ಮ್ಯಾರಥಾನ್ ಕೈಬಿಟ್ಟ ಲಲಿತಾ
ನವದೆಹಲಿ: ಮುಂಬೈ ಮ್ಯಾರಥಾನ್ ವಿಜೇತೆ ಲಲಿತಾ ಬಬ್ಬರ್ ನಾಳೆಯಿಂದ ಹಾಂಕಾಂಗ್‌ನಲ್ಲಿ ನಡೆಯುತ್ತಿರುವ 14ನೇ ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ನಿರ್ಧಾರವನ್ನು ಕೈಬಿಟ್ಟಿದ್ದಾರೆ.
ತಮ್ಮ ಪದವಿ ಪರೀಕ್ಷೆಗೆ ಕೂರಬೇಕಾದ ಅನಿವಾರ್ಯತೆಯಿಂದ ಲಲಿತಾ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಕಳೆದ ತಿಂಗಳ ಮುಂಬೈ ಮ್ಯಾರಥಾನ್ ಪುರುಷರ ವಿಭಾಗದ ವಿಜೇತ ಬಿನ್ನಿಂಗ್ ಲಿಂಕೊಯ್ ಅವರು ಮಾತ್ರ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಲಲಿತಾ ಬಬ್ಬರ್ ಅವರಿಗೆ ಪದವಿ ಪರಿಕ್ಷೆ ಆರಂಭವಾಗಿರುವ ಹಿನ್ನಲೆಯಲ್ಲಿ ಅವರು ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಷಿಪ್‌ಗೆ ಭಾಗವಹಿಸುವುದಿಲ್ಲ ಎಂದು ನಮಗೆ ಮಾಹಿತಿ ನೀಡಿದ್ದಾರೆ ಎಂದು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ನಿರ್ದೇಶಕರಾದ ಎಂ.ಎಲ್ ದೊಗ್ರಾ ತಿಳಿಸಿದ್ದಾರೆ.