ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾದ ರಾಜಸ್ಥಾನ ತಂಡದ ಆಟಗಾರರಾದ ಎಸ್.ಶ್ರೀಶಾಂತ್, ಅಂಕಿತ್ ಚೌಹಾಣ್ ಹಾಗೂ ಅಜಿತ್ ಚಂಡಿಲಾ ತಮಗೆ ಮೋಸ ಮಾಡಿದರು ಎಂದು ದೆಹಲಿ ಪೊಲೀಸರು ವಿಚಾರಣೆ ನಡೆಸಿದ ವೇಳೆ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಕಳೆದ ಬುಧವಾರ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 161ರ ಅಡಿಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ವಿಚಾರಣೆ ನಡೆಸಿದಾಗ ನನಗೆ ತಂಡದ ಸಹ ಆಟಗಾರರೆ ಮೋಸ ಮಾಡಿದ್ದಾರೆ ಎಂದು ತಿಳಿಸಿದ್ದರು. ಈ ಪ್ರಕರಣವನ್ನು ಮತ್ತಷ್ಟು ಬಲ ಪಡಿಸಲು ದೆಹಲಿ ಪೊಲೀಸರು ದ್ರಾವಿಡ್ ಅವರ ಹೇಳಿಕೆಯನ್ನು ಪ್ರಕರಣದ ಸಾಕ್ಷಿಯನ್ನಾಗಿ ಬಳಸಲು ನಿರ್ಧರಿಸಿದರು. ಆದರೆ ದ್ರಾವಿಡ್ ಗೌರವಾನ್ವಿತ ವ್ಯಕ್ತಿಯಾದ ಹಿನ್ನೆಲೆಯಲ್ಲಿ ಆವರಿಗೆ ಸಮನ್ಸ್ ಜಾರಿ ಮಾಡದೆ ಅವರ ನಿವಾಸದಲ್ಲೇ ಅವರ ಹೇಳಿಕೆಯನ್ನು ಪಡೆದಿದ್ದರು.
ಈ ಮೂವರು ಆಟಗಾರರನ್ನು ತಂಡದ 11 ಆಟಗಾರರಲ್ಲಿ ಆಯ್ಕೆ ಮಾಡಿಕೊಳ್ಳಲು ಯಾವುದಾದರು ಒತ್ತಡಗಳು ಇದ್ದವೆ ಎಂದು ದೆಹಲಿ ಪೊಲೀಸರು ದ್ರಾವಿಡ್ಗೆ ಪ್ರಶ್ನಿಸಿದ್ದರು.
ದಕ್ಕೆ ಉತ್ತರಿಸಿದ ದ್ರಾವಿಡ್, ಈ ಮೂವರು ಆಟಗಾರರ ಮೇಲೆ ನನಗೆ ಯಾವುದೇ ಅನುಮಾನವಿರಲಿಲ್ಲ ಹಾಗಾಗಿ ನಾನು ಪ್ರತಿ ಪಂದ್ಯಕ್ಕೆ ತಕ್ಕಂತೆ ತಂಡವನ್ನು ಆಯ್ಕೆ ಮಾಡುತ್ತಿದ್ದೆ ಎಂದು ತಿಳಿಸಿದ್ದರು.
ಈ ಪ್ರಕರಣದಲ್ಲಿ ದ್ರಾವಿಡ್ ವಿರುದ್ಧ ಯಾವುದೇ ಆರೋಪಗಳಿಲ್ಲ. ಆದರೆ ಅವರ ಹೇಳಿಕೆಯನ್ನು ಸಾಕ್ಷ್ಯವಾಗಿ ಬಳಸಿ ಪ್ರಕರಣವನ್ನು ಬಲ ಪಡಿಸಲು ವಿಚಾರಣೆ ನಡೆಸಿದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸ್ನ ವಿಶೇಷ ದಳ ಅಧಿಕಾರಿಗಳು ರಾಜಸ್ತಾನ ತಂಡದ ಕೋಚ್ ಪ್ಯಾಡಿ ಆಪ್ಟನ್ ಅವರ ಹೇಳಿಕೆಯನ್ನು ದಾಖಲಿಸಲು ನಿರ್ಧರಿಸಿದೆ. ಆಪ್ಟನ್ ಭಾರತಕ್ಕೆ ಬಂದ ನಂತರ ಅವರ ಹೇಳಿಕೆಯನ್ನು ಪಡೆದು ಅದನ್ನು ಸಾಕ್ಷ್ಯಿಯನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.