ಕೆರಳಿದ ರಾಜ್ಯ, ತಬ್ಬಿಬ್ಬಾದ ಕೇರಳ
ಮುಷ್ತಾಕ್ ಅಲಿ ಟಿ20: ಮನೀಷ್ ಶತಕಾರ್ಧದ ಮಿಂಚು, ರಾಹುಲ್ ಆರ್ಭಟ
ಶಿವಮೊಗ್ಗ- ಮುಷ್ತಾಕ್ ಅಲಿ ಸ್ಮಾರಕ ದಕ್ಷಿಣ ವಲಯ ಟಿ-20 ಪಂದ್ಯಾವಳಿಯಲ್ಲಿ ಸೋಮವಾರ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ತಂಡಗಳು ಗೆಲುವು ಸಾಧಿಸಿದವು.
ಭದ್ರಾವತಿಯ ವಿಐಎಸ್ಎಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಆಟಗಾರರ ಅಬ್ಬರಕ್ಕೆ ತಬ್ಬಿಬ್ಬಾದ ಕೇರಳ ತಂಡ ಮಕಾಡೆ ಮಲಗಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ (ಸರಾಸರಿ 9.25) ಗಳಿಸಿತು. ಮಾಯಾಂಕ ಅಗರ್ವಾಲ್ 26 ಎಸೆತಗಳಲ್ಲಿ ಏಳು ಬೌಂಡರಿ ಸಹಿತ 33 ರನ್ ಸಿಡಿಸಿದರೆ, ಮನೀಷ್ ಪಾಂಡೆ ಈ ಸರಣಿಯ ಎರಡನೇ ಪಂದ್ಯದಲ್ಲೂ ಅರ್ಧಶತಕ ದಾಖಲಿಸಿದರು. ಅವರು 42 ಎಸೆತಗಳನ್ನೆದುರಿಸಿ ನಾಲ್ಕು ಬೌಂಡರಿ ಸಹಿತ 50 ರನ್ ಬಾರಿಸಿದರು.
ಮಾಯಾಂಕ ವಿಕೆಟ್ ಪತನದ ನಂತರ ಕ್ರೀಸ್ಗೆ ಆಗಮಿಸಿದ ರಾಹುಲ್ ಅಬ್ಬರಿಸಿದರು. ಎರಡು ಭರ್ಜರಿ ಸಿಕ್ಸರ್, ಐದು ಬೌಂಡರಿ ಸಹಿತ 62 ರನ್ ಸಿಡಿಸಲು ಅವರು ತೆಗೆದುಕೊಂಡಿದ್ದು ಕೇವಲ 37 ಎಸೆತಗಳನ್ನು. ಅಂತಿಮವಾಗಿ ಕರ್ನಾಟಕ ತಂಡ 9.25 ಸರಾಸರಿಯಲ್ಲಿ 185ರನ್ಗೆ ತನ್ನ ಇನ್ನಿಂಗ್ಸ್ ಮುಗಿಸಿತು.
ದೊಡ್ಡ ಸವಾಲು ಬೆನ್ನತ್ತಿಹೊರಟ ಕೇರಳ ತಂಡ ಯಾವುದೇ ಹಂತದಲ್ಲಿ ಪ್ರತಿರೋಧ ಒಡ್ಡಲಿಲ್ಲ. ಆ ತಂಡದ ರೋಹನ್ (14), ರಾಬರ್ಟ್ (21), ಪಿ.ಪ್ರಶಾಂತ್ (13), ಪ್ರಶಾಂತ್ ಪರಮೇಶ್ವರನ್ (ಅಜೇಯ 13) ಇದ್ದಿದ್ದರಲ್ಲಿ ಕೊಂಚ ಹೋರಾಟ ನಡೆಸಿದರು. ಉಳಿದವರು ಎರಡಂಕಿ ಮೊತ್ತವನ್ನೂ ತಲುಪಲಿಲ್ಲ.
ಅಂತಿಮವಾಗಿ 20 ಓವರ್ ಮುಗಿದಾಗ ಕೇರಳ ತಂಡ 9 ವಿಕೆಟ್ ಕಳೆದುಕೊಂಡು 102 ರನ್ ಗಳಿಸಿತು.
ಕರ್ನಾಟಕ ಪರ ಕೆ.ಎಲ್.ಅಕ್ಷಯ್ ಹಾಗೂ ಅಮಿತ್ ವರ್ಮ ತಲಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಅಂತಿಮವಾಗಿ ಕರ್ನಾಟಕ ತಂಡ 83 ರನ್ಗಳ ಅರ್ಹ ಜಯದೊಂದಿಗೆ ಗೆಲುವಿನ ಅಭಿಯಾನ ಮುಂದುವರಿಸಿತು.
ಆಂಧ್ರಕ್ಕೆ ಗೆಲುವು
ಶಿವಮೊಗ್ಗದ ಪಿಇಎಸ್ ಮೈದಾನದಲ್ಲಿ ನಡೆದ ಆಂಧ್ರಪ್ರದೇಶ ಹಾಗೂ ಹೈದ್ರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಆಂಧ್ರ ತಂಡ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಹೈದ್ರಾಬಾದ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ಗಳಿಸಿತು. ಈ ಗುರಿ ಬೆನ್ನಟ್ಟಿದ ಆಂಧ್ರ ತಂಡದ ದಾಂಡಿಗರು ಇನ್ನೂ ಏಳು ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಹೈದ್ರಾಬಾದ್ ಪರ ಪಿ.ಅಕ್ಷತ್ ರೆಡ್ಡಿ (44ರನ್), ಟಿ. ಸುಮನ್(56 ಎಸೆತದಲ್ಲಿ 85) ರನ್ ದಾಖಲಿಸಿ ಪ್ರೇಕ್ಷಕರನ್ನು ರಂಜಿಸಿದರು. ಆಂಧ್ರ ಪರ ಕೆ.ಎಸ್.ಭರತ್ (36), ಡಿ.ಬಿ.ಪ್ರಶಾಂತ ಕುಮಾರ್ (36), ಎ.ಜಿ.ಪ್ರದೀಪ್ (ಅಜೇಯ 30) ಉತ್ತಮ ರೀತಿಯಲ್ಲಿ ಬ್ಯಾಟ್ ಬೀಸಿದರು.
ತಮಿಳುನಾಡಿಗೆ ಗೆಲವು
ಶಿವಮೊಗ್ಗದ ಜೆಎನ್ಎನ್ಸಿಇ ಕಾಲೇಜು ಮೈದಾನದಲ್ಲಿ ನಡೆದ ತಮಿಳುನಾಡು - ಗೋವಾ ಪಂದ್ಯದಲ್ಲಿ ತಮಿಳುನಾಡು ವಿಜಯದ ನಗೆ ಬೀರಿತು. ಮೊದಲು ಬ್ಯಾಟಿಂಗ್ ಮಾಡಿದ ಗೋವಾ 7 ವಿಕೆಟ್ ನಷ್ಟಕ್ಕೆ 122 ರನ್ಗಳಿಸಲಷ್ಟೆ ಶಕ್ತವಾಯಿತು. ಈ ಸುಲಭ ಗುರಿ ಬೆನ್ನಟ್ಟಿದ ತಮಿಳುನಾಡು ಕೇವಲ ಎರಡು ಹುದ್ದರಿ ಕಳೆದುಕೊಂಡು 16.5 ಓವರ್ಗೆ ವಿಜಯದ ಗೆರೆ ಮುಟ್ಟಿತು.
- ಶ್ರೀಕಾಂತ ಭಟ್