ಬಾಂಗ್ಲಾ ವಿರುದ್ಧ ಲಂಕೆಗೆ ಗೆಲುವು
ಕೊಲಂಬೊ: ತಮ್ಮ 35ನೇ ಹುಟ್ಟುಹಬ್ಬವನ್ನು ಮಂಗಳವಾರ ವಿಶೇಷವಾಗಿ ಆಚರಿಸಿಕೊಂಡ ಹೆರಾತ್ ಅವರ ಮಾರಕ ಬೌಲಿಂಗ್ಗೆ ತತ್ತರಿಸಿದ ಬಾಂಗ್ಲಾದೇಶ, ಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ 7 ವಿಕೆಟ್ಗಳ ಸೋಲು ಕಂಡಿದೆ. ಪಂದ್ಯದ ಕೊನೆಯ ದಿನವಾದ ಮಂಗಳವಾರ, ಬಾಂಗಾ ದ್ವಿತೀಯ ಇನಿಂಗ್ಸ್ನಲ್ಲಿ 265 ರನ್ಗಳಿಗೆ ಸರ್ವಪತನ ಕಂಡಿತು.
ಆಕ್ರಮಣಕಾರಿ ದಾಳಿ ಪ್ರದರ್ಶಿಸಿದ ರಂಗಾನಾ ಹೆರಾತ್ ಏಳು ವಿಕೆಟ್ ಪಡೆದು ಲಂಕಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರಲ್ಲದೇ, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಈ ಜಯದೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಶ್ರೀಲಂಕಾ ತಂಡ, 1-0 ಅಂತರದಲ್ಲಿ ಗೆದ್ದುಕೊಂಡಿದೆ.
ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಲಂಕಾ ತಂಡದ ಮೊದಲ ಇನಿಂಗ್ಸನ್ನು 346 ರನ್ಗಳಿಗೆ ನಿಯಂತ್ರಿಸಿದ ಬಾಂಗ್ಲಾ, ನಂತರ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿ ದಿನಾಂತ್ಯದ ಹೊತ್ತಿಗೆ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಪೇರಿಸಿತ್ತು.
ಪಂದ್ಯ ಗೆಲ್ಲಬೇಕಾದರೆ, ದೊಡ್ಡ ಮೊತ್ತದ ಸವಾಲನ್ನು ಶ್ರೀಲಂಕಾ ತಂಡಕ್ಕೆ ನೀಡಬೇಕಿದ್ದ ಬಾಂಗ್ಲಾ, ಮಂಗಳವಾರದ ದಿನದಾಟದಲ್ಲಿ ಕೇವಲ 265 ರನ್ಗಳಿಗೆ ಆಲೌಟ್ ಆಯಿತು.
ಸೋಮವಾರ ದಿನಾಂತ್ಯಕ್ಕೆ ಅಜೇಯರಾಗಿ ಉಳಿದಿದ್ದ ಬಾಂಗ್ಲಾದ ಬ್ಯಾಟ್ಸ್ಮನ್ಗಳಾದ ಮೋಮಿನುಲ್ ಹಕ್ ಹಾಗೂ ಮುಷ್ಫಿಖುರ್ ರಹೀಂ ಇಬ್ಬರೂ ಮಂಗಳವಾರ ಬ್ಯಾಟಿಂಗ್ ಮುಂದುವರೆಸಿದರು. ಆದರೆ, ತಂಡದ ಮೊತ್ತಕ್ಕೆ ಕೇವಲ 2 ರನ್ ಸೇರಿಸುತ್ತಲೇ ಮೋಮಿನುಲ್ ಹಕ್ (37) ವಿಕೆಟ್ ಒಪ್ಪಿಸಿ ಹೊರನಡೆದರು. ಆನಂತರ, ಬಂದ ನಾಸಿರ್ ಹುಸೇನ್ ಡಕ್ ಔಟ್ ಆಗಿ ಹೊರನಡೆದರು. ಅವರ ನಂತರ ಬಂದ ಸೊಹಾಗ್ ಗಾಜಿ (26), ರಹೀಂ ಜೊತೆ 7ನೇ ವಿಕೆಟ್ಗೆ 31 ರನ್ ಸೇರಿಸಿ, ವಿಕೆಟ್ ಒಪ್ಪಿಸಿದರು. ಈ 4 ವಿಕೆಟ್ ಕಬಳಿಸಿದ್ದು ಹೆರಾತ್. ಆನಂತರ, ಮುಷ್ಫಿಖುರ್ ರಹೀಂ (40), ರುಬೇಲ್ ಹುಸೇನ್ (7) ರುಬೇಲ್ ಇಸ್ಲಾಂ ಅವರನ್ನು ಬೇಗನೇ ಕಳೆದುಕೊಂಡ ಬಾಂಗ್ಲಾ 265 ರನ್ಗಳಿಗೆ ಆಲೌಟ್ ಆಯಿತು.
ಪಂದ್ಯ ಗೆಲ್ಲಲು ಕೇವಲ 160 ರನ್ಗಳ ಗುರಿ ಪಡೆದ ಲಂಕಾ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿತು. ತಂಡದ ಮೊತ್ತ ಕೇವಲ 31 ರನ್ ಆಗಿದ್ದಾಗಲೇ ಆರಂಭಿಕ ಕರುಣಾರತ್ನೆ (16) ಅವರು ಔಟಾದರು. ಆಗ, ಇನಿಂಗ್ಸ್ ಚುಕ್ಕಾಣಿ ಹಿಡಿದ ಮತ್ತೊಬ್ಬ ಆರಂಭಿಕ ದಿಲ್ಷಾನ್ ಹಾಗೂ ಮೂರನೇ ಕ್ರಮಾಂಕದ ಸಂಗಕ್ಕಾರ 2ನೇ ವಿಕೆಟ್ಗೆ 94 ರನ್ ಸೇರಿಸಿದರು. ದಿಲ್ಶಾನ್, ಸಂಗಕ್ಕಾರ ಔಟಾದ ನಂತರ, ಬಂದ ನಾಯಕ ಮ್ಯಾಥ್ಯೂಸ್ (ಅಜೇಯ 13), ತಿರಿಮಾನೆ (ಅಜೇಯ 13) ಜೊತೆಗೂಡಿ, ತಂಡಕ್ಕೆ ಜಯ ತಂದರು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾ ಪ್ರಥಮ ಇನಿಂಗ್ಸ್ 240
ಶ್ರೀಲಂಕಾ ಪ್ರಥಮ ಇನಿಂಗ್ಸ್ 346
ಬಾಂಗ್ಲಾ ದ್ವಿತೀಯ ಇನಿಂಗ್ಸ್ 265
(ಸೋಮವಾರ ದಿನಾಂತ್ಯಕ್ಕೆ 158/4)
ಮುಷ್ಫೀಕರ್ ರಹೀಂ 40, ಮೊಮಿಮುಲ್ ಹಕ್ 37
ಬೌಲಿಂಗ್: ಹೆರಾತ್ 89/7, ಎರಂಗಾ 39/2
ಶ್ರೀಲಂಕಾ ದ್ವಿತೀಯ ಇನಿಂಗ್ಸ್ 160/3
ದಿಲ್ಶಾನ್ 57, ಸಂಗಕ್ಕಾರ 55
ಬೌಲಿಂಗ್: ರಬಿವುಲ್ ಇಸ್ಲಾಂ 42/2, ಸೊಹಾಗ್ ಗಾಝಿ 47/1
ಪಂದ್ಯಶ್ರೇಷ್ಠ: ಹೆರಾತ್
ಸರಣಿ ಶ್ರೇಷ್ಠ: ಸಂಗಕ್ಕಾರ