ಬಾಂಗ್ಲಾದೇಶ ಮಣಿಸಿದ ಭಾರತ
ನವದೆಹಲಿ: ಡ್ಯಾನಿಶ್ ಮುಜ್ತಾಬಾ ಅವರ ಎರಡು ಗೋಲುಗಳ ನೆರವಿನಿಂದಾಗಿ, ಭಾರತ ಪುರುಷರ ಹಾಕಿ ತಂಡ, ಭಾನುವಾರ ನಡೆದ ವಿಶ್ವ ಹಾಕಿ ಲೀಗ್ (ಎರಡನೇ ಸುತ್ತು) ಪಂದ್ಯದಲ್ಲಿ ಬಲಿಷ್ಠ ಬಾಂಗ್ಲಾದೇಶವನ್ನು 5-1 ಗೋಲುಗಳಿಂದ ಸೋಲಿಸಿತು.
ಈ ಜಯದ ಮೂಲಕ, ಭಾರತ ಪುರುಷರ ತಂಡ ವಿಶ್ವ ಹಾಕಿ ಲೀಗ್ನ ಮೂರನೇ ಸುತ್ತಿನ ಪಂದ್ಯಾವಳಿಯಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿದೆ.
ಭಾರತದ ಪರವಾಗಿ ಡ್ಯಾನಿಶ್ ಅವಕು ಪಂದ್ಯದ 15ನೇ ಹಾಗೂ 64ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ರೂಪಿಂದರ್ ಸಿಂಗ್ (32ನೇ ನಿಮಿಷ), ಆಕಾಶ್ ದೀಪ್ ಸಿಂಗ್ (50ನೇ ನಿಮಿಷ) ಹಾಗೂ ಮಾಲಕ್ ಸಿಂಗ್ (58ನೇ ನಿಮಿಷ) ಅವರು ಗೋಲು ಗಳಿಸಿದರು.
ಪಂದ್ಯದ ಆರಂಭದಲ್ಲಿ ಬಾಂಗ್ಲಾದೇಶ ತನ್ನ ಗೋಲು ಖಾತೆ ತೆರೆದಿತ್ತು. 5ನೇ ನಿಮಿಷದಲ್ಲಿ ಆ ತಂಡದ ಮಮುನೂರ್ ರಹಮಾನ್ ಚಯಾನ್ ಅವರು ಗೋಲು ಗಳಿಸಿದರು.
3ನೇ ಸುತ್ತಿಗೆ ಭಾರತ ಮಹಿಳೆಯರು
ನವದೆಹಲಿ: ಶುಕ್ರವಾರ ನಡೆದ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ತನ್ನ ಪಾಲಿನ ಕೊನೆಯ ರೌಂಡ್-ರಾಬಿನ್ ಪಂದ್ಯವನ್ನಾಡಿದ ಭಾರತದ ವನಿತೆಯರು, ರಷ್ಯಾ ತಂಡವನ್ನು 1-0 ಅಂತರದಲ್ಲಿ ಸೋಲಿಸಿತು.
ಇತ್ತಂಡಗಳ ನಡುವೆ ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ರಾಣಿ ರಾಮ್ಪಾಲ್ ಅವರು 51ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ಗೋಲ್ನ ಸಹಾಯದಿಂದ ಭಾರತ ತಂಡ, ರಷ್ಯಾದ ವಿರುದ್ಧ ಜಯ ಸಾಧಿಸಿತು.
ಈ ಜಯದ ಮೂಲಕ, ಭಾರತ ಮಹಿಳೆಯರು ವಿಶ್ವ ಹಾಕಿ ಲೀಗ್ನ ಮೂರನೇ ಸುತ್ತಿನ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದಾರೆ.