ಇಕ್ಕಟ್ಟಿನಲ್ಲಿ ಭಾರತ ಅಥ್ಲೀಟ್ಗಳು
ಏಷ್ಯನ್ ಚಾಂಪಿಯನ್ಷಿಪ್ಗಳಿಂದ ಭಾರತೀಯರು ಹೊರಗುಳಿಯುವ ಸಾಧ್ಯತೆ
ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೋಸಿಯೇಷನ್ ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ, ಮುಂಬರುವ ಎರಡು ಪ್ರಮುಖ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗಳಿಂದ ಭಾರತೀಯ ಅಥ್ಲೀಟ್ಗಳು ಹೊರಗುವಳಿಯುವ ಸಾಧ್ಯತೆಗಳಿವೆ.
ಹೀಗಾಗಿ ಭಾರತೀಯ ಅಥ್ಲೀಟ್ಗಳು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದು, ಮುಂದೇನಾಗುತ್ತದೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ.
ಏಷ್ಯನ್ ಯೂತ್ ಗೇಮ್ಸ್ ಮತ್ತು ಏಷ್ಯನ್ ಯೂತ್ ಒಳಾಂಗಣ ಕ್ರೀಡಾಕೂಟಕ್ಕಾಗಿ ತುಂಬಾ ಹಿಂದೇಯ ಪ್ರವೇಶ ಆರಂಭವಾಗಿದ್ದರೂ, ಯಾವುದೇ ಭಾರತೀಯ ಅಥ್ಲೀಟ್ಗಳ ಹೆಸರುಗಳನ್ನು ಅಲ್ಲಿಗೆ ಕಳುಹಿಸಿಕೊಡಲಾಗಿಲ್ಲ.
ಭಾರತೀಯ ಅಥ್ಲೀಟ್ಗಳು ಒಂದು ವೇಳೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕಾದರೆ, ದೇಶವನ್ನು ಪ್ರತಿನಿಧಿಸುವಂತಿಲ್ಲ. ಆದರೆ, ಏಷ್ಯನ್ ಒಲಿಂಪಿಕ್ಸ್ ಕೌನ್ಸಿಲ್ ಪ್ರತಿನಿಧಿಸುವ ಮೂಲಕ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಆದರೆ, ನಿಗದಿಗೊಳಿಸಿದ್ದ ದಿನಾಂಕದೊಳಗೆ ಯಾವುದೇ ಭಾರತೀಯ ಅಥ್ಲೀಟ್ಗಳು ಪ್ರವೇಶ ಪಡೆದಿಲ್ಲ. ಹೀಗಾಗಿ ಈ ಎರಡು ಪ್ರಮುಖ ಕ್ರೀಡಾಕೂಟಗಳಲ್ಲಿ ಭಾರತೀಯ ಅಥ್ಲೀಟ್ಗಳು ಭಾಗವಹಿಸುವುದು ಅನುಮಾನ ಮೂಡಿಸಿದೆ.
2ನೇ ಏಷ್ಯನ್ ಯೂತ್ ಕ್ರೀಡಾಕೂಟ ಚೀನಾದ ನಿಂಜಿಂಗ್ನಲ್ಲಿ ಆಗಸ್ಟ್ 16ರಿಂದ 24ರವರೆಗೆ ನಡೆದರೆ, 4ನೇ ಏಷ್ಯನ್ ಯೂತ್ ಒಳಾಂಗಣ ಕ್ರೀಡಾಕೂಟ ದಕ್ಷಿಣ ಕೊರಿಯಾದ ಇಂಚೆಯೋನ್ನಲ್ಲಿ ಜೂನ್ 29ರಿಂದ ಜುಲೈ 6ರವರೆಗೆ ನಡೆಯಲಿದೆ.
ಯೂತ್ ಗೇಮ್ಸ್ನ ಮೊದಲ ಆವೃತ್ತಿ 2009ರಲ್ಲಿ ಸಿಂಗಾಪುರದಲ್ಲಿ ನಡೆದಿತ್ತು. ಕ್ರೀಡಾಕೂಟದ 11 ವಿಭಾಗಗಳಲ್ಲಿ ಒಟ್ಟು 1300 ಅಥ್ಲೀಟ್ಗಳು ಬಾಗವಹಿಸಿದ್ದರು.
ಫೆನ್ಸಿಂಗ್ ತಂಡಕ್ಕೂ ಅಡ್ಡಿ
ನವದೆಹಲಿ: ಥಾಯ್ಲೆಂಡ್ನಲ್ಲಿ ನಡೆಯಲಿರುವ ಏಷ್ಯಾ ಜೂನಿಯರ್ ಮತ್ತು ಕೆಡೆಟ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಲು ಅನುಮತಿ ದೊರಕದೇ ಭಾರತ ಫೆನ್ಸಿಂಗ್ ತಂಡ ಇಕ್ಕಟ್ಟಿನಲ್ಲಿ ಸಿಲುಕಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಭಾರತದ ಮೇಲೆ ನಿಷೇಧ ಹೇರಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಸರ್ಕಾರ ಹಣಕಾಸು ನೆರವನ್ನು ನಿಲ್ಲಿಸುವ ಸಾಧ್ಯತೆಗಳಿವೆ. ಕಳೆದ ಡಿಸೆಂಬರ್ನಲ್ಲಿ ಐಒಸಿ ಭಾರತದ ಮೇಲೆ ನಿಷೇಧ ಹೇರಿತ್ತು. ಹೀಗಾಗಿ ಅಂತಾರಾಷ್ಟ್ರೀಯ ಫೆನ್ಸಿಂಗ್ ಫೆಡರೇಷನ್ ಭಾರತದ ಫೆನ್ಸಿಂಗ್ ಫಡರೇಷನ್ ಅನ್ನು ಅಮಾನತುಗೊಳಿಸಿದೆ. ಆದರೆ, ಏಷ್ಯಾ ಫೆನ್ಸಿಂಗ್ ಫೆಡರೇಷನ್ ಕಾನ್ಫೆಡರೇಷನ್ (ಎಫ್ಸಿಎ) ಪ್ರತಿನಿಧಿಸುವ ಮೂಲಕ ಭಾರತ, ಮಾರ್ಚ್ 2ರಿಂದ 11ರವರೆಗೆ ಥಾಯ್ಲೆಂಡ್ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಬಾಗವಹಿಸಲು ಅನುಮತಿ ನೀಡಲಾಗಿದೆ. ಒಂದು ವೇಳೆ ಫೆನ್ಸಿಂಗ್ ತಂಡ ಚಾಂಪಿಯನ್ಷಿಪ್ನಲ್ಲಿ ಎಫ್ಸಿಎ ಪ್ರತಿನಿಧಿಸುವ ಮೂಲಕ ಭಾಗವಹಿಸಿದರೆ, ಕ್ರೀಡಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಪ್ರತಿನಿಧಿಸದಂತಾಗುತ್ತದೆ. ಚಾಂಪಿಯನ್ಷಿಪ್ಗೆ ಕೇವಲ ಒಂದು ವಾರ ಬಾಕಿ ಉಳಿದಿದ್ದು, ಫೆನ್ಸಿಂಗ್ ತಂಡದ ಮನವಿಗೆ ಸರ್ಕಾರ ಇದುವರೆಗೂ ಓಗೊಟ್ಟಿಲ್ಲ. ಹೀಗಾಗಿ ತಂಡ ಎಫ್ಸಿಎ ಪ್ರತಿನಿಧಿಸಬೇಕೆ ಅಥವಾ ಖಾಸಗಿ ಪ್ರಯೋಜಕರನ್ನು ಹುಡುಕಿಕೊಳ್ಳಬೇಕೆ ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಭಾರತೀಯ ಫೆನ್ಸಿಂಗ್ ಸಂಸ್ಥೆಗೆ ಸರ್ಕಾರದಿಂದ ಹಣಕಾಸಿನ ನೆರವು ದೊರಕುತ್ತಿಲ್ಲ.