ವಿಜಯಾ ಬ್ಯಾಂಕ್ ತಂಡಕ್ಕೆ ಪಾಪಯ್ಯ ಸ್ಮಾರಕ ಟ್ರೋಫಿ
ಬೆಂಗಳೂರು: ನಗರದ ವಿಜಯಾ ಬ್ಯಾಂಕ್ ಬ್ಯಾಸ್ಕೆಟ್‌ಬಾಲ್ ತಂಡ, ಎನ್.ಸಿ. ಪಾಪಯ್ಯ ಸ್ಮಾರಕ 'ಎ' ಡಿವಿಷನ್ ಬ್ಯಾಸ್ಕೆಟ್ ಬಾಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ವಿಜಯಾ ಬ್ಯಾಂಕ್ ತಂಡ, ಎಂಇಜಿ-ಸೆಂಟರ್ ತಂಡವನ್ನು 84-66 ಅಂಕಗಳ ಅಂತರದಲ್ಲಿ ಸೋಲಿಸಿತು. ವಿಜಯಾ ತಂಡದ ಪರವಾಗಿ ಅನಿಲ್ ಕುಮಾರ್ ಅವರು 24 ಅಂಕಗಳನ್ನು ಗಳಿಸಿದರೆ, ಅರವಿಂದ್ ಅವರು 22 ಅಂಕಗಳಿಸಿ ಗಮನ ಸೆಳೆದರು. ಎಂಇಜಿ-ಸೆಂಟರ್ ತಂಡದ ಪರವಾಗಿ ಅರೋಕಿಯಾ ಬಾಬು ಅವರು 16 ಅಂಕ ಹಾಗೂ ಜಿಜಿನ್ ಜೋಸೆಫ್ ಅವರು 9 ಅಂಕಗಳನ್ನು ಗಳಿಸಿದರು.
'ಎ' ಡಿವಿಷನ್ ವಿಭಾಗದಲ್ಲಿ ಸೆಣೆಸಿದ್ದ ಭಾರತ್ ಸ್ಪೋರ್ಟ್ಸ್ ಯೂನಿಯನ್ ಹಾಗೂ ವಿಬಿಸಿ ಮಂಡ್ಯ ತಂಡಗಳು 'ಬಿ' ಡಿವಿಷನ್ ವಿಭಾಗಕ್ಕೆ ಹಿಂಬಡ್ತಿ ಪಡೆದವು.
ಬೀಗಲ್ಸ್ ತಂಡಕ್ಕೆ ಜಯ: 'ಬಿ' ಡಿವಿಷನ್‌ನ ಎಂ.ಸಿ. ಶ್ರೀನಿವಾಸ ಸ್ಮಾರಕ ಪ್ರಶಸ್ತಿಯನ್ನು ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ಅನ್ನು ಗೆದ್ದುಕೊಂಡಿತು. ಶನಿವಾರ ನಡೆದ ಈ ವಿಭಾಗದ ಫೈನಲ್ ಪಂದ್ಯದಲ್ಲಿ ಸೆಣೆಸಿದ ಬಿಎಸ್‌ಎನ್‌ಎಲ್ ತಂಡವನ್ನು ಸೋಲಿಸಿದ, ಬೀಗಲ್ಸ್ ತಂಡ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಬಡ್ತಿ: ಈ ವಿಭಾಗದಲ್ಲಿ ಸೆಣೆಸಿದ್ದ ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ಹಾಗೂ ಬಿಎಸ್‌ಎನ್‌ಎಲ್ ತಂಡಗಳು 'ಎ' ಡಿವಿಷನ್ ವಿಭಾಗಕ್ಕೆ ಬಡ್ತಿ ಪಡೆದಿವೆ.
ಐಬಿಬಿಸಿ ತಂಡಕ್ಕೆ ಜಯ: 'ಸಿ' ಡಿವಿಷನ್ ವಿಭಾಗದ ಎಸ್. ರಂಗರಾಜನ್ ವೈಎಂಎಂಎ ಟ್ರೋಫಿಯನ್ನು ಐಬಿಬಿಸಿ ತಂಡ ಗೆದ್ದುಕೊಂಡಿದೆ.
ಶನಿವಾರ ನಡೆದ ಈ ವಿಭಾಗದ ಫೈನಲ್ ಪಂದ್ಯದಲ್ಲಿ ಐಬಿಬಿಸಿ ತಂಡ, ಎದುರಾಳಿ ತಂಡವಾದ ರೈಸಿಂಗ್ ಸ್ಟಾರ್ ಎಸ್‌ಸಿ ಮೈಸೂರು ತಂಡವನ್ನು ಸೋಲಿಸಿ, ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಐಬಿಬಿಸಿ ಹಾಗೂ ರೈಸಿಂಗ್ ಸ್ಟಾರ್ ಮೈಸೂರು ತಂಡಗಳಿಗೆ 'ಬಿ' ಡಿವಿಷನ್ ವಿಭಾಗಕ್ಕೆ ಬಡ್ತಿ ನೀಡಲಾಗಿದೆ.