ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಶುಕ್ರವಾರ ನಡೆದ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ, 105 ರನ್‌ಗಳ ಭರ್ಜರಿ ಜಯ ಸಾಧಿಸಿ, ಈ ಬಾರಿಯ ಮಹಿಳಾ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ.
ಮೊದಲು ಬ್ಯಾಟ್ ಮಾಡಿದ ಭಾರತ, ಆರಂಭಿಕ ಆಟಗಾರ್ತಿ ತಿರುಷ್‌ಕಾಮಿನಿ ಮರುಗೇಶನ್ ಅವರ ಶತಕದ ಸಹಾಯದಿಂದ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿತು. ನಂತರ, ಬ್ಯಾಟಿಂಗ್‌ಗೆ ಇಳಿದ ವೆಸ್ಟ್ ಇಂಡೀಸ್, 44.3 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟ್ ಆಯಿತು.
ವಿಜೃಂಭಿಸಿದ ಕಾಮಿನಿ: ಭಾರತದ ಇಡೀ ಇನಿಂಗ್ಸ್‌ನಲ್ಲಿ ವಿಜೃಂಭಿಸಿದ್ದು ತಿರುಷ್‌ಕಾಮಿನಿ ಕಾಮಿನಿ. ಪೂನಮ್ ರವುತ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಎಡಗೈ ಆಟಗಾರ್ತಿ ಕಾಮಿನಿ, 43ನೇ ಓವರ್‌ವರೆಗೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿದರು. 143 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 11 ಬೌಂಡರಿ ಸೇರಿದಂತೆ, 100 ರನ್ ಗಳಿಸಿದ ಅವರು ಭಾರತದ ಪರವಾಗಿ ಅಂತಾರಾಷ್ಟ್ರೀಯ ಏಕದಿನ ಪಂದ್ಯವೊಂದರಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.
ಭದ್ರ ಅಡಿಪಾಯ: ಟಾಸ್ ಗೆದ್ದಿದ್ದ ವೆಸ್ಟ್ ಇಂಡೀಸ್, ಮೊದಲು ಭಾರತ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತು. ನಿರ್ಜೀವ ಪಿಚ್‌ನ ಲಾಭ ಪಡೆದ ಆರಂಭಿಕ ಆಟಗಾರ್ತಿಯರಾದ ಪೂನಮ್ ರವುತ್ ಹಾಗೂ ತಿರುಶ್ ಕಾಮಿನಿ ಮುರುಗೇಶನ್, ಮೊದಲ ವಿಕೆಟ್‌ಗೆ 175 ರನ್‌ಗಳ ಭರ್ಜರಿ ಜೊತೆಯಾಟವಾಡಿದರು.
144 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ನಿಂತಿದ್ದ ರವುತ್, 94 ಎಸೆತಗಳಲ್ಲಿ ಏಳು ಬೌಂಡರಿ ಸೇರಿದಂತೆ 72 ರನ್ ಗಳಿಸಿದರು. ಶಾನೆಲ್ ಡೇಲೆ ಅವರು ಮಾಡಿದ ಇನಿಂಗ್ಸ್‌ನ 37ನೇ ಓವರ್‌ನ ಕೊನೆಯ ಎಸೆತದಲ್ಲಿ ಸ್ವೀಪ್ ಮಾಡಲು ಪ್ರಯತ್ನಿಸಿದ ರವುತ್, ಎಲ್‌ಬಿಡಬ್ಲ್ಯೂಗೆ ಒಳಗಾದರು. ಆನಂತರ ಕ್ರೀಸ್‌ಗೆ ಕಾಲಿಟ್ಟಿದ್ದು, ಮಾಜಿ ನಾಯಕಿ ಜುಲಾನ್ ಗೋಸ್ವಾಮಿ. ಪಿಂಚ್ ಹಿಟ್ಟರ್ ಆಗಿ ಕ್ರೀಸ್‌ಗೆ ಆಗಮಿಸಿದ್ದ ಗೋಸ್ವಾಮಿ, 21 ಎಸೆತಗಳಲ್ಲಿ 36 ರನ್ ಗಳಿಸಿದರು. ಏತನ್ಮಧ್ಯೆ, ಇನಿಂಗ್ಸ್‌ನ 42ನೇ ಓವರ್‌ನಲ್ಲಿ ಶತಕ ಗಳಿಸಿದ್ದ ಕಾಮಿನಿ ರನೌಟ್ ಆಗಿ ಹೊರನಡೆದರು. ಆಗ ಕ್ರೀಸ್‌ಗೆ ಆಗಮಿಸಿದ ಹರ್ಮನ್‌ಪ್ರೀತ್ ಕೌರ್ ಗುಡುಗಲು ಆರಂಭಿಸಿದರು. 22 ಎಸೆತಗಳಲ್ಲಿ 36 ರನ್ ಚಚ್ಚಿದ ಅವರು ಭಾರತ ಉತ್ತಮ ಮೊತ್ತ ಪೇರಿಸುವಲ್ಲಿ ತಮ್ಮ ಕಾಣಿಕೆಯನ್ನೂ ನೀಡಿದರು. ಅವರ ಇನಿಂಗ್ಸ್‌ನಲ್ಲಿ ಒಟ್ಟು 2 ಸಿಕ್ಸರ್ ಸೇರಿದಂತೆ 4 ಬೌಂಡರಿಗಳೂ ಸೇರಿದ್ದವು. ಕಾಮಿನಿ ಹೊರನಡೆದ ಮೇಲೆ, ಭಾರತದ ವಿಕೆಟ್‌ಗಳು ಒಂದೊಂದಾಗಿ ಉರುಳಲು ಆರಂಭವಾದವು.. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿತು.
ವಿಂಡೀಸ್ ಪರದಾಟ: ಭಾರತ ನೀಡಿದ್ದ ದೊಡ್ಡ ಸವಾಲನ್ನು ಬೆನ್ನಟ್ಟಲು ಕ್ರೀಸ್‌ಗೆ ಇಳಿದ ವೆಸ್ಟ್ ಇಂಡೀಸ್, ಶೂನ್ಯ ಮೊತ್ತಕ್ಕೇ ಆರಂಭಿಕ ಆಟಗಾರ್ತಿ ಕಿಸಿಯಾ ಎ. ನೈಟ್ ಅವರನ್ನು ಕಳೆದುಕೊಂಡಿತು. ಅವರ ನಂತರ ಬಂದ ಕ್ಯಾಂಪ್‌ಬೆಲ್, ಮತ್ತೊಬ್ಬ ಆರಂಭಿಕ ಆಟಗಾರ್ತಿ ಟೇಲರ್ ಜೊತೆ ಸೇರಿ ತಂಡದ ಮೊತ್ತಕ್ಕೆ 15 ರನ್ ಸೇರಿಸುವಷ್ಟರಲ್ಲಿ ಟೇಲರ್ ಔಟಾದರು. ಆನಂತರ, ಕ್ಯಾಂಪ್‌ಬೆಲ್ ಹಾಗೂ ಕಿಷೋನಾ ಎ. ನೈಟ್ ಜೋಡಿ, 23 ರನ್ ಗಳಿಸಿ ಬೇರ್ಪಟ್ಟಿತು.
ಆನಂತರ, ಇನಿಂಗ್ಸ್ ಜವಾಬ್ದಾರಿ ಹೊತ್ತಿದ್ದು ನೈಟ್ ಹಾಗೂ ಡಾಟಿನ್. ಈ ಜೋಡಿ, ನಾಲ್ಕನೇ ವಿಕೆಟ್‌ಗೆ 46 ರನ್ ಸೇರಿಸಿತು. 19ನೇ ಓವರ್‌ನಲ್ಲಿ ಡಾಟಿನ್ ಔಟಾಗುವುದರೊಂದಿಗೆ ಈ ಜೋಡಿ ಮುರಿದುಬಿತ್ತು. ಆಗ ತಂಡದ ಮೊತ್ತ 84 ರನ್. ಇದೇ ಮೊತ್ತಕ್ಕೆ ನೈಟ್ ಅವರೂ ಹೊರನಡೆದರು. ಆಗ, ಇನಿಂಗ್ಸ್ ಜವಾಬ್ದಾರಿ ಬಿದ್ದಿದ್ದು ಆ್ಯಗುಲೆರಿಯಾ ಹಾಗೂ ಡೇಲೇ ಅವರು ಹೆಗಲಿಗೆ. ಈ ಜೋಡಿ 6ನೇ ವಿಕೆಟ್‌ಗೆ 49 ರನ್ ಸೇರಿಸಿತು. ಆದರೆ, 28ನೇ ಓವರ್‌ನಲ್ಲಿ ಆ್ಯಂಗುಲಿಯಾ, 34ನೇ ಓವರ್‌ನಲ್ಲಿ ಡೇಲೇ ಔಟಾದರು. ಅವರ ನಂತರ, ಬಂದ ಯಾರೊಬ್ಬರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. ಅಂತಿಮವಾಗಿ, ವಿಂಡೀಸ್ 179 ರನ್‌ಗಳಿಗೆ ಆಲೌಟ್ ಆಯಿತು.
ಸ್ಕೋರ್ ಬೋರ್ಡ್
ಭಾರತ: 284/6 (50 ಓ.)
ರವುತ್ ಎಲ್‌ಬಿ ಬಿ ಡೇಲೇ 72 (94), ಕಾಮಿನಿ ರನೌಟ್ (ಡಾಟಿನ್) 100 (146), ಗೋಸ್ವಾಮಿ ಸಿ ಸೆಲ್ಮನ್ ಬಿ ಡಾಟಿನ್ 36 (21), ಕೌರ್ ಸಿ ಸೆಲ್ಮನ್ ಬಿ ಡಾಟಿನ್ 36 (22), ಮಲ್ಹೋತ್ರಾ ಸಿ ಮಹಮ್ಮದ್ ಬಿ ಡಾಟಿನ್ 3 (6), ನಿರಂಜನಾ ರನೌಟ್ (ಕ್ವಿಂಟೈನ್/ಅಗುಲೆರಿಯಾ) 2 (5), ಅಮಿತಾ ಶರ್ಮಾ ನಾಟೌಟ್ 8 (7), ಮಿಥಾಲಿ ರಾಜ್ ನಾಟೌಟ್ 1 (1).
ಇತರೆ 26
ವಿಕೆಟ್ ಪತನ: 1-175, 2-224, 3-231, 4-246, 5-265, 5-280
ಬೌಲಿಂಗ್: ಸೆಲ್ಮನ್ 4-0-26-0, ಟೇಲರ್ 10-0-54-0, ಡೇಲೇ 9-0-51-1, ಮಹಮ್ಮದ್ 10-0-44-0, ಕ್ವಿನಿಟೈನ್ 10-0-50-0, ಸ್ಮಾರ್ಟ್ 2-0-12-0, ಕ್ಯಾಂಪ್‌ಬೆಲ್ 1-0-32-3, ಡಾಟಿನ್ 4-0-32-3.
ವೆಸ್ಟ್ ಇಂಡೀಸ್: 179/10 (44.3 ಓವರ್)
ಕಿಸಿಯಾ ನೈಟ್ ರನೌಟ್ (ಕೌರ್) 0 (2), ಟೇಲರ್ ಸಿ ಜೈನ್ ಬಿ ಶರ್ಮಾ 9 (19), ಕ್ಯಾಂಪ್‌ಬೆಲ್ ಬಿ ನಿರಂಜನಾ 21 (35), ಕಿಷೋನಾ ನೈಟ್ 11 (43), ಡಾಟಿನ್ ಎಲ್‌ಬಿ ಬಿ ನಿರಂಜನಾ 39 (16), ಆ್ಯಂಗುಲಿನಾ ಸಿ ರಾಜ್ ಬಿ ನಿರಂಜನಾ 18 (26), ಡೇಲೇ ಸಿ ನಿರಂಜನಾ ಬಿ ಮಲ್ಹೋತ್ರಾ 28 (28), ಕ್ವಿಂಟಿನ್ ಸ್ಟಂಪ್ಡ್ ಜೈನ್ ಬಿ ಸುಲ್ತಾನಾ 17 (31), ಸ್ಮಾರ್ಟ್ ಸಿ ಅಂಡ್ ಬಿ ಗೋಸ್ವಾಮಿ 6 (12), ಮಹಮ್ಮದ್ ನಾಟೌಟ್ 10 (33), ಸೆಲ್ಮನ್ ಸಿ ಜೈನ್ ಬಿ ಗೋಸ್ವಾಮಿ 2 (12).
ವಿಕೆಟ್ ಪತನ: 1-0, 2-15, 3-38, 4-84, 5-84, 6-133, 7- 146, 8-165, 9-169, 10- 179.
ಬೌಲಿಂಗ್: ಗೋಸ್ವಾಮಿ 9.3-3-13-2, ಶರ್ಮಾ 7-1-28-1, ನಿರಂಜನಾ 9-0-52-3, ಸುಲ್ತಾನಾ 10-4-38-2, ಪರ್ವಿನ್ 7-1-34-0, ಮಲ್ಹೋತ್ರಾ 2-0-12-1.