ಹಾವು ಏಣಿ ಆಟ ಆರಂಭ
ಇಂದಿನಿಂದ ಚೆನ್ನೈನಲ್ಲಿ ಭಾರತ- ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯ ಆರಂಭ
ಚೆನ್ನೈ: ಕಳೆದ ಋತುವಿನಲ್ಲಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದ್ದ ಭಾರತ ತಂಡ ಈ ಬಾರಿ ಉತ್ಸಾಹದಲ್ಲಿದ್ದು, ಶುಕ್ರವಾರ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯದ ನಿರೀಕ್ಷೆಯಲ್ಲಿದೆ. ನಾಲ್ಕು ಪಂದ್ಯಗಳ ರೋಚಕ ಸರಣಿಯ ಮೊದಲ ಕದನ ಇದಾಗಿದೆ.
ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 1-2 ಅಂತರದಿಂದ ಕೈಚೆಲ್ಲಿದ್ದ ಭಾರತ, ಆಸ್ಟ್ರೇಲಿಯಾ ವಿರುದ್ಧ ತವರಿನ ನೆಲದಲ್ಲಿ ಸಿಡಿದೇಳಲು ಎದುರು ನೋಡುತ್ತಿದೆ.
ಇನ್ನೊಂದೆಡೆ ಎದುರಾಳಿ ಆಸ್ಟ್ರೇಲಿಯಾ ಸರಣಿಯಲ್ಲಿ ಮೇಲುಗೈ ಸಾಧಿಸುವ ಮೂಲಕ ಇಂಗ್ಲೆಂಡ್ ಸಾಧನೆಯನ್ನು ಮೀರಿಸುವ ಇರಾದೆಯೊಂದಿಗೆ ಸರಣಿಗೆ ಆಗಮಿಸಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಸರಣಿಗಳಲ್ಲಿ ಹಲವಾರು ಸ್ಮರಣೀಯ ಪಂದ್ಯಗಳು ನಡೆದಿವೆ. ಈ ಬಾರಿಯ ಸರಣಿಯೂ ಇದಕ್ಕೆ ಹೊರತಾಗಿರುವುದಿಲ್ಲ ಎಂಬ ನಿರೀಕ್ಷೆಗಳಿವೆ.
ವಿಶ್ವ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಆಸೀಸ್ನ ಉತ್ತಮ ಬೌಲರ್ಗಳಾದ ಪೀಟರ್ ಸಿಡ್ಲ್, ಮಿಚೆಲ್ ಸ್ಟಾರ್ಕ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ಅವರಿಂದ ಹೊಸ ಸವಾಲುಗಳನ್ನು ಎದುರಿಸಬೇಕಾಗಬಹುದು. ಸ್ಪಿನ್ನರ್ಗಳಾದ ಫಿಲ್ ಹ್ಯೂಸ್, ಮ್ಯಾಥ್ಯೂ ವೇಡ್, ಎಡ್ ಕೋವನ್ ಹಾಗೂ ಡೇವಿಡ್ ವಾರ್ನರ್ ಅವರು, ಭಾರತದ ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್ ಹಾಗೂ ಪ್ರಗ್ಯಾನ್ ಓಜಾ ಬೌಲಿಂಗ್ನ್ನು ಸಮರ್ಥ್ಯವಾಗಿ ಎದುರಿಸಬಲ್ಲ ಬ್ಯಾಟ್ಸ್ಮನ್ಗಳಾಗಿದ್ದಾರೆ.
ಆದರೆ, ಈಗಾಗಲೇ ಆಡುವ 11 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಆಸ್ಟ್ರೇಲಿಯಾ ಬೌಲರ್ಗಳ ಪಟ್ಟಿಯಲ್ಲಿ ಸ್ಪಿನ್ನರ್ ನಥಾನ್ ಲೇಯಾನ್ ಅವರನ್ನು ಮಾತ್ರ ಉಳಿಸಿಕೊಂಡಿದೆ.
ಪ್ರವಾಸಿ ತಂಡದಲ್ಲಿ ಸಿಡ್ಲ್ ನಾಯಕತ್ವದ ಮೂವರು ವೇಗಿಗಳಿದ್ದಾರೆ. ಮೊಯ್ಸಿಸ್ ಹೆನ್ರಿಕ್ಸ್ ಅವರು ಗ್ಲೆನ್ ಮ್ಯಾಕ್ಸ್ವೆಲ್ ಅವರ ಅವಕಾಶವನ್ನು ತಪ್ಪಿಸಿದ್ದಾರೆ. ಹೀಗಾಗಿ ಮ್ಯಾಕ್ಸ್ವೆಲ್ ತಂಡದಲ್ಲಿ 12ನೇ ಆಟಗಾರ ಎನಿಸಿದ್ದಾರೆ. ಹೆನ್ರಿಕ್ಸ್ ಅನುಭವಿ ಬೌಲಿಂಗ್ ಇದಕ್ಕೆ ಪ್ರಮುಖ ಕಾರಣವಾಗಿದೆ.
ಸೆಹ್ವಾಗ್ ಅವರೊಂದಿಗೆ ಆರಂಭಿಕರಾಗಿ ಯಾರು ಅಂಗಣಕ್ಕಿಳಿಯಲಿದ್ದಾರೆ ಎಂಬುದು ಹೆಚ್ಚು ಕುತೂಹಲ ಮೂಡಿಸಿದೆ.
ಮುರಳಿ ವಿಜಯ್ಗೆ ಚೆನ್ನೈ ತವರಿನ ಅಂಗಣ ಹೀಗಾಗಿ ಅವರು ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆಗಳು ಹೆಚ್ಚಿವೆ. ಇರಾನಿ ಟ್ರೋಫಿಯಲ್ಲಿ ಶತಕ ಸಿಡಿಸಿರುವುದು ಹಾಗೂ 12 ಟೆಸ್ಟ್ ಪಂದ್ಯಗಳನ್ನು ಆಡಿರುವುದು ವಿಜಯ್ ಪರಿಗಣಿಸಲು ನೆರವಾಗಬಹುದು. ಆದರೆ, ವಿಜಯ್ ಇದುವರೆಗೂ 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಏಕೈಕ ಶತಕ ಗಳಿಸಿದ್ದಾರೆ.
ಇನ್ನು ದೆಹಲಿ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಪ್ರಸಕ್ತ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಸೆಹ್ವಾಗ್ ಅವರೊಂದಿಗೆ ದೆಹಲಿ ತಂಡದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಧವನ್ ಎಡಗೈ ಬ್ಯಾಟ್ಸ್ಮನ್ ಆಗಿರುವುದರಿಂದ ಎಡಗೈ ಮತ್ತು ಬಲಗೈ ಜೋಡಿಯಾಗಿ ಈ ಇಬ್ಬರಿಗೆ ಅವಕಾಶ ದೊರಕಿದರೂ ದೊರಕಬಹುದು.
ಚೇತೇಶ್ವರ ಪೂಜಾರ, ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ 3ರಿಂದ 5ನೇ ಕ್ರಮಾಂಕದಲ್ಲಿ ಸ್ಥಾನ ಪಡೆಯಲಿದ್ದಾರೆ. ಆಸೀಸ್ ವಿರುದ್ಧ ಇನ್ನೊಂದು ಸ್ಮರಣೀಯ ಸಾಧನೆ ಮಾಡಲು ಸಚಿನ್ ಅವರಿಗೆ ಇದು ಶ್ರೇಷ್ಠ ಅವಕಾಶವಾಗಿದೆ. ಮಧ್ಯಮ ಕ್ರಮಾಕಂದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ಅಜಿಂಕ್ಯ ರಹಾನೆ ಅವರಲ್ಲಿ ತಂಡದ ಆಡಳಿತ ಮಂಡಳಿ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಮತ್ತೊಂದು ಕುತೂಹಲದ ಸಂಗತಿಯಾಗಿದೆ.
ಆಲ್ರೌಂಡ್ ಪ್ರದರ್ಶನ, ಜಡೇಜಾಗೆ ಅವಕಾಶ ಒದಗಿಸಿಕೊಡಬಹುದು. ಇನ್ನು ರಹಾನೆ ತಂಡದಲ್ಲಿರುವುದು ಆಸ್ಟ್ರೇಲಿಯಾ ಮೊನಚಾದ ಬೌಲಿಂಗ್ ಪಡೆ ಎದುರು ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿದೆ.
ಜಡೇಜಾ ತಂಡದಲ್ಲಿರುವುದು ಭಾರತ ಮೂವರು ಸ್ಪಿನ್ನರ್ಗಳೊಂದಿಗೆ ಮೈದಾನಕ್ಕಿಳಿಯುವ ಸೂಚನೆಯನ್ನು ನೀಡಿದೆ. ನಾಗ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಜಡೇಜಾ, ಅಶ್ವಿನ್, ಪಿಯೂಶ್ ಚಾವ್ಲಾ ಹಾಗೂ ಓಜಾ ಸೇರಿದಂತೆ ನಾಲ್ವರು ಸ್ಪಿನ್ನರ್ಗಳನ್ನು ಉಪಯೋಗಿಸಿಕೊಂಡಿತ್ತು. ಆದರೆ, ಅವರ್ಯಾರೂ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸರಲಿಲ್ಲ.
ಜಡೇಜಾ ಅವರನ್ನು ಆಯ್ಕೆ ಮಾಡಿಕೊಂಡರೆ, ಹರ್ಭಜನ್ ಅಥವಾ ಅಶ್ವಿನ್ ಅವರಲ್ಲಿ ಯಾರನ್ನು ಬಿಡುವುದು ಎಂಬುದು ನಾಯಕ ಧೋನಿಗೆ ಗೊಂದಲವಾಗಬಹುದು. ಅಶ್ವಿನ್ ಸ್ಥಳೀಯ ಆಟಗಾರನಾದರೆ, ಫಾರ್ಮ್ನಲ್ಲಿ ಇಲ್ಲ. ಹರ್ಭಜನ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಸ್ಪಷ್ಟವಿಲ್ಲ. ಆದರೆ, ಆಸ್ಟ್ರೇಲಿಯಾ ವಿರುದ್ಧ ಉತ್ತಮ ಯಶಸ್ಸು ಸಾಧಿಸಿರುವುದು ಅವರಿಗೆ ವರವಾಗಬಹುದು.
ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಜಹೀರ್ ಖಾನ್ ಅವರಂತೆ ರಿವರ್ಸ್ ಸ್ವಿಂಗ್ ಮಾಡಬಲ್ಲ ಬೌಲರ್ಗಳು ಭಾರತ ತಂಡದಲ್ಲಿ ಇಲ್ಲ. ಅಶೋಕ್ ದಿಂಡಾ ಕೊಂಚ ಆಸೀಸ್ ಬ್ಯಾಟ್ಸ್ಮನ್ಗಳನ್ನು ಕಾಡಬಹುದು. ಆದರೆ, ಭುನವೇಶ್ವರ ಕುಮಾರ್ ಎಸೆತದಲ್ಲಿ ವೇಗದಲ್ಲಿ ಕೊರತೆ ಹೊಂದಿದ್ದು, ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಹೀಗಾಗಿ ಇಶಾಂತ್ ಶರ್ಮಾ ಮೇಲೆ ಜವಾಬ್ದಾರಿ ಹೆಚ್ಚಿದೆ.
ಹರ್ಭಜನ್ಗೆ 100ನೇ ಟೆಸ್ಟ್
ಚೆನ್ನೈ: ಭಾರತ ಕ್ರಿಕೆಟ್ ತಂಡದ ಹಿರಿಯ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಅವರು ಆಸ್ಟ್ರೇಲಿಯಾ ವಿರುದ್ಧ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಪೂರೈಸಲು ಸಿದ್ಧವಾಗಿದ್ದಾರೆ.
ಈಗಾಗಲೇ 99 ಟೆಸ್ಟ್ ಪಂದ್ಯಗಳಿಂದ 408 ವಿಕೆಟ್ ಪಡೆದಿರುವ ಭಜ್ಜಿ 32.27 ಸರಾಸರಿಯೊಂದಿಗೆ 68.1 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ವೃತ್ತಿ ಜೀವನದಲ್ಲಿ ಕಠಿಣ ದಿನಗಳನ್ನು ಎದುರಿಸಿದರೂ, ಹರ್ಭಜನ್ ಸಿಂಗ್ ಅವರು ಭಾರತದ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ.
ಆಡುವ ಹನ್ನೊಂದರಲ್ಲ್ಲಿ ಹರ್ಭಜನ್ ಹೆಸರು ಖಚಿತಪಟ್ಟಿದೆ. ಹೀಗಾಗಿ ಪಂದ್ಯದ ನಂತರ, 100 ಟೆಸ್ಟ್ ಪಂದ್ಯಗಳನ್ನಾಡಿದ ಭಾರತದ 10ನೇ ಬೌಲರ್ ಎನಿಸಲಿದ್ದಾರೆ ಭಜ್ಜಿ.
ತಂಡಗಳು
ಆಸ್ಟ್ರೇಲಿಯಾ: ಮೈಕೆಲ್ ಕ್ಲಾರ್ಕ್ (ನಾಯಕ), ಎಡ್ ಕೋವನ್, ಡೇವಿಡ್ ವಾರ್ನರ್, ಫಿಲಿಪ್ ಹ್ಯೂಸ್, ಶೇನ್ ವ್ಯಾಟ್ಸನ್, ಮೊಯ್ಸಿಸ್ ಹೆನ್ರಿಕ್ಸ್, ಮ್ಯಾಥ್ಯೂ ವೇಡ್, ನಥಾನ್ ಲೇಯಾನ್, ಪೀಟರ್ ಸಿಡ್ಲ್, ಮಿಚೆಲ್ ಸ್ಟಾರ್ಕ್, ಜೇಮ್ಸ್ ಪ್ಯಾಟಿನ್ಸನ್, ಗ್ಲೆನ್ ಮ್ಯಾಕ್ಸ್ವೆಲ್ (12ನೇ ಆಟಗಾರ).
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಪ್ರಗ್ಯಾನ್ ಓಜಾ, ಇಶಾಂತ್ ಶರ್ಮಾ, ಅಶೋಕ್ ದಿಂಡಾ, ಭುವನೇಶ್ವರ ಕುಮಾರ್.
ಪಂದ್ಯದ ಸಮಯ: ಬೆಳಗ್ಗೆ 9ರಿಂದ ಆರಂಭ