ಕರ್ನಾಟಕ ದಕ್ಷಿಣ ವಲಯ ಚಾಂಪಿಯನ್
ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಆಂಧ್ರಪ್ರದೇಶ ವಿರುದ್ಧ 1 ವಿಕೆಟ್ ಜಯ; ವಿನಯ್ಗೆ 4 ವಿಕೆಟ್, ರಾಹುಲ್ 75
ಗೋವಾ: ಅದ್ಭುತ ಪ್ರದರ್ಶನ ನೀಡಿದ ಕರ್ನಾಟಕ ತಂಡ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ದಕ್ಷಿಣ ವಲಯ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಬುಧವಾರ ಆಂಧ್ರಪ್ರದೇಶದ ವಿರುದ್ಧ ನಡೆದ ಪಂದ್ಯದಲ್ಲಿ 1 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಇದುವರೆಗೂ ಆಡಿದ ಐದೂ ಪಂದ್ಯಗಳಲ್ಲಿ ಜಯ ಸಾಧಿಸಿದ ಕರ್ನಾಟಕ ತಂಡ ದಕ್ಷಿಣ ವಲಯ ಚಾಂಪಿಯನ್ ಎನಿಸಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಸಂಘಟಿತ ಪ್ರದರ್ಶನ ನಡೆಸಿತು. ಆಂಧ್ರ ಪ್ರದೇಶದ ಪರ ಇನಿಂಗ್ಸ್ ಆರಂಭಿಸಿದ ಭರತ್ ಹಾಗೂ ಪ್ರಶಾಂತ್ ಜೋಡಿ ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲಲು ಕರ್ನಾಟಕ ತಂಡ ಬಿಡಲಿಲ್ಲ. ತಂಡದ ಮೊತ್ತ 10 ಆಗಿರುವಾಗ ಭರತ್ ಅವರ ವಿಕೆಟ್ ಪಡೆದ ವಿನಯ್ ಕುಮಾರ್ ಈ ಜೋಡಿಯನ್ನು ಬೇರ್ಪಡಿಸಿದರು.
ನಂತರ ಪ್ರಶಾಂತ್ ಹಾಗೂ ಸುಮಂತ್ ಜತೆಗೂಡಿ ತಂಡಕ್ಕೆ 46 ರನ್ಗಳ ಜತೆಯಾಟ ನೀಡಿ ಉತ್ತಮ ಬ್ಯಾಟಿಂಗ್ ನಡೆಸುವ ಸೂಚನೆ ನೀಡಿತಾದರು, ಈ ವೇಳೆ ದಾಳಿಗಿಳಿದ ಮಿಥುನ್ 22 ರನ್ಗಳಿಸಿದ್ದ ಪ್ರಶಾಂತ್ ವಿಕೆಟ್ ಪಡೆಯುವ ಮೂಲಕ ಮತ್ತೇ ರಾಜ್ಯ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಈ ವೇಳೆ ಮಜೂಮ್ದಾರ್ ಹಾಗೂ ಸುಮಂತ್ ಕೂಡ ಉತ್ತಮ ಆರಂಭ ಪಡೆಯಿತು. ತಂಡದ ಮೊತ್ತ 91 ರನ್ ಆಗಿದ್ದಾಗ 39 ರನ್ ಗಳಿಸಿದ್ದ ಸುಮಂತ್ ಅವರ ವಿಕೆಟ್ ಪಡೆದ ಅಪ್ಪಣ್ಣ ಈ ಜೋಡಿಯನ್ನು ಅಗಲಿಸಿದರು. ನಂತರ ಬಂದ ನಾಯಕ ಪ್ರದೀಪ್, ಮಜೂಮ್ದಾರ್ ಜತೆಗೂಡಿ 49 ರನ್ ಕಲೆಹಾಕಿದರು. ಈ ವೇಳೆ 39 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಮಜೂಮ್ದಾರ್, ಬಿನ್ನಿ ಹಾಗೂ ಕೀಪರ್ ಗೌತಮ್ ಅವರ ಉತ್ತಮ ಕ್ಷೇತ್ರ ರಕ್ಷಣೆಯಿಂದಾಗಿ ರನೌಟ್ ಆದರು.
ನಂತರ 55 ರನ್ಗಳಿಸಿದ್ದ ನಾಯಕ ಪ್ರದೀಪ್ ಕೂಡ ವಿನಯ್ ಕುಮಾರ್ ಎಸೆತದಲ್ಲಿ ಗೌತಮ್ಗೆ ಕ್ಯಾಚ್ ನೀಡಿದರು. ನಂತರ ಜ್ಞಾನೇಶ್ವರ ರಾವ್ 15 ರನ್ಗಳಿಸಿ ಮಿಥುನ್ಗೆ ಬೌಲ್ಡ್ ಆದರೆ, ಶಹಬುದ್ದೀನ್ 3 ರನ್ಗಳಿಸಿ ವಿನಯ್ ಕುಮಾರ್ ಎಸೆತದಲ್ಲಿ ಬೌಲ್ಡ್ ಆದರು. ಆನಂತರ ಪ್ರವೀಣ್ 3 ರನ್ಗಳಿಸಿ ಮಿಥುನ್ ಎಸೆತದಲ್ಲಿ ಕಾಟ್ ಅಂಡ್ ಬೌಲ್ ಆದರು. ಅಂತಿಮವಾಗಿ 228 ರನ್ ಗಳಿಸಿ ಸರ್ವಪತನ ಕಂಡಿತು.
ಆಂಧ್ರಪ್ರದೇಶ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ತಂಡ ಉತ್ತಮ ಆರಂಭವನ್ನೆ ಪಡೆಯಿತಾದರೂ, ಕೇವಲ ಒಂದು ವಿಕೆಟ್ ಜಯ ಸಾಧಿಸಿತು.
ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೆ.ಎಲ್.ರಾಹುಲ್ ಹಾಗೂ ರಾಬಿನ್ ಉತ್ತಪ್ಪ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿತು. ಮೊದಲ ವಿಕೆಟ್ಗೆ ಈ ಜೋಡಿ 91 ರನ್ ಕಲೆಹಾಕಿತು. ಈ ವೇಳೆ 43 ಎಸೆತಗಳಲ್ಲಿ 50 ರನ್ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಉತ್ತಪ್ಪ, ಸ್ವರೂಪ್ ಕುಮಾರ್ ಎಸೆತದಲ್ಲಿ ಜ್ಞಾನೇಶ್ವರ್ಗೆ ಕ್ಯಾಚ್ ನೀಡಿದರು.
ನಂತರ ರಾಹುಲ್ ಜತೆಗೂಡಿದ ನಾಯಕ ಬಿನ್ನಿ ತಂಡಕ್ಕೆ 56 ರನ್ಗಳ ಜತೆಯಾಟ ವಾಡಿದರು. ಈ ವೇಳೆ 25 ರನ್ಗಳಿಸಿದ್ದ ಬಿನ್ನಿ, ವಿಜಯ್ಕುಮಾರ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದು ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.
ನಂತರ ಕೆಲ ಹೊತ್ತಿನಲ್ಲೆ 95 ಎಸೆತಗಳಲ್ಲಿ 75 ರನ್ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್, ಸ್ವರೂಪ್ ಎಸೆತದಲ್ಲಿ ಎಲ್ಬಿಗೆ ಬಲಿಯಾದರು.
ಆನಂತರ ಜತೆಯಾದ ಪಾಂಡೆ 21 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ಮಿಥುನ್ ತಂಡದ ಮೊತ್ತ 196 ರನ್ ಆಗಿರುವಾಗ ಔಟಾದರು. ಮಿಥುನ್ ಹಿಂದೆಯೇ ಕರುಣ್ ನಾಯರ್ 0 ರನ್ಗಳಿಸಿ ಔಟಾದರು. ಇದಾದ ನಂತರ 20 ರನ್ಗಳಿಸಿದ್ದ ಗೌತಮ್ ಕೂಡ ಔಟಾದರು.
ಈ ವೇಳೆ ರಾಜ್ಯ ತಂಡ 209 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತು. ನಂತರ ವಿನಯ್ ಹಾಗೂ ನಿನಾನ್ ಕೂಡ ಕ್ರಿಸ್ನಲ್ಲಿ ನಿಲ್ಲಲಿಲ್ಲ.
ಆಗ ಕರ್ನಾಟಕ ತಂಡ 223ರನ್ ಕಳೆದುಕೊಂಡು 9 ವಿಕೆಟ್ ಕಳೆದುಕೊಂಡಿತು. ಈ ವೇಳೆ ಆಡುತ್ತಿದ್ದ ರಾಜು ಭಟ್ಕಳ್ ಹಾಗೂ ಅಪ್ಪಣ್ಣ ಕ್ರಮವಾಗಿ 13 ಹಾಗೂ 4 ರನ್ಗಳಿಸಿ ಅಜೇಯರಾಗುಳಿಯುವ ಮೂಲಕ, 2 ಎಸೆತಗಳು ಬಾಕಿ ಇರುವಂತೆಯು ಕರ್ನಾಟಕ 1 ವಿಕೆಟ್ ಅಂತರದ ಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್
ಆಂಧ್ರ ಪ್ರದೇಶ 228/10 (48 ಓ.)
ಪ್ರದೀಪ್ 55 (49)
ಮಜೂಮ್ದಾರ್ 39 (53)
ಬೌಲಿಂಗ್: ವಿನಯ್ 38/4, ಮಿಥುನ್ 42/3
ಕರ್ನಾಟಕ 229/9 (49.4 ಓ.)
ರಾಹುಲ್ 75 (95)
ಉತ್ತಪ್ಪ 50 (43)
ಬೌಲಿಂಗ್: ಸುಧಾಕರ್ 49/3, ಪ್ರವೀಣ್ 41/2