ಫ್ರಾನ್ಸ್ ಎಟಿಪಿ: ರೋಹನ್ ಬೋಪಣ್ಣ- ಕಾಲಿನ್ ಫ್ಲೆಮಿಂಗ್ ಜೋಡಿ ಫೈನಲ್ಗೆ
ಮಾರ್ಸಿಲ್ (ಫ್ರಾನ್ಸ್): ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಅವರು ಋತುವಿನ ಮೊದಲ ಪ್ರಶಸ್ತಿ ಪಡೆಯುವ ಕಾತರದಲ್ಲಿದ್ದಾರೆ. ಬೋಪಣ್ಣ ಮತ್ತು ಇಂಗ್ಲೆಂಡ್ನ ಕಾಲಿನ್ ಫ್ಲೆಮಿಂಗ್ ಜೋಡಿ ಫ್ರಾನ್ಸ್ನಲ್ಲಿ ನಡೆಯುತ್ತಿರುವ ಎಟಿಪಿ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದೆ.
2ನೇ ಶ್ರೇಯಾಂಕ ಪಡೆದಿರುವ ಭಾರತ- ಇಂಗ್ಲೆಂಡ್ ಜೋಡಿ, ಸೆಮಿಫೈನಲ್ ಪಂದ್ಯದಲ್ಲಿ 3ನೇ ಶ್ರೇಯಾಂಕ ಪಡೆದಿದ್ದ ಆಸ್ಟ್ರೇಲಿಯಾದ ಜೂಲೈನ್ ನಾಲೆ ಮತ್ತು ಸ್ಲೋವಾಕಿಯಾದ ಫಿಲಿಪ್ ಪೊಲಾಸೆಕ್ ಜೋಡಿಯನ್ನು 7-5, 6-1 ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿತು. ಬೋಪಣ್ಣ- ಫ್ಲೆಮಿಂಗ್ ಜೋಡಿ, ಪಂದ್ಯದಲ್ಲಿ ದೊರಕಿದ ಮೂರು ಬ್ರೇಕ್ ಪಾಯಿಂಟ್ಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಬೋಪಣ್ಣ ಅವರು ತಮ್ಮ ಎಂದಿನ ಜತೆಯಾಟಗಾರ ಅಮೆರಿಕದ ರಾಜೀವ್ ಅವರನ್ನು ಬಿಟ್ಟು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು, ಇದು ಎರಡನೇ ಬಾರಿಯಾಗಿದೆ. ಈ ಮೊದಲು ಸಿಡ್ನಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೋಪಣ್ಣ ಬ್ರೆಜಿಲ್ನ ಮಾರ್ಸಿಲೋ ಮೆಲೋ ಅವರೊಂದಿಗೆ ಜತೆಯಾಗಿ ಆಡಿದ್ದರು.
ಅಗ್ರ ಶ್ರೇಯಾಂಕ ಪಡೆದಿರುವ ಐಸಾಮ್ ಉಲ್ ಹಕ್ ಖುರೇಶಿ ಮತ್ತು ಜೀನ್ ಜೂಲಿಯನ್ ರೋಜರ್ ಜೋಡಿ, ನಿಕೋಲಾಸ್ ಮಾಹುತ್ ಮತ್ತು ಎಡೌರ್ಡ್ ರೋಜ್ ವೆಸ್ಸೆಲಿನ್ ಜೋಡಿ ನಡುವೆ ಇನ್ನೊಂದು ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ಜೋಡಿಯನ್ನು ಫೈನಲ್ ಪಂದ್ಯದಲ್ಲಿ ಬೋಪಣ್ಣ ಮತ್ತು ಫ್ಲೆಮಿಂಗ್ ಜೋಡಿ ಎದುರಿಸಲಿದೆ.