ಭಾರತಕ್ಕೆ 2ನೇ ಜಯ
ಸಾಂಘಿಕ ಹೋರಾಟ ನಡೆಸಿದ ಭಾರತ ತಂಡ 2ನೇ ಸುತ್ತಿನ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಬುಧವಾರ ಒಮನ್ ವಿರುದ್ಧ 9-1 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತು.
ನವದೆಹಲಿ: ಸಾಂಘಿಕ ಹೋರಾಟ ನಡೆಸಿದ ಭಾರತ ತಂಡ 2ನೇ ಸುತ್ತಿನ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಬುಧವಾರ ಒಮನ್ ವಿರುದ್ಧ 9-1 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತು.
ಉಪ ನಾಯಕ ವಿ.ಆರ್ ರಘುನಾಥ್, ರೂಪಿಂದರ್ ಪಾಲ್ ಸಿಂಗ್ ಹಾಗೂ ನಿತಿನ್ ತಿಮ್ಮಯ್ಯ ಅವರು ತಲಾ ಎರಡು ಗೋಲು ದಾಖಲಿಸುವುದರೊಂದಿಗೆ, ತಂಡ ಪಂದ್ಯಾವಳಿಯಲ್ಲಿ ಸತತ ಎರಡನೇ ಬಾರಿಗೆ ಜಯ ದಾಖಲಿಸಿತು.
ರಘುನಾಥ್ ಪಂದ್ಯದ 3ನೇ ಮತ್ತು 40ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ರೂಪಿಂದರ್ 14ನೇ ಮತ್ತು 38ನೇ ನಿಮಿಷದಲ್ಲಿ, ನಿತಿನ್ 16ನೇ ಮತ್ತು 60ನೇ ನಿಮಿಷದಲ್ಲಿ ಗೋಲು ಕಲೆ ಹಾಕುವಲ್ಲಿ ಯಶಸ್ವಿಯಾದರು.
ಇನ್ನು ಧರ್ಮವೀರ ಸಿಂಗ್ (20ನೇ ನಿಮಿಷ), ಪಂದ್ಯಕ್ಕ ಪದಾರ್ಪಣೆ ಮಾಡಿದ ಮಂದೀಪ್ ಸಿಂಗ್ (42ನೇ ನಿಮಿಷ) ಹಾಗೂ ಗುರ್ಜಿಂದರ್ ಸಿಂಗ್ 65ನೇ ನಿಮಿಷದಲ್ಲಿ ತಲಾ ಒಂದು ಗೋಲು ದಾಖಲಿಸಿದರು.
ಆದರೆ, ಎದುರಾಳಿ ದುರ್ಬಲ ಒಮನ್ ತಂಡದ ಪರ ಮೊಹ್ಮದ್ ಹಬಾಯಿಸ್ ಅಲ್ ಶರ್ ಅವರು ಏಕೈಕ ಗೋಲು ಗಳಿಸಿದರು.
ರ್ಯಾಂಕಿಂಗ್‌ನಲ್ಲಿ ಒಮನ್ ತಂಡಕ್ಕಿಂತ 21 ಸ್ಥಾನ ಮೇಲಿರುವ ಭಾರತ, ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಎನಿಸಿತ್ತು. ಒಮನ್ಸ್ ಆಟಗಾರರು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ, ಗೋಲು ಗಳಿಸುವ ಅವಕಾಶ ಸಿಕ್ಕಾಗ ಭಾರತದ ರಕ್ಷಣಾ ವಿಭಾಗವನ್ನು ಎದುರಿಸುವ ಸಾಮರ್ಥ್ಯದಲ್ಲಿ ಅವರು ವೈಫಲ್ಯ ಕಾಣುತ್ತಿದ್ದರು.
ಪಂದ್ಯದ ಆರಂಭದಲ್ಲಿ ಗೋಲು ದಾಖಲಿಸಲು ಭಾರತಕ್ಕೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಪಂದ್ಯದ 3ನೇ ನಿಮಿಷದಲ್ಲೇ ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರಘುನಾಥ್ ಗೋಲು ಖಾತೆ ತೆರದರು.
ನಂತರ ಗೋಲು ದಾಖಲಿಸಿದ ರೂಪಿಂದರ್ ಮತ್ತು ನಿತಿನ್ ಭಾರತ ಭಾರತಕ್ಕೆ 3-0 ಅಂತರದ ಮುನ್ನಡೆ ತಂದುಕೊಟ್ಟರು.
ಮಂದೀಪ್ ಪಾಸ್ ಮಾಡಿದ ಚೆಂಡು ಕಠಿಣ ಸ್ಥಿತಿಯಲ್ಲಿದ್ದರೂ, ಗೋಲು ಗಳಿಸುವಲ್ಲಿ ಯಶಸ್ವಿಯಾದ ಧರ್ಮವೀರ್ ಅವರು ಗೋಲು ಪಟ್ಟಿಯಲ್ಲಿ ತಮ್ಮ ಹೆಸರು ದಾಖಲಿಸಿದರು.
ಪಂದ್ಯದ 35ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಒಮನ್‌ನ ಅಲ್ ಶರ್, ಭಾರತದ ಗೋಲ್‌ಕೀಪರ್ ಪಿ. ಆರ್ ಶ್ರೀಜೇಶ್ ಅವರನ್ನು ವಂಚಿಸುವ ಮೂಲಕ ಗೋಲು ದಾಖಲಿಸಿದರು. ಆಗ ಒಮನ್ ಮೊದಲಾರ್ಧ ಪಂದ್ಯದಲ್ಲಿ 1-4 ಅಂತರ ಕಂಡುಕೊಂಡು ನಿಟ್ಟಿಸಿರು ಬಿಟ್ಟಿತು.
ದ್ವಿತೀಯಾರ್ಧದಲ್ಲಿ ಗೋಲು ಗಳಿಸುವ ತಮ್ಮ ಬರಾಟೆಯನ್ನು ಮುಂದುವರಿಸಿದ ಭಾರತ ತಂಡ ಒಮನ್ ತಂಡಕ್ಕೆ ಅವಕಾಶವನ್ನೇ ನೀಡಲಿಲ್ಲ. ದ್ವಿತೀಯಾರ್ಧ ಪಂದ್ಯದ ಆರಂಭದಲ್ಲೇ ರಘುನಾಥ್ ಮತ್ತು ರೂಪಿಂದರ್ ಸಿಂಗ್ ಅವರು ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಗೋಲು ದಾಖಲಿಸಿದರು. ಇದರೊಂದಿಗೆ ಪಂದ್ಯದಲ್ಲಿ ಭಾರತ ಹೆಚ್ಚಿನ ಅಂತರದಿಂದ ಮುನ್ನಡೆ ಕಂಡುಕೊಂಡಿತು.
ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಮಂದೀಪ್ ಸಿಂಗ್ ಅವರು ಪಂದ್ಯದ 42ನೇ ನಿಮಿಷದಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ಖಾತೆ ತೆರೆದರು.
ನಂತರ 60ನೇ ನಿಮಿಷದಲ್ಲಿ ನಿತಿನ್ ತಮ್ಮ 2ನೇ ಗೋಲು ದಾಖಲಿಸಿದರು. ಆಗ ಐದು ನಿಮಿಷಗಳ ನಂತರ ಗುರ್ಜಿಂದರ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಬರುವಂತೆ ನೋಡಿಕೊಂಡರು. ಇದು ತಂಡ ಹೆಚ್ಚಿನ ಅಂತರದಿಂದ ವಿಜಯ ಸಾಧಿಸಲು ನೆರವಾಯಿತು.
ಈ ವಿಜಯದೊಂದಿಗೆ ಭಾರತ ಪಂದ್ಯಾವಳಿಯಲ್ಲಿ 6 ಪಾಯಿಂಟ್ ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದೆ. ಭಾರತ ಗುರುವಾರ ನಡೆಯಲಿರುವ ಪಂದ್ಯದಲ್ಲಿ 15ನೇ ರ್ಯಾಂಕಿಂಗ್ ಹೊಂದಿರುವ ಐರ್ಲೆಂಡ್ ವಿರುದ್ಧ ಸೆಣಸಲಿದೆ. ಪಂದ್ಯದಲ್ಲಿ ಅತ್ಯಾಕರ್ಷಕ ಪ್ರದರ್ಶನ ನೀಡಿದ ಸರ್ದಾರ್ ಸಿಂಗ್ ಅವರು ಪಂದ್ಯಶ್ರೇಷ್ಠರೆನಿಸಿದರು. ಭಾರತ ಮತ್ತು ಒಮನ್ ಪಂದ್ಯಕ್ಕಿಂತ ಮುನ್ನ ನಡೆದ ದಿನದ ಇತರ ಪಂದ್ಯಗಳಲ್ಲಿ ಐರ್ಲೆಂಡ್ ತಂಡ ಫಿಜಿಯನ್ನು 13-0 ಅಂತರದಿಂದ ಸೋಲಿಸಿದರೆ, ಬಾಂಗ್ಲಾದೇಶ ತಂಡ ಚೀನಾ ವಿರುದ್ಧ 3-2 ಗೋಲುಗಳಿಂದ ಜಯ ಕಂಡುಕೊಂಡಿತು.