ನವದೆಹಲಿ: ಏಷ್ಯನ್ ಅಥ್ಲೆಟಿಕ್ಸ್ ಸಂಸ್ಥೆಯ (ಎಎಎ) ಕಾರ್ಯಕಾರಿಣಿ ಸಭೆಯು ಶನಿವಾರ ನಡೆಯಲಿದ್ದು, ಈ ಸಭೆಯಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರು ಪಾಲ್ಗೊಳ್ಳುತ್ತಿರುವುದನ್ನು ಕ್ಲೀನ್ ಸ್ಪೋರ್ಟ್ಸ್ ಇಂಡಿಯಾ (ಸಿಎಸ್ಐ) ಸಂಸ್ಥೆ ವಿರೋಧಿಸಿದೆ. ಭ್ರಷ್ಟಾಚಾರ ಮುಕ್ತ ಕ್ರೀಡಾ ಕ್ಷೇತ್ರದ ಕನಸಿನೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಈ ಸಂಸ್ಥೆಯು, ಕಲ್ಮಾಡಿ ಅವರು ಎಎಎ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಸಿ) ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಸ್ಐ ಅಧ್ಯಕ್ಷ ಅಶ್ವಿನಿ ನಾಚಪ್ಪ, 'ಎಎಎ ಸಭೆಯಲ್ಲಿ ಸುರೇಶ್ ಕಲ್ಮಾಡಿ ಅವರು ಪಾಲ್ಗೊಳ್ಳುತ್ತಿರುವುದು ಕೇಳಿ ದಿಗ್ಭ್ರಮೆಯಾಯಿತು. ಈ ಸಭೆಯಲ್ಲಿ ಭಾಗವಹಿಸುತ್ತಿರುವುದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದರು.