ಭಾರತೀಯ ಕ್ರೀಡೆಗೆ ಗ್ರಹಣ
ಐಒಎ ಅಮಾನತಿನಿಂದ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ದೇಶದ ಅಥ್ಲೀಟ್‌ಗಳು
ಬೆಂಗಳೂರು: ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ) ಅನ್ನು ಅಮಾನತುಗೊಳಿಸಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಸಿ) ಆದೇಶ ಹೊರಡಿಸಿದಾಗ ದೇಶದ ಕ್ರೀಡಾ ಕ್ಷೇತ್ರಕ್ಕೆ ಶಾಕ್ ಹೊಡೆದಂತಾಗಿತ್ತು. ಆದರೆ, ಈಗ ಭಾರತೀಯ ಕ್ರೀಡಾಪಟುಗಳು ನಿಧಾನವಾಗಿ ಆ ಶಾಕ್‌ನ ವೇದನೆಯನ್ನು ಅನುಭವಿಸುತ್ತಿದ್ದಾರೆ. ಕಾರಣ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಭಾರತೀಯ ಅಥ್ಲೀಟ್‌ಗಳಿಗೆ ಅನುಮತಿ ದೊರಕುತ್ತಿಲ್ಲ.
ಐಒಸಿ ಅಮಾನತಿನಂತಹ ಕಠಿಣ ನಿಲವು ತಾಳಿರುವುದರಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ದೊರಕದೇ, ಭಾರತೀಯ ಕ್ರೀಡಾಪಟುಗಳು ಒದ್ದಾಡುತ್ತಿದ್ದಾರೆ. ಇದಕ್ಕೆ ನಮ್ಮ ವ್ಯವಸ್ಥೆಯೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶದಲ್ಲಿ ಕ್ರೀಡಾಭಿವೃದ್ಧಿ ಮಾಡಬೇಕಾದ ನಾವೇ, ಹಣದ ಆಸೆಗೆ ಬಿದ್ದು ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದೇವೆ ಎಂದರೆ ಎಂತಹ ವಿಪರ್ಯಾಸವಲ್ಲವೇ?
ರಾಜಕೀಯ ಕಾರಣ: ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಪ್ರಮುಖ ಸ್ಥಾನಗಳನ್ನು ಆಕ್ರಮಿಸಿಕೊಳ್ಳುವುದು ನಮ್ಮ ದೇಶದ ರಾಜಕಾರಣಿಗಳಿಗೆ ಪ್ರಮುಖ ಖಯಾಲೆ. ಇವರು ಒಂದು ಬಾರಿ ಅಧ್ಯಕ್ಷ ಅಥವಾ ಕಾರ್ಯದರ್ಶಿ ಸ್ಥಾನವನ್ನು ಆಲಂಕರಿಸಿದರೆ ಮುಗಿಯಿತು, ಕೊನೆಯುಸಿರು ಇರುವವರೆಗೂ ಅಲ್ಲಿಯೇ ಇರಬೇಕು ಎನ್ನುತ್ತಾರೆ. ಹಾಗಂತ ಇವರಿಗೆ ಫೆಡರೇಷನ್‌ಗಳ ಅಭಿವೃದ್ಧಿ ಮಾಡಬೇಕು ಎಂಬ ಇರಾದೆ ಇರುವುದಿಲ್ಲ. ಪ್ರತಿಷ್ಠೆಯ ಸ್ಥಾನ ಬಯಸುತ್ತಾರೆ ಅಷ್ಟೇ. ಫೆಡರೇಷನ್‌ಗಳಿಗೆ ಚುನಾವಣೆಗಳು ನಡೆಯುವಾಗ, ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದೇಶದ ಹೆಸರಿಗೆ ಮಸಿ ಬಳಿಯುವುದೇ ಇವರ ಕಾಯಕ.
ತಪ್ಪಲಿರುವ 2 ಏಷ್ಯನ್ ಕ್ರೀಡಾಕೂಟಗಳು: ಆಗಸ್ಟ್ 16ರಿಂದ 24ರವರೆಗೆ ಚೀನಾದಲ್ಲಿ 2ನೇ ಏಷ್ಯನ್ ಯೂತ್ ಗೇಮ್ಸ್ ಮತ್ತು ಜೂನ್ 29ರಿಂದ ಜುಲೈ 6ರವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ 4ನೇ ಏಷ್ಯನ್ ಯುವ ಒಳಾಂಗಣ ಕ್ರೀಡಾಕೂಟಕ್ಕೆ ಭಾರತದ ಯಾವ ಅಥ್ಲೀಟ್‌ಗಳೂ ಇದುವರೆಗೂ ಪ್ರವೇಶ ಪಡೆದಿಲ್ಲ. ಇನ್ನೊಂದೆಡೆ ಮಾರ್ಚ್ ಮೊದಲ ವಾರ ನಡೆಯಲಿರುವ ಏಷ್ಯನ್ ಜೂನಿಯರ್ ಫೆನ್ಸಿಂಗ್‌ನಲ್ಲಿ ಅವಕಾಶ ದೊರಕದೇ ಭಾರತ ತಂಡ ಒದ್ದಾಡುತ್ತಿದೆ. ಐಒಎ ಅಮಾನುತುಗೊಳಿಸಿರುವುದೇ ಇದಕ್ಕೆ ಕಾರಣ. ಪರಿಸ್ಥಿತಿ ಹೀಗೇಯೇ ಮುಂದುವರಿದರೆ ಭವಿಷ್ಯದಲ್ಲಿ ಭಾರತೀಯ ಅಥ್ಲೀಟ್‌ಗಳು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ.
ರಾಷ್ಟ್ರೀಯತೆಗೆ ಧಕ್ಕೆ: ಐಒಎ ಮೇಲೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತೀಯ ಅಥ್ಲೀಟ್‌ಗಳು ದೇಶವನ್ನು ಪ್ರತಿನಿಧಿಸುವಂತಿಲ್ಲ. ಆದರೆ, ಏಷ್ಯನ್ ಒಲಿಂಪಿಕ್ಸ್ ಕೌನ್ಸಿಲ್ ಪ್ರತಿನಿಧಿಸುವ ಮೂಲಕ ಕ್ರೀಡಾಕೂಟಗಳಲ್ಲಿ ಭಾರತದ ಅಥ್ಲೀಟ್‌ಗಳು ಭಾಗವಹಿಸಬಹುದು. ಆದರೆ, ಇದು ದೇಶಕ್ಕೆ ಒಂದು ರೀತಿಯಲ್ಲಿ ಅವಮಾನ ಮಾಡಿದಂತಲ್ಲವೇ? ಹೀಗೆ ಪ್ರವೇಶ ಪಡೆದರೆ ರಾಷ್ಟ್ರೀಯತೆಗೆ ಧಕ್ಕೆ ಬರುವುದಿಲ್ಲವೇ? ಆದರೆ, ಭವಿಷ್ಯದ ದೃಷ್ಟಿಯಿಂದ ಅಥ್ಲೀಟ್‌ಗಳಿಗೆ ಉಳಿದಿರುವ ದಾರಿ ಇದೊಂದೇ ಆಗಿದೆ.
ನೀತಿ ಸಂಹಿತೆಯ ಕಡಗಣನೆ: ಕೇಂದ್ರ ಕ್ರೀಡಾ ಸಚಿವಾಲಯ ಕ್ರೀಡಾ ನೀತಿ ಸಂಹಿತೆಯನ್ನು ಜಾರಿಗೊಳಿಸಿ ಎರಡು ವರ್ಷವಾದರೂ. ದೇಶದಲ್ಲಿರುವ ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಅದನ್ನು ಅಳವಡಿಸಿಕೊಂಡಿಲ್ಲ. 53 ಕ್ರೀಡಾ ಫೆಡರೇಷನ್‌ಗಳ ಪೈಕಿ ಕೇವಲ 29 ಫೆಡರೇಷನ್‌ಗಳು ಮಾತ್ರ ನೀತಿ ಸಂಹಿತೆ ಬಗ್ಗೆ ಒಲವು ತೋರಿವೆ. ನೀತಿ ಸಂಹಿತೆ ಅಳವಡಿಸಿಕೊಂಡರೆ, ಐಒಸಿ ಉಪಾಧ್ಯಕ್ಷರಾಗಿರುವ 81 ವರ್ಷದ ವೃದ್ಧ ವಿ.ಕೆ ಮಲ್ಹೋತ್ರಾ ಅಧಿಕಾರ ಕಳೆದುಕೊಳ್ಳುತ್ತಾರೆ. ಹೀಗಾಗಿಯೇ ಹಲವಾರು ಫಡರೇಷನ್‌ಗಳು ನೀತಿ ಸಂಹಿತೆಯತ್ತ ಒಲವು ತೋರುತ್ತಿಲ್ಲ. ಮೊದಲು ಭಾರತದ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಲ್ಲಿನ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಬೇಕಿದೆ. ನಂತರ ಹೊಸ ನೀತಿ ಸಂಹಿತೆಯನ್ನು ಜಾರಿಗೊಳಿಸಿ, ಹಣದಾಸೆಗೆ ಅಧಿಕಾರ ಹಿಡಿಯುವುದನ್ನು ಬಿಟ್ಟು ಕ್ರೀಡಾ ಅಭಿವೃದ್ಧಿಯತ್ತ ಗಮನಹರಿಸಬೇಕು. ಅಂದಾಗ ಮಾತ್ರ ಕೊಂಚಮಟ್ಟಿಗಾದರೂ ದೇಶದ ಅಥ್ಲೀಟ್‌ಗಳ ಹಿತ ಕಾಪಾಡಲು ಸಾಧ್ಯವಾಗಬಹುದು.
ಅಥ್ಲೀಟಗಳ ಬಗ್ಗೆ ಕಾಳಜಿಯೇ ಇಲ್ಲ: ನಾಚಪ್ಪ
ಭಾರತದಲ್ಲಿನ ಕ್ರೀಡಾ ಫೆಡರೇಷನ್‌ಗಳ ಅವ್ಯವಸ್ಥೆಯನ್ನು ನೋಡಿದರೆ, ಐಒಸಿ ತೀರ್ಮಾನ ಸರಿಯಾಗಿಯೇ ಇದೆ. ದೇಶದ ಕ್ರೀಡಾ ಫೆಡರೇಷನ್‌ಗಳಿಗೆ ಅಥ್ಲೀಟ್‌ಗಳ ಬಗ್ಗೆ ಕಾಳಜಿಯೇ ಇಲ್ಲ ಎಂದು ಕರ್ನಾಟಕದ ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್ ಅಶ್ವಿನಿ ನಾಚಪ್ಪ ಹೇಳಿದ್ದಾರೆ.
ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, 40 ವರ್ಷ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಒಂದರ ಅಧ್ಯಕ್ಷನಾಗಿರಬೇಕು. ನಂತರ ನನ್ನ ಕುಟುಂಬ ಫೆಡರೇಷನ್ ಅಧಿಕಾರ ಅನುಭವಿಸಬೇಕು. ಎಂಬ ಭಾವನೆಯನ್ನು ಹೊಂದಿದ್ದಾರೆ, ಭಾರತದ ಕ್ರೀಡಾ ಫಡರೇಷನ್‌ಗಳ ಕೆಲ ಅಧ್ಯಕ್ಷರು. ತಮಗೆ ಬೇಕಾದಂತೆ ಫೆಡರೇಷನ್‌ಗಳನ್ನು ನಡೆಸುವ ಇವರು, ನಿಯಮಗಳನ್ನು ಉಲ್ಲಂಘಿಸಿ ಅಧಿಕಾರ ದುರುಪಯೋಗಪಡಿಸಿಕೊಂಡು ದೇಶಕ್ಕೆ ಕೆಟ್ಟ ಹೆಸರು ತರುತ್ತಾರೆ.
ಕ್ರೀಡಾಪಟುಗಳ ಆಯ್ಕೆಯಲ್ಲೂ ಇವರು ಪ್ರಭಾವ ಬೀರುವುದರಲ್ಲಿ ಅನುಮಾನವಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಇಲ್ಲಿ ನಿಜವಾದ ನಷ್ಟ ಅಥ್ಲೀಟ್‌ಗಳಿಗೆ ಮತ್ತು ದೇಶಕ್ಕೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತೀಯ ಅಥ್ಲೀಟ್‌ಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಅಮಾನತುಗೊಳಿಸಿದ್ದನ್ನು ಹಿಂತೆಗೆದುಕೊಳ್ಳುವ ನಿಟ್ಟಿನಲ್ಲಿ ಒಲಿಂಪಿಕ್ಸ್ ಅಧ್ಯಕ್ಷರು ಮತ್ತು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
-ರಣಧೀರ್ ಸಿಂಗ್, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ
- ಮಲ್ಲಿಕಾರ್ಜುನ ಕರಿಯಪ್ಪನವರ