ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟ: ಮಂಗಳೂರಿಗೆ ಸಮಗ್ರ ಚಾಂಪಿಯನ್‌ಷಿಪ್

Srinivasa Murthy VN
Updated On : 19 Mar 2013, 11:01 am

ಕ.ಪ್ರ.ವಾರ್ತೆ ತುಮಕೂರು ಮಾ.19
ತುಮಕೂರಿನ ಶ್ರೀದೇವಿ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಲಾಗಿದ್ದ 36ನೇ ರಾಜ್ಯ ಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನ ತಂಡಗಳು ಬಾಲಕರ ಮತ್ತು ಬಾಲಕಿಯರ ಸಮಗ್ರ ಚಾಂಪಿಯನ್ ಷಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿವೆ.
ಶ್ರೀದೇವಿ ಪಾಲಿಟೆಕ್ನಿಕ್ ಕ್ರೀಡಾಂಗಣ ಮತ್ತು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ವಿವಿಧ ಕ್ರೀಡೆಗಳಲ್ಲಿ ಬಾಲಕರ ವಿಭಾಗದಲ್ಲಿ ಮಂಗಳೂರಿನ ಪಾಲಿಟೆಕ್ನಿಕ್ ತಂಡ ಒಟ್ಟು 96 ಅಂಕಗಳೊಂದಿಗೆ ಚಾಂಪಿಯನ್ ಆದರೆ ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ತಂಡ 48 ಅಂಕಗಳೊಂದಿಗೆ ಸಮಗ್ರ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬಾಲಕರ ವಿಭಾಗದಲ್ಲಿ ತುಮಕೂರಿನ ಆರ್ಯಭಾರತಿ ಪಾಲಿಟೆಕ್ನಿಕ್‌ನ ಜಿ. ಪವನಕುಮಾರ್ ಮತ್ತು ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನ ಅಶೋಕ್ ಅವರು ತಲಾ 10 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್‌ಗಳಾದರೆ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನ ಅನಿತಾ, ಪದ್ಮಾವತಿ ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನ ಎಚ್. ನೀತಾ ಮತ್ತು ವೈಯಕ್ತಿಕ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು. ರಾಜ್ಯಾದ್ಯಂತ ಒಟ್ಟು 80 ಪಾಲಿಟೆಕ್ನಿಕ್‌ಗಳ 1100 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸಮಾರೋಪ ಭಾಷಣ ಮಾಡಿದ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ್ ಕೇವಲ 20 ದಿನಗಳ ಅವಧಿಯಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ ಶ್ರೀದೇವಿ ಪಾಲಿಟೆಕ್ನಿಕ್ ಹಾಗೂ ವಿದ್ಯಾಸಂಸ್ಥೆಯ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಗಂಗಾಧರ ಕೊಡ್ಲಿ ಮಾತನಾಡಿ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದರು. ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಟ್ರಸ್ಟಿ ಡಾ. ರಮಣ ಹುಲಿನಾಯ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇವಲ ಕ್ರಿಕೆಟ್ ಮಾತ್ರ ಜನಪ್ರಿಯವಾಗಿರುವ ಇಂದಿನ ದಿನಗಳಲ್ಲಿ ಇಂತಹ ಕ್ರೀಡಾಕೂಟಗಳಿಂದ ಇತರೆ ಕ್ರೀಡೆಗಳಿಗೂ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತದೆ ಎಂದರು.
ಸಮಾರಂಭದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ನಿರಂಜನದಾಸ್ ರಾಜ್ಬಾನ್ ಮತ್ತು ಎ.ಎಂ. ಭೋಜೆಧರ್, ಶ್ರೀದೇವಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಟಿ.ವಿ. ಬ್ರಹ್ಮದೇವಯ್ಯ, ಸಮರ್ಥ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕಿ ರಾಣಿ ಚಂದ್ರಶೇಖರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement