ಐಪಿಎಲ್ 6ನೇ ಆವೃತ್ತಿಗೆ ಭಾನುವಾರ ನಡೆಯಲಿರುವ ಹರಾಜು ಪ್ರಕ್ರಿಯೆ
ಚೆನ್ನೈ: ನಿವೃತ್ತಿ ಹೊಂದಿರುವ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಮತ್ತು ಹಾಲಿ ನಾಯಕ ಮೈಕೆಲ್ ಕ್ಲಾರ್ಕ್ ಅವರು ಟಿ20 ಮಾದರಿಯ ಆಟಗಾರರಲ್ಲ. ಆದರೆ, ಈ ಇಬ್ಬರು ಆಟಗಾರರು ಭಾನುವಾರ ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್‌ನ ಆರನೇ ಆವೃತ್ತಿಗೆ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ನಿರೀಕ್ಷಗಳಿವೆ. ಹರಾಜಿನಲ್ಲಿ ಒಟ್ಟು 101 ಆಟಗಾರರು ಭಾಗವಹಿಸಲಿದ್ದು, ಅದರಲ್ಲಿ ಪಾಂಟಿಂಗ್ ಮತ್ತು ಕ್ಲಾರ್ಕ್ ಅವರು ಹೆಚ್ಚಿನ ಬೇಡಿಕೆ ಹೊಂದಿರುವ ಆಟಗಾರರಾಗಿದ್ದಾರೆ. ಇಬ್ಬರೂ ಐಪಿಎಲ್ ಅತಿ ಹೆಚ್ಚು ಮೂಲ ಬೆಲೆಯಾದ ರು. 2.1 ಕೋಟಿಗೆ ಹರಾಜಾಗುವ ಸಾಧ್ಯತೆಳಿವೆ.
ಒಟ್ಟು ನಾಲ್ವರು ಹೆಚ್ಚಿನ ಬೇಡಿಕೆ ಆಟಗಾರರು ಪಟ್ಟಿಯಲ್ಲಿದ್ದು, ದಕ್ಷಿಣ ಆಪ್ರಿಕಾದ ಆಲ್ರೌಂಡರ್ ಜಾನ್ ಬೋಥಾ ಮತ್ತು ಭಾರತದ ವೇಗಿ ಆರ್.ಪಿ ಸಿಂಗ್ ಇತರ ಇಬ್ಬರು ಆಟಗಾರರಾಗಿದ್ದಾರೆ. ಆರ್.ಪಿ ಸಿಂಗ್ ಅವರನ್ನು ಕಳೆದ ವರ್ಷ ಮುಂಬೈ ತಂಡ ಖರೀದಿಸಿತ್ತು. ಆದರೆ, ಪಂದ್ಯಾವಳಿಯಲ್ಲಿ 11 ಪಂದ್ಯಗಳಿಂದ ಕೇವಲ 10 ವಿಕೆಟ್ ಪಡೆದ ಹಿನ್ನೆಲೆಯಲ್ಲಿ ಮುಂಬೈ ಸಿಂಗ್ ಅವರನ್ನು ಈ ಬಾರಿ ಕೈಬಿಟ್ಟಿದೆ.
ಪಟ್ಟಿಯಲ್ಲಿ ಒಟ್ಟು 7 ಆಟಗಾರರಿದ್ದು, ಇಬ್ಬರು ಇಂಗ್ಲೆಂಡ್ ಮತ್ತು ಐರೀಸ್‌ನ ಆಲ್ರೌಂಡರ್ ಕೆವಿನ್ ಓಬ್ರೇನ್ ಅವರು ಸಹ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.
ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಡಾರೆನ್ ಸಾಮಿ ಅವರು ಇದೇ ಮೊದಲ ಬಾರಿಗೆ ಹರಾಜಿನಲ್ಲಿ ಭಾಗವಹಿಸಿದ್ದಾರೆ. ಕಳೆದ ಬಾರಿ ಹಾರಾಜಿನಲ್ಲಿ ಖರೀದಿಯಾಗದ ಇಂಗ್ಲೆಂಡ್‌ನ ಮ್ಯಾಟ್ ಪ್ರಯಾರ್, ರವಿ ಬೋಪ್ರಾ ಈ ಬಾರಿ ಮತ್ತೆ ಹರಾಜಿನಲ್ಲಿ ಭಾಗವಹಿಸಿದ್ದಾರೆ.
ಆಟಗಾರರ ಪಟ್ಟಿಯಲ್ಲಿ ಸ್ಟಾರ್ ಆಟಗಾರರು ಇಲ್ಲದಿರುವ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ನೀರಸವಾಗಿ ನಡೆಯುವ ಸಾಧ್ಯತೆಗಳಿವೆ.
ಈ ಬಾರಿಯೂ ಪಾಕ್ ಆಟಗಾರರಿಲ್ಲ?
ನವದೆಹಲಿ: ಬರುವ ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಇಂಡಿಯನ್ ಪ್ರಿಮೀಯರ್ ಲೀಗ್‌ನಲ್ಲಿ ಈ ಬಾರಿಯೂ ಪಾಕಿಸ್ತಾನದ ಆಟಗಾರರನ್ನು ಪರಿಗಣಿಸಲಾಗಿಲ್ಲ. ಹರಾಜಿನಲ್ಲಿ ಭಾಗವಹಿಸುತ್ತಿರುವ 101 ಆಟಗಾರರ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಪಾಕ್ ಆಟಗಾರನ ಹೆಸರಿಲ್ಲ. 2008ರಲ್ಲಿ ಮುಂಬೈ ಭಯೋತ್ಪಾದಕರ ದಾಳಿ ನಡೆದ ನಂತರ ಐಪಿಎಲ್‌ನಲ್ಲಿ ಪಾಕಿಸ್ತಾನದ ಆಟಗಾರರನ್ನು ನಿರ್ಲಕ್ಷಿಸಲಾಗುತ್ತಿದೆ. ಪಾಕಿಸ್ತಾನದ ಕ್ರಿಕೆಟ್ ಮಂಡಳಿ ತಮ್ಮ ಆಟಗಾರರಿಗೆ ಅವಕಾಶ ದೊರಕಿಸಲು ಹಲವಾರು ಪ್ರಯತ್ನ ಮಾಡುತ್ತಿದೆ. ಆದರೂ, ಆಟಗಾರರು ಸ್ಥಾನ ಪಡೆದಿಲ್ಲ. ಭಾರತದೊಂದಿಗೆ ಗಡಿಯಲ್ಲಿ ಸದಾ ತಂಟೆಯಲ್ಲೇ ತೊಡಗುವ ಪಾಕಿಸ್ತಾನಕ್ಕೆ ಈ ಬಾರಿ ಸಹ ಐಪಿಎಲ್‌ನಲ್ಲಿ ಅವಕಾಶ ದೊರಕದಿರುವುದು ತಕ್ಕ ಶಾಸ್ತಿಯೇ ಆಗಿದೆ.