ಚೆನ್ನೈ: 'ಓರ್ವ ಕ್ರಿಕೆಟಿಗನಾಗಿ ಭಾರತಕ್ಕಾಗಿ ಆಡುತ್ತೇನೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಅದರಲ್ಲೂ ಪುಟ್ಟ ಪಟ್ಟಣವೊಂದರಲ್ಲಿ ಬೆಳೆದ ನನಗೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತೇನೆ ಎಂಬ ಯಾವುದೇ ಕಲ್ಪನೆಯೂ ಇರಲಿಲ್ಲ' ಎಂದು ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಆರೋಗ್ಯ ಪೇಯ 'ಬೂಸ್ಟ್'ನ ಖಾಸಗಿ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಮನಸಿನ ಮಾತುಗಳನ್ನು ಹೇಳುತ್ತಾ ಹೋದರು.
ಈ ಸಂದರ್ಭದಲ್ಲಿ, ತಾವು ನಡೆದು ಬಂದ ಹಾದಿಯನ್ನು ಸಿಂಹಾವಲೋಕನ ಮಾಡಿಕೊಳ್ಳುತ್ತಾ ತಮ್ಮದೇ ಲೋಕಕ್ಕೆ ಜಾರಿದ ಅವರು, ತಮ್ಮ ನೆನಪಿನ ಬುತ್ತಿಯಿಂದ ಮಧುರ ನೆನಪುಗಳನ್ನು ಹೊರಗಿಟ್ಟರು.
ಅವರ ಬಾಲ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಚಿಕ್ಕವನಿದ್ದಾಗ ನಾನು ಕ್ರಿಕೆಟ್ ನೋಡುತ್ತಿದ್ದೆ. ನನ್ನ ಸಹಪಾಠಿಗಳೊಡನೆ ಕ್ರಿಕೆಟ್ ಆಡುತ್ತಿದ್ದೆ. ಆದರೆ, ಆಡಿದ್ದಕ್ಕಿಂದ ನಮ್ಮ ಊರಿನಲ್ಲಿ ನನಗಿಂತಲೂ ಹಿರಿಯರು ಆಡುತ್ತಿದ್ದ ಪಂದ್ಯಗಳನ್ನು ನೋಡಿದ್ದೇ ಹೆಚ್ಚು' ಎಂದು ಹೇಳಿದರು.
'ರಾಂಚಿಯ ಸುತ್ತಲಿನ ಊರುಗಳಿಗೆ ಹೋಲಿಸಿದರೆ, ರಾಂಚಿಯಲ್ಲಿ ಹೆಚ್ಚು ಕ್ರಿಕೆಟ್ ಆಸಕ್ತರಿದ್ದರು. ಅವರೆಲ್ಲರೂ ತಂಡಗಳನ್ನು ಕಟ್ಟಿಕೊಂಡು ಕ್ರಿಕೆಟ್ ಆಡುತ್ತಿದ್ದರು. ನಾನು ನನ್ನ ಸಹಪಾಠಿಗಳೊಡನೆ ಮೈದಾನಗಳಾಚೆ ನಿಂತು ಕ್ರಿಕೆಟ್ ನೋಡುತ್ತಿದ್ದೆ. ಅವರೆಲ್ಲರೂನಮಗಿಂತ ಹಿರಿಯರಾಗಿದ್ದುದರಿಂದ ನಾವು ಅವರ ಹತ್ತಿರವೂ ಸುಳಿಯುತ್ತಿರಲಿಲ್ಲ. ದೂರದಲ್ಲಿಯೇ ನಿಂತು ಅವರ ಆಟವನ್ನು ನೋಡುತ್ತಾ ಖುಷಿ ಪಡುವುದು ನಮ್ಮ ನಿತ್ಯದ ದಿನಚರಿಗಳ ಒಂದು ಭಾಗವಾಗಿತ್ತು' ಎಂದು ಧೋನಿ ಹೇಳಿದರು.
ಈ ಸಂದರ್ಭದಲ್ಲಿ ತಮ್ಮ ಹಳೆಯ ನೆನಪುಗಳಿಗೆ ಜಾರಿದ ಅವರು, 'ಆಗೆಲ್ಲಾ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿರುವಾಗ ನಾನೂ ಮುಂದೊಂದು ದಿನ ಹೀಗೇ ಕ್ರಿಕೆಟ್ ಆಡುತ್ತೇನೆಂದಾಗಲೀ, ಅಥವಾ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿ, ಮುಂದೊಂದು ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಅವಕಾಶವನ್ನು ಪಡೆಯುತ್ತೇನೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ' ಎಂದು ಅವರು ತಿಳಿಸಿದರು.
ನಂತರ, ಧೋನಿ ಅವರು ಕುಟುಂಬ ಹಾಗೂ ಕ್ರಿಕೆಟ್ ಎರಡರ ನಡುವೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳುತ್ತಾರೆ ಎಂಬ ಕುತೂಹಲಕಾರಿ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಧೋನಿ, 'ಕ್ರಿಕೆಟ್ ಆಡುವುದೇ ನನ್ನ ಜೀವನದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ.
ಆದರೆ, ಹಾಗಂತ ನನ್ನ ಜೀವನಕ್ಕೆ ಸಂಬಂಧಿಸಿದ ಬೇರ್ಯಾವ ವಿಷಯಗಳನ್ನು ಮರೆಯಲಾರೆ. ಕ್ರಿಕೆಟ್‌ಗೆ ಬಂದಾಗ ಕ್ರಿಕೆಟ್, ಕುಟುಂಬದೊಂದಿಗಿದ್ದಾಗ ಕುಟುಂಬ. ಅಷ್ಟೇ. ಮನಸ್ಸು ಮಾಡಿದರೆ, ಎಲ್ಲವನ್ನೂ ಸರಿಯಾಗಿ ಸರಿದೂಗಿಸಿಕೊಂಡು ಹೋಗಬಹುದು' ಎಂದು ಅವರು ತಿಳಿಸಿದರು.
ಇನ್ನು ತಮ್ಮ ಆಹಾರ ಪದ್ಧತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಧೋನಿ, 'ಊಟ- ತಿಂಡಿಯಲ್ಲಿ ನಾನೆಂದೂ ಕಾಂಪ್ರಮೈಸ್ ಮಾಡಿಕೊಳ್ಳುವುದೇ ಇಲ್ಲ' ಎಂದು ಹೇಳುತ್ತಾ ಚಟಾಕಿ ಹಾರಿಸಿದರು.
ವೀರೂ, ಕುಂಬ್ಳೆ, ವಿರಾಟ್ ಉಪಸ್ಥಿತಿ
ಈ ಸಮಾರಂಭಕ್ಕೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ ಆಗಮಿಸಿ, ಸಮಾರಂಭಕ್ಕೆ ಕಳೆ ತಂದಿದ್ದರು. ಅವರೊಂದಿಗೆ, ಈ ಹಿಂದೆ ಟೀಂ ಇಂಡಿಯಾದ ತರಬೇತುದಾರರಾಗಿದ್ದ ಜಾನ್ ರೈಟ್ ಸಹಾ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್, 'ಇತ್ತೀಚೆಗೆ ನನ್ನ ಬ್ಯಾಟಿಂಗ್‌ನಲ್ಲಿ ತಾಂತ್ರಿಕ ದೋಷಗಳು ಕಾಣಬರುತ್ತಿವೆ. ಆದರೆ, ನಾನು ನನ್ನ ಆತ್ಮಸ್ಥೈರ್ಯವನ್ನು ಕಳೆದುಕೊಂಡಿಲ್ಲ. ಹಾಗಾಗಿ, ನನ್ನ ಬ್ಯಾಟಿಂಗ್ ಸಮಸ್ಯೆಯನ್ನು ನಿವಾರಿಸಿಕೊಳ್ಳುವತ್ತ ಪ್ರಯತ್ನ ನಡೆಸಿದ್ದೇನೆ' ಎಂದು ತಿಳಿಸಿದರು.
ನಂತರ, ಮಾತನಾಡುವ ಸರದಿ ಬಂದಿದ್ದು ಅನಿಲ್ ಕುಂಬ್ಳೆಗೆ. ಅವರು, 'ಒಬ್ಬ ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆಯಲು ಯಾವುದೇ ವ್ಯಕ್ತಿಗೆ ಪ್ರತಿಭೆಯಿದ್ದರೆ ಸಾಲದು, ನಿಷ್ಠೆ, ಪರಿಶ್ರಮ ಮಾಡುವ ಮನಸ್ಸಿರಬೇತು' ಎಂದು ತಿಳಿಸಿದರು.