ಕೊನೆ ಸ್ಥಾನಕ್ಕೆ ಕುಸಿದ ಆನಂದ್
ಜುರಿಕ್: ಗೆಲುವಿನ ಹಾದಿಗೆ ಮರಳಲು ಕಷ್ಟಪಡುತ್ತಿರುವ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್, ಇಲ್ಲಿ ನಡೆಯುತ್ತಿರುವ ಜುರಿಕ್ ಚೆಸ್ ಚಾಲೆಂಜ್ ಪಂದ್ಯಾವಳಿಯ ಐದನೇ ಸುತ್ತಿನಲ್ಲಿ ಇಸ್ರೆಲ್‌ನ ಬೋರಿಸ್ ಗೆಲ್‌ಫ್ಯಾಂಡ್ ವಿರುದ್ಧ ಡ್ರಾ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ ಸುತ್ತಿನಲ್ಲಿ ಇಟಲಿಯ ಫ್ಯಾಬಿಯಾನೊ ಕರ್ವಾನಾ ವಿರುದ್ಧ ಸೋಲನುಭವಿಸಿದ್ದ ಆನಂದ್, ಜೆಲ್ಫ್ಯಾಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದರಾದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ನಾಲ್ವರು ಆಟಗಾರರ ಡಬಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಕೇವಲ ಒಂದು ಸುತ್ತು ಬಾಕಿ ಇದ್ದು, ಪ್ರಶಸ್ತಿ ಗೆಲ್ಲುವ ಆನಂದ್ ಅವರ ಕನಸು ಕಮರಿದಂತಾಗಿದೆ.
ಇತ್ತ ಇಟಲಿಯ ಫ್ಯಾಬಿಯಾನೊ ಕರ್ವಾನ ರಷ್ಯಾದ ಲಾಡಿಮಿರ್ ಕ್ರಾಮ್‌ನಿಕ್ ವಿರುದ್ಧ ಡ್ರಾ ಸಾಧಿಸಿದ್ದು, ಪಂದ್ಯಾವಳಿಯಲ್ಲಿ 3 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಆನಂದ್ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದಾರೆ.
ವಾಕಿಂಗ್: ಇರ್ಫಾನ್‌ಗೆ 5ನೇ ಸ್ಥಾನ
ನವದೆಹಲಿ: ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ವಾಕಿಂಗ್‌ಪಟು ಕೊಲೊತುಮ್ ಥೊಡಿ ಇರ್ಫಾನ್, ಚೀನಾದ ಥೈಕಾಂಗ್‌ನಲ್ಲಿ ನಡೆಯುತ್ತಿರುವ ಐಎಎಎಫ್ 20 ಕಿ.ಮೀ ವಾಕಿಂಗ್ ರೇಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 5ನೇ ಸ್ಥಾನ ಪಡೆದಿದ್ದಾರೆ.
ಲಂಡನ್ ಒಲಿಂಪಿಕ್ಸ್‌ನಲ್ಲಿ 10ನೇ ಸ್ಥಾನ ಪಡೆದಿದ್ದ ಇರ್ಫಾನ್, 1 ಗಂಟೆ 20 ನಿಮಿಷ 59 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು. ಅವರು 1:20:21 ನಿಮಿಷಗಳಲ್ಲಿ ಈ ಹಿಂದೆ ಗುರಿ ತಲುಪಿದ್ದು, ಇದು ಅವರ ರಾಷ್ಟ್ರೀಯ ದಾಖಲೆಯಾಗಿದೆ.
ಒಲಿಂಪಿಕ್ಸ್ ಚಾಂಪಿಯನ್ ಚೆನ್ ದಿಂಗ್ ಉಷ್ಣದ ವಾತಾವರಣದಲ್ಲಿ ತನ್ನ ಗುರಿಯನ್ನು ತಲುಪುವಲ್ಲಿ ವಿಫಲರಾಗಿ ಅರ್ಧದಲ್ಲೇ ಹಿಂದಕ್ಕೆ ಸರಿದರು. ಇನ್ನು ಲಂಡನ್ ಒಲಿಂಪಿಕ್ಸ್‌ನಲ್ಲಿ ಏಳನೇ ಸ್ಥಾನಗಳಿಸಿದ್ದ ಚೀನಾದ ಲಿ ಜಿಯಾನ್ಬೊ 1:18:52 ನಿಮಿಷದಲ್ಲಿ ಗುರಿ ತಲುಪುವ ಮೂಲಕ ಜಯಗಳಿಸಿದರು.
ಎನ್‌ಸಿಎನಲ್ಲಿ ಉಮೇಶ್ ಅಭ್ಯಾಸ
ಬೆಂಗಳೂರು: ಬೆನ್ನು ನೋವಿನಿಂದ ಗುಣಮುಖರಾಗಿರುವ ವೇಗಿ ಉಮೇಶ್ ಯಾದವ್, ನಗರದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಆದಷ್ಟು ಬೇಗ ಫಿಟ್ನೆಸ್‌ಗೆ ಮರಳುವ ವಿಶ್ವಾಸದಲ್ಲಿದ್ದಾರೆ.
ನಾನು ಈಗ ಕ್ರಮೇಣ ಗುಣಮುಖವಾಗಿದ್ದು, ಕಳೆದ ಸೋಮವಾರದಿಂದ ಅಭ್ಯಾಸ ಆರಂಭಿಸಿದ್ದೇನೆ. ಕಳೆದ ಒಂದೂವರೆ ತಿಂಗಳಲ್ಲಿ ಮೊದಲ ಬಾರಿಗೆ ಬೆನ್ನು ನೋವು ಸಂಪೂರ್ಣವಾಗಿ ಗುಣಮುಖವಾಗಿದೆ. ಹಾಗಾಗಿ ನಾನು ಅಭ್ಯಾಸ ಆರಂಭಿಸಿದ್ದು, ಕ್ರಮೇಣವಾಗಿ ಶೇ.100ರಷ್ಟು ಫಿಟ್ ಆಗಿ ಬೌಲಿಂಗ್ ಮಾಡುತ್ತೇನೆ ಎಂದು ಯಾದವ್ ತಿಳಿಸಿದರು.
ಮೇರಿಗೆ ಭೂಮಿ ಮಂಜೂರು
ನವದೆಹಲಿ: ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಮಹಿಳಾ ಬಾಕ್ಸರ್ ಮೇರಿಕೋಮ್ ತಮ್ಮ ಕನಸಿನ ಬಾಕ್ಸಿಂಗ್ ಅಕಾಡೆಮಿ ತೆರೆಯಲು ಕಾತರರಾಗಿದ್ದು, ಈ ಅಕಾಡೆಮಿಗೆ ಭೂಮಿ ನೀಡುವುದಾಗಿ ಭರವಸೆ ನೀಡಿದ್ದ ಮಣಿಪುರ ಸರ್ಕಾರ ಭೂಮಿಯನ್ನು ಮಂಜೂರು ಮಾಡಿದೆ. ಮಣಿಪುರ ಸರ್ಕಾರ ಫೆ.19ರಂದು ಭೂಮಿ ಸಂಖ್ಯೆ 21/109/2011-ಆರ್ ಅನ್ನು ಮಂಜೂರು ಮಾಡಿದ್ದು, ಲಂಗೊನ್‌ನಲ್ಲಿರುವ ಮೇರಿಕೋಮ್ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿ ಈ ಅಕಾಡೆಮಿಯನ್ನು ಆರಂಭಿಸಲು 3.30 ಎಕರೆ ಭೂಮಿಯನ್ನು ಮಂಜೂರು ಮಾಡಿರುವ ಮುಖ್ಯಮಂತ್ರಿ ಒ ಇಬೊಬಿ ಸಿಂಗ್ ಹಾಗೂ ಅವರ ಸಚಿವ ಸಂಪುಟಕ್ಕೆ ಮೇರಿಕೋಮ್ ರಿಜಿನಲ್ ಬಾಕ್ಸಿಂಗ್ ಫೌಂಡೇಷನ್ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಅಕಾಡೆಮಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬಹುದಿನಗಳ ನನ್ನ ಕನಸು ನನಸಾಗುವ ಕಾಲ ಸನ್ನಿಹಿತವಾಗಿದ್ದು, ಇದಕ್ಕೆ ಸಹಕಾರ ನೀಡಿದ ಮುಖ್ಯಮಂತ್ರಿ ಒ ಇಬೊಬಿ ಸಿಂಗ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೇರಿಕೋಮ್ ತಿಳಿಸಿದರು.
ಪೆಪ್ಸಿಗೆ ಉನ್ಮುಕ್ತ್ ರಾಯಭಾರಿ
ನವದೆಹಲಿ: ಭಾರತದ ಉದಯೋನ್ಮುಖ ಆಟಗಾರ ಉನ್ಮುಕ್ತ್ ಚಂದ್ ಈಗ ಖಾಸಗಿ ಕಂಪನಿಗಳ ರಾಯಭಾರಿಯಾಗಿರುವ ಇತರೆ ಹಿರಿಯ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದು, ಪ್ರಖ್ಯಾತ ತಂಪು ಪಾನೀಯವಾಗಿರುವ ಪೆಪ್ಸಿ ಕಂಪನಿಗೆ ರಾಯಭಾರಿಯಾಗಿದ್ದಾರೆ.
ಯುವ ಜನತೆಯನ್ನು ಆಕರ್ಷಿಸುವ ಸಲುವಾಗಿ ಓ ಎಸ್ ಅಭಿ ಎಂಬ ಹೊಸ ಆಂದೋಲನ ಆರಂಭಿಸಿರುವ ಪೆಪ್ಸಿ, ಈ ಆಂದೋಲನದಲ್ಲಿ ಉನ್ಮುಕ್ತ್ ಚಂದ್ ಅವರನ್ನು ಆಯ್ಕೆ ಮಾಡಿಕೊಂಡಿದೆ.