಿಸುತ್ತಾರೆ ಎಂಬ ಕುತೂಹಲ
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಆರಂಭಿಕರಾಗಿ ಯಾರು ಅಂಗಣಕ್ಕಿಯುತ್ತಾರೆ ಎಂಬುದು ಈಗ ಹೆಚ್ಚು ಕುತೂಹಲ ಮೂಡಿಸಿದೆ. ಈ ಕುರಿತು ತಂಡದ ವ್ಯವಸ್ಥಾಪಕರು ಇದುವರೆಗೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.
ಆದರೆ, ಮೊದಲ ಟೆಸ್ಟ್ ಹಿನ್ನೆಲೆಯಲ್ಲಿ ಅಭ್ಯಾಸ ನಡೆಸುವಾಗ ಮುರಳಿ ವಿಜಯ್ ಮತ್ತು ಶಿಖರ್ ಧವನ್ ಅವರು ನೆಟ್‌ನಲ್ಲಿ ಹೆಚ್ಚು ಹೊತ್ತು ಬ್ಯಾಟ್ ಬೀಸಿದ್ದಾರೆ. ಹೀಗಾಗಿ ಈ ಇಬ್ಬರಲ್ಲಿ ಒಬ್ಬರು ಸೆಹ್ವಾಗ್ ಜತೆಗೂಡಿ ಇನಿಂಗ್ಸ್ ಆರಂಭಿಸಬಹುದು ಎನ್ನಲಾಗಿದೆ.
ಮುರಳಿ ವಿಜಯ್ ಅವರು ಬುಧವಾರ ನೆಟ್ಸ್‌ನಲ್ಲಿ ದೀರ್ಘ ಕಾಲದವರೆಗೂ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ನಂತರ ದೆಹಲಿ ಎಡಗೈ ಬ್ಯಾಟ್ಸ್‌ಮನ್ ಧವನ್ ಅವರು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ನೆಟ್ ಪ್ರಾಕ್ಟೀಸ್ ನಂತರ ತಂಡದ ತರಬೇತುದಾರ ಡಂಕನ್ ಫ್ಲೆಚರ್ ಅವರೊಂದಿಗೆ ಧವನ್ ಅವರು ಗಂಭೀರವಾದ ಚರ್ಚೆ ನಡೆಸಿದ್ದು ಕಂಡುಬಂದಿತು.
ನೆಟ್ ಪ್ರಾಕ್ಟೀಸ್‌ಗೆ ಇಳಿದಿದ್ದ ತಂಡ ಸಂಪೂರ್ಣವಾಗಿ ಡ್ರೆಸ್ಸಿಂಗ್ ರೂಂಗೆ ತೆರಳಿದ ನಂತರ, ಧವನ್ ಅವರು ಎರಡನೇ ಬಾರಿಗೆ ನೆಟ್ ಅಭ್ಯಾಸಕ್ಕೆ ಇಳಿದರು. ಇದನ್ನು ಗಮನಿಸಿದರೆ, ಸ್ಥಳೀಯ ಆಟಗಾರ ಮುರಳಿ ವಿಜಯ್ ಅಥವಾ ಧವನ್ ಅವರಲ್ಲಿ ಯಾರನ್ನು ಆರಂಭಿಕರನ್ನಾಗಿ ಕಳುಹಿಸಬೇಕು ಎಂಬ ಗೊಂದಲದಲ್ಲಿ ತಂಡದ ಆಡಳಿತ ಮಂಡಳಿ ಸಿಲುಕಿರುವುದು ಸ್ಪಷ್ಟವಾಗಿತ್ತು.
ಆದರೆ, ಇನ್ನೊಬ್ಬ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಸರಣಿಯಲ್ಲಿ ಎದುರಾಳಿ ಆಸೀಸ್‌ಗೆ ನೆರವಾಗಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ. ಪಂದ್ಯದ ಹಿನ್ನೆಲೆಯಲ್ಲಿ ಚೆನ್ನೈನ ಚೇಪಾಕ್ ಮೈದಾನದಲ್ಲಿ ಎಂದಿನಂತೆ ಭಾರತ ತಂಡದ ಆಟಗಾರರು ಅಭ್ಯಾಸಕ್ಕಿಳಿದಿದ್ದರು. ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ತಕ್ಕ ಅಭ್ಯಾಸ ನಡೆಸಿದರು.
ಮೂವರು ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಇಶಾಂತ್ ಶರ್ಮಾ ಅವರು ನೆಟ್‌ನಲ್ಲಿ ದೀರ್ಘ ಕಾಲದವರೆಗೆ ಅಭ್ಯಾಸ ನಡೆಸಿದರು. ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಅವರು ಹೆಚ್ಚು ಹೊತ್ತು ಅಭ್ಯಾಸ ನಡೆಸಿದರೆ, ರವಿಚಂದ್ರನ್ ಅಶ್ವಿನ್ ಹಾಗೂ ಪ್ರಗ್ಯಾನ್ ಓಜಾ ಅವರು ಸಚಿನ್ ತೆಂಡೂಲ್ಕರ್, ಚೇತೇಶ್ವರ ಪೂಜಾರ್ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಬೌಲಿಂಗ್ ಮಾಡಿದರು.
ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸಹ ನೆಟ್‌ನಲ್ಲಿ ಚೆಂಡನ್ನು ಎಸೆದರು. ಆದರೆ, ಇತರ ಸ್ಪಿನ್ನರ್‌ಗಳಿಗೆ ಹೋಲಿಸಿದರೆ ಅವರು ಹೆಚ್ಚು ಹೊತ್ತು ಬೌಲಿಂಗ್ ಮಾಡಲಿಲ್ಲ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಶುಕ್ರವಾರ ಚೆನ್ನೈನಲ್ಲಿ ನಡೆಯಲಿದೆ.
ಕಳೆದ ಋತುವಿನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡ ಸ್ಥಿರ ಪ್ರದರ್ಶನ ನೀಡಿಲ್ಲವಾದ್ದರಿಂದ, ಆಸೀಸ್ ವಿರುದ್ಧ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ.

ಮೊದಲ ಟೆಸ್ಟ್‌ಗೆ ಆಸೀಸ್ ತಂಡ ಪ್ರಕಟ
ಚೆನೈ:
ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಆಡುವರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಮೊದಲ ಟೆಸ್ಟ್ ಪಂದ್ಯ ಶುಕ್ರವಾರ ಆರಂಭವಾಗಲಿದ್ದು, ಬುಧವಾರ ಆಸ್ಟ್ರೇಲಿಯಾ ತಂಡ ಆಡುವ 11 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಳೆದ ತಿಂಗಳಿನಿಂದ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ಬಳಲುತಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ಎಲ್ಲರಲ್ಲೂ ಅನುಮಾನ ಮೂಡಿಸಿತ್ತು. ಗುಣಮುಖರಾಗುತ್ತಿರುವ ವಾರ್ನರ್ ತಮ್ಮ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದು, ಮೊದಲ ಟೆಸ್ಟ್ ಆರಂಭದ ವೇಳೆಗೆ ಸಂಪೂರ್ಣ ಗುಣಮುಖರಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾನು ಮೊದಲ ಪಂದ್ಯದಲ್ಲಿ ಆಡುವ ಭರವಸೆ ಇದೆ. ಅಭ್ಯಾಸದ ವೇಳೆ ನಾನು ಚೆಂಡನ್ನು ಉತ್ತಮವಾಗಿ ಹಿಡಿಯುತ್ತಿದ್ದೆ, ಆಗಾಗ ಸ್ವಲ್ಪ ನೋವು ಕಾಣಿಸಿಕೊಂಡಿತು. ಮೊದಲ ಟೆಸ್ಟ್ ಪಂದ್ಯದ ವೇಳೆ ಹೆಬ್ಬೆರಳಿಗೆ ಹೆಬ್ಬೆರಳಿಗೆ ರಕ್ಷಕವನ್ನು ಹಾಕಿಕೊಳ್ಳುತ್ತೇನೆ ಎಂದು ವಾರ್ನರ್ ತಿಳಿಸಿದರು.
ಇನ್ನು ತಂಡದಲ್ಲಿ ಮ್ಯಾಕ್ಸ್‌ವೆಲ್ ಬದಲಿಗೆ ವೇಗಿ ಮೊಯ್ಸಸ್ ಹೆನ್ರಿಕ್ಸ್ ಅವರನ್ನು ಕಣಕ್ಕಿಳಿಸಲು ಕಾಂಗರೂ ಪಡೆ  ನಿರ್ಧರಿಸಿದೆ. ಹೀಗಾಗಿ ಇಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಹೆನ್ರಿಕ್ಸ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ.
ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ಮೂರನೇ ವೇಗಿಯಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಮಿಚೆಲ್ ಸ್ಟಾರ್ಕ್ ಹಾಗೂ ಪೀಟರ್ ಸಿಡ್ಲ್ ಜತೆಗೆ  ಹೆನ್ರಿಕ್ಸ್ ವೇಗದ ಬೌಲಿಂಗ್ ವಿಭಾಗವನ್ನು ಸೇರಿಕೊಳ್ಳಲಿದ್ದಾರೆ.
ಮೂರು ವೇಗಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಆಸೀಸ್, ತಂಡದ ಪ್ರಮುಖ ಸ್ಪಿನ್ನರ್ ನಾಥನ್ ಲಿಯೊನ್ ಅವರನ್ನು ಮಾತ್ರ ಕಣಕ್ಕಿಳಿಸಲಿದೆ. ಲಿಯೊನ್ ಜತೆಗೆ ನಾಯಕ ಮೈಕಲ್ ಕ್ಲಾರ್ಕ್ ಹಾಗೂ ಡೇವಿಡ್ ವಾರ್ನರ್ ಸ್ಪಿನ್ ವಿಭಾಗವನ್ನು ತುಂಬುವ ಸಾಧ್ಯತೆಗಳಿದೆ.
ಎರಡು ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಉತ್ತಮ ಬೌಲಿಂಗ್ ಮಾಡಿರುವ ಹೆನ್ರಿಕ್ಯೂಸ್, ಕ್ರಮವಾಗಿ 16 ಹಾಗೂ 33 ರನ್‌ಗಳಿಸಿದ್ದು, ಬೌಲಿಂಗ್‌ನಲ್ಲಿ 12/4 ಹಾಗೂ 30/1 ವಿಕೆಟ್ ಪಡೆದು ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ.
ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಆಡಿದ 432ನೇ ಆಟಗಾರನಾಗಿ ಹೆನ್ರಿಕ್ಸ್ ತಿಳಿಸಿದ್ದಾರೆ.
ಇನ್ನು ಮ್ಯಕ್ಸ್‌ವೆಲ್, ಕ್ಸೆವಿಯರ್ ಡೋಹಾರ್ಟಿ ಹಾಗೂ ಆಶ್ಟಾನ್ ಆ್ಯಗರ್ ಅವರನ್ನು ಮೊದಲ ಪಂದ್ಯಕ್ಕೆ ಪರಿಗಣಿಸಲಾಗಿಲ್ಲ.
ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಹಾಗೂ ಎಡ್ ಕೊವನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ನಂತರ ಫಿಲ್ ಹ್ಯೂಸ್, ಶೇನ್ ವಾಟ್ಸನ್, ಮೈಕಲ್ ಕ್ಲಾರ್ಕ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಕಾಂಗರೂ ಪಡೆ: ಮೈಕಲ್ ಕ್ಲಾರ್ಕ್ (ನಾಯಕ), ಎಡ್ ಕೊವನ್, ಮೊಸಿಸ್ ಹೆನ್ರಿಕ್ಸ್, ಫಿಲ್ ಹ್ಯೂಸ್, ನಾಥನ್ ಲಿಯೊನ್, ಜೇಮ್ಸ್ ಪ್ಯಾಟಿನ್ಸನ್, ಪೀಟರ್ ಸಿಡ್ಲ್, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಶೇನ್ ವಾಟ್ಸನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement