ಕುಸ್ತಿ ಪರ ಜಪಾನ್ ಆಂದೋಲನ
ಟೊಕಿಯೋ: ಕುಸ್ತಿಯನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಉಳಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯನ್ನು ಒತ್ತಾಯಿಸುವ ಮೂಲಕ, ಜಪಾನ್ ಸೋಮವಾರ ಅಂತರ್ಜಾಲ ಸಹಿ ಆಂದೋಲನವನ್ನು ಆರಂಭಿಸಿದೆ. ಕುಸ್ತಿಯನ್ನು ಉಳಿಸಿಕೊಳ್ಳಲು ಅಂತರ್ಜಾಲದ ಮೂಲಕ 1 ಲಕ್ಷ ಸಹಿ ಸಂಗ್ರಹಿಸುವ ಗುರಿಯನ್ನು ಜಪಾನ್ ಹೊಂದಿದೆ. 2020ನೇ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಕುಸ್ತಿಯನ್ನು ಕೈಬಿಡಲು ಒಲಿಂಪಿಕ್ಸ್ ಕ್ರೀಡಾಕೂಟದ ಸಂಘಟನಾ ಸಮಿತಿ ತೀರ್ಮಾನಿಸಿದೆ. ಅಲ್ಲದೆ ಅದರ ಸ್ಥಾನದಲ್ಲಿ ಹೊಸ ಕ್ರೀಡೆಗೆ ಅವಕಾಶ ನೀಡಲು ಅದು ಎದುರು ನೋಡುತ್ತಿದೆ. 'ಸೇವ್ ಒಲಿಂಪಿಕ್ಸ್ ರೆಸ್ಲಿಂಗ್' ಎಂಬ ಅಂತರ್ಜಾಲ ತಾಣದ ಮೂಲಕ ಜಪಾನ್ ಆಂದೋಲನವನ್ನು ಆರಂಭಿಸಿದೆ. ಈ ಮೂಲಕ ಜಪಾನ್ ಕುಸ್ತಿ ಫೆಡರೇಷನ್ ಹಲವಾರು ಭಾಷೆಯ ಜನತೆಯನ್ನು ಆಕರ್ಷಿಸಬಹುದು. ಸಂಗ್ರಹಿಸಿದ ಸಹಿಯನ್ನು ತನ್ನ ಆಡಳಿತ ಮಂಡಳಿಯ ಮೂಲಕ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಸಲ್ಲಿಸಲು ಅದು ತೀರ್ಮಾನಿಸಿದೆ.