ಏಷ್ಯನ್ ಅಥ್ಲೆಟಿಕ್ಸ್: ಆತಿಥ್ಯ ನಿರಾಕರಿಸಿದ ತಮಿಳುನಾಡು
ಚೆನೈ: ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಪುತ್ರನನ್ನು ಹತ್ಯೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಜುಲೈನಲ್ಲಿ ನಡೆಯಬೇಕಿದ್ದ 20ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗೆ ತಮಿಳುನಾಡು ಆತಿಥ್ಯವಹಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಿಳಿಸಿದ್ದಾರೆ. ಶ್ರೀಲಂಕಾದ ಆಟಗಾರರು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ
ಈ ಕುರಿತು ಸಿಂಗಪುರದಲ್ಲಿರುವ ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್ಗೆ ಪತ್ರ ಬರೆದಿರುವ ಜಯಲಲಿತಾ, ಶ್ರೀಲಂಕಾ ಸರ್ಕಾರ ಅಲ್ಲಿನ ತಮಿಳು ಅಲ್ಪ ಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದೆ. ಶ್ರೀಲಂಕಾದ ಆಟಗಾರರ ಆಗಮನದಿಂದ ತಮಿಳುನಾಡಿನ ಜನರ ಭಾವನೆಗೆ ಧಕ್ಕೆಯುಂಟಾಗುವುದರಿಂದ ಆ ಆಟಗಾರರನ್ನು ತಡೆಯಬೇಕು ಎಂದು ತಿಳಿಸಿದ್ದಾರೆ.
12 ವರ್ಷದ ಬಾಲಚಂದ್ರನ್ ಅವರನ್ನು ಶ್ರೀಲಂಕಾ ಸೈನಿಕರು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಇದೊಂದು ಅಮಾನವೀಯ ಕೃತ್ಯ ಎಂದು ಖಂಡಿಸಿದ್ದರು.
ತಮಿಳುನಾಡಿನ ನಿರ್ಧಾರವನ್ನು ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಶ್ರೀಲಂಕಾ ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ತಿಳಿಸಲಾಗಿದೆ ಎಂದು ಜಯಲಲಿತಾ ತಿಳಿಸಿದ್ದಾರೆ.
ಈ ವಿಷಯ ಕುರಿತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗೆ ಪತ್ರಗಳ ಮೂಲಕ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದ್ದು, ಇದುವರೆಗೂ ಅಸೋಸಿಯೇಷನ್ನಿಂದ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಈ ಕ್ರೀಡಾಕೂಟವನ್ನು ಆಯೋಜಿಸುವ ನಿರ್ಧಾರವನ್ನು ಕೈಬಿಡಲಾಗಿದೆ ಎಂದು ಜಯಲಲಿತಾ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ), ತಮಿಳುನಾಡು ಸರ್ಕಾರ ಈ ಕ್ರೀಡಾಕೂಟವನ್ನು ಆಯೋಜಿಸಲು ಹಿಂದೆ ಸರಿದ ನಂತರ ಭಾರತದ ಇತರ ನಗರದಲ್ಲಿ ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ಆಯೋಜಿಸಲು ಸಂಪೂರ್ಣ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದೆ. ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಭಾರತದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಿದ್ದು, ಕ್ರೀಡಾಕೂಟವನ್ನು ಭಾರತದ ಬೇರೆ ನಗರದಲ್ಲಿ ಆಯೋಜಿಸಲು ಪ್ರಯತ್ನಿಸುತ್ತೇವೆ ಎಂದು ಎಎಫ್ಐ ತಿಳಿಸಿದೆ.