ಹೋರಾಡಿ ಟೈಟಾದ ಕರ್ನಾಟಕ
ಶಿವಮೊಗ್ಗ: ಕರ್ನಾಟಕ- ತಮಿಳುನಾಡು ನಡುವಿನ ಕ್ರಿಕೆಟ್ ಪಂದ್ಯ ಎಂದರೆ ಸಹಜವಾಗಿ ಅದು ಕುತೂಹಲಕಾರಿ ಪಂದ್ಯ. ಕಿಕ್ಕಿರಿದು ಸೇರಿದ್ದ ಕ್ರಿಕೆಟ್ ಪ್ರೇಮಿಗಳು ಉಸಿರು ಬಿಗಿ ಹಿಡಿದಿದ್ದರು. ಪಂದ್ಯದ ಕೊನೆಯ ಓವರ್ ಎಸೆಯಲು ಅವಕಾಶ ಪಡಕೊಂಡ ಶಿವಮೊಗ್ಗದ ಹುಡುಗ ಅಕ್ಷಯ್ ಮೇಲೆ ಬಹಳ ನಿರೀಕ್ಷೆ. ಈ ಹಂತದಲ್ಲಿ ತಮಿಳುನಾಡಿಗೆ ಗೆಲ್ಲಲುಬೇಕಾಗಿದ್ದು 10 ರನ್. ಆದರೆ, ಕರ್ನಾಟಕದ ಗೆಲವಿನ ಆಸೆ ಕೈಗೂಡಲೇ ಇಲ್ಲ, ಅದೇ ರೀತಿ ತಮಿಳುನಾಡು ಕೂಡ ಸೋಲಲಿಲ್ಲ.
ಶಿವಮೊಗ್ಗ ಜೆಎನ್ಎನ್ಸಿ ಮೈದಾನದಲ್ಲಿ ಮಂಗಳವಾರ ನಡೆದ ಮುಷ್ತಾಕ್ ಅಲಿ ದಕ್ಷಿಣ ವಲಯ ಟಿ-20 ಪಂದ್ಯ ಟೈನಲ್ಲಿ ಅಂತ್ಯ ಕಂಡಿತು. ಪಂದ್ಯ ಮುಗಿದ ನಂತರ ಇತ್ತಂಡದ ಆಟಗಾರರು, 6-7 ಸಾವಿರ ಪ್ರೇಕ್ಷಕರು ಉತ್ತರ ಸಿಗದ ಪಂದ್ಯದ ಬಗ್ಗೆ ಗುನುಗುತ್ತಲೇ ಕ್ರೀಡಾಂಗಣದಿಂದ ಹೊರಬಿದ್ದರು.
ಟಾಸ್ ಗೆದ್ದು ಕರ್ನಾಟಕ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದ ತಮಿಳುನಾಡು ತಂಡ ಕರಾರುವಾಕ್ ಬೌಲಿಂಗ್ ನಡೆಸಿತು. 16 ಓವರ್ ವರೆಗೆ ಸರಾಸರಿ 6 ರಂತೆ ರನ್ ಸೇರಿಸಲಷ್ಟೇ ಶಕ್ತವಾಗಿದ್ದ ಕರ್ನಾಟಕ ಕೊನೆಯ ನಾಲ್ಕು ಓವರ್ಗಳಲ್ಲಿ ರನ್ ಧಾರಣೆ ಹೆಚ್ಚಿಸಿಕೊಂಡಿತು. 38 ಎಸೆತ ಎದುರಿಸಿ 2 ಸಿಕ್ಸರ್, ಮೂರು ಬೌಂಡರಿಗಳೊಂದಿಗೆ ಅವರು 51 ರನ್ ಕಲೆಹಾಕಿದ ಕರುಣ್ ನಾಯರ್ ಅಜೇಯರಾಗಿ ಉಳಿದರು. ಉಳಿದಂತೆ, ಮನೀಷ್ ಪಾಂಡೆ (35), ಸಿ.ಎಂ. ಗೌತಮ್ (26), ಮಾಯಾಂಕ್ ಅಗರ್ವಾಲ್ (19) ಕರ್ನಾಟಕ ಮೊತ್ತ ಹೆಚ್ಚುವಲ್ಲಿ ಕೊಡುಗೆ ನೀಡಿದರು. ಅಂತಿಮವಾಗಿ ಕರ್ನಾಟಕ ಏಳು ವಿಕೆಟ್ ಕಳೆದುಕೊಂಡು 150 ರನ್ ಪೇರಿಸಲು ಶಕ್ತವಾಯಿತು.
ನಂತರ ಬ್ಯಾಟಿಂಗ್ ಆರಂಭಿಸಿದ ತಮಿಳುನಾಡು ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. 7 ಓವರ್ ಮುಗಿಯುವುದರೊಳಗೆ 42 ರನ್ಗೆ ಮೂರು ಮಹತ್ವದ ವಿಕೆಟ್ ಕಳೆದುಕೊಂಡಿತ್ತು. ಇದರಲ್ಲಿ ಬದರೀನಾಥ್ ವಿಕೆಟ್ ಸಹ ಸೇರಿತ್ತು. ನಂತರ ತಂಡದ ಮೊತ್ತವನ್ನು ನಿಧಾನವಾಗಿ ಬೆಳೆಸಿದ ದಿನೇಶ್ ಕಾರ್ತಿಕ್ ಹಾಗೂ ಅಭಿನವ್ ಮುಕುಂದ್ ತಂಡವನ್ನು ಆಘಾತದಿಂದ ಹೊರತಂದರಲ್ಲದೇ ಗೆಲುವಿನ ದಾರಿಯತ್ತ ಒಯ್ದರು.
ಕಾವೇರಿದ ಪಂದ್ಯ: ಪಂದ್ಯದ 16ನೇ ಓವರ್ ಎಸೆಯಲು ಬಂದ ಅಭಿಮನ್ಯು ಮಿಥುನ್ ಪಂದ್ಯದ ದಿಕ್ಕು ಬದಲಿಸುವ ಅಸ್ತ್ರಗಳನ್ನು ಪ್ರಯೋಗಿಸಿದರು. ಇವರ ತಂತ್ರಗಾರಿಕೆಗೆ ದಿನೇಶ್ ಕಾರ್ತಿಕ್ (37 ರನ್, 2 ಸಿಕ್ಸರ್, 2 ಬೌಂಡರಿ ಸಹಿತ) ಹಾಗೂ ಅಭಿನವ್ ಮುಕುಂದ್ (42) ಪೆವಿಲಿಯನ್ನತ್ತ ಮುಖಮಾಡಬೇಕಾಯಿತು. 16ನೇ ಓವರ್ನಲ್ಲಿ 9 ರನ್ ನೀಡಿದ ಮಿಥುನ್ ಎರಡು ವಿಕೆಟ್ ಎತ್ತಿದ್ದರು.
17ನೇ ಓವರ್ ಎಸೆದ ನಾಯಕ ವಿನಯ್ ಕುಮಾರ್ ಐದು ರನ್ ನೀಡಿ ಸುರೇಶ್ ಕುಮಾರ್ ವಿಕೆಟ್ ಪಡೆದುಕೊಂಡರು. ಈ ಹಂತದಲ್ಲಿ ಕರ್ನಾಟಕ ಮೇಲುಗೈ ಸಾಧಿಸಿತು ಎನ್ನುವಾಗಲೇ 18ನೇ ಓವರ್ ತ.ನಾಡು ಆಟಗಾರರು 13 ರನ್ ಸೇರಿಸಿದರು. 19ನೇ ಓವರ್ನಲ್ಲಿ ವಿನಯ್ 12 ರನ್ ತೆತ್ತು ಎದುರಾಳಿ ತಂಡದ ಕೊನೆಯ ಓವರ್ ಗುರಿಯನ್ನು ಕಡಿಮೆಗೊಳಿಸಿದರು.
ಪಂದ್ಯದ ಕೊನೆಯ ಓವರ್ನಲ್ಲಿ ತಮಿಳುನಾಡು ತಂಡಕ್ಕೆ ಬೇಕಿದ್ದಿದ್ದು 10 ರನ್. ಬೌಲಿಂಗ್ಗೆ ಅವಕಾಶ ಇದ್ದಿದ್ದು, ಸ್ಟುವರ್ಟ್ ಬಿನ್ನಿ, ಮನೀಷ್ ಪಾಂಡೆ, ಗೌತಮ್. ಆದರೆ, ನಾಯಕನ ಆಯ್ಕೆ ಅಕ್ಷಯ್ ಕಡೆ ಒಲಿಯಿತು.
20ನೇ ಓವರ್ನ ಮೊದಲ ಐದು ಎಸೆತಗಳಲ್ಲೂ ಎದುರಾಳಿ ತಂಡ ಒಂದೊಂದೆ ರನ್ ಪಡೆಯಲು ಶಕ್ತವಾಯಿತು. ಈ ಮಧ್ಯೆ 8 ಎಸೆತಗಳಲ್ಲಿ 3 ಬೌಂಡರಿ ಸಹಿತ 16 ರನ್ ಗಳಿಸಿದ್ದ ವ್ಯೋಮಕೇಶ್ ಅವರು ವಿನಯ್ ಕುಮಾರ್ ಅವರ ಉತ್ತಮ ತ್ರೋಗೆ ರನ್ ಔಟ್ ಆಗಿದ್ದರು.
ಕೊನೆಯ ಎಸೆತದಲ್ಲಿ ಗೆಲುವಿಗಾಗಿ ತಮಿಳುನಾಡು ತಂಡಕ್ಕೆ ಬೇಕಿದ್ದಿದ್ದು ಐದು ರನ್. ಕಾತರದ ಕೊನೆಯ ಎಸೆತವನ್ನು ಲಕ್ಷ್ಮೀಪತಿ ಬಾಲಾಜಿ ನಿರಾಯಾಸವಾಗಿ ಡೀಪ್ ಸ್ಕೇರ್ ಲೆಗ್ ವಿಭಾಗಕ್ಕೆ ತಳ್ಳಿ ಬೌಂಡರಿ ಗಿಟ್ಟಿಸಿದರು.
ಉಸಿರು ಬಿಗಿ ಹಿಡಿದು ಕಾತರದಿಂದ ಕಾದಿದ್ದ ಆ ಕ್ಷಣ ಕಂಡ ಪ್ರೇಕ್ಷಕ ಸಮೂಹ ಒಂದು ಕ್ಷಣ ಅವಕ್ಕಾಗಿ ಹೋಯಿತು. ಪಂದ್ಯ ಟೈ ಆಗಿತ್ತು. ಪಂದ್ಯ ಸೋಲಲಿಲ್ಲ ಎಂದು ತಮಿಳುನಾಡು ತಂಡ ನಿಟ್ಟುಸಿರು ಬಿಟ್ಟರೆ, ಕೈಗೆಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಕರ್ನಾಟಕ ತಂಡದ ಆಟಗಾರರು ಕೈಕೈ ಹಿಸುಕಿಕೊಂಡರು.
ಕೊನೆಗೆ ಎರಡೂ ತಂಡಗಳಿಗೆ ತಲಾ ಎರಡೆರಡು ಅಂಕಗಳನ್ನು ನೀಡಲಾಯಿತು.
ಸ್ಕೋರ್ ಬೋರ್ಡ್
ಕರ್ನಾಟಕ: 150/7 (20 ಓವರ್)
ಕರುಣ್ 51 (38), ಮನೀಷ್ 35 (32)
ಬೌಲಿಂಗ್: ಸುನೀಲ್ 27/1, ವ್ಯೋಮಹೇಶ್ 34/2, ಸುರೇಶ್ ಕುಮಾರ್ 21/1, ರಾಹಿಲ್ ಶಾ 33/1
ತಮಿಳುನಾಡು: 150/7 (20 ಓವರ್)
ಅಪರಾಜಿತ್ 17(16), ಅಭಿನವ್ 42(40), ದಿನೇಶ್ ಕಾರ್ತಿಕ್ 37 (25), ವಿಜಯ್ ಶಂಕರ್ 17(12), ವ್ಯೂಮಹೇಶ್ 16(8)
ಬೌಲಿಂಗ್: ವಿನಯ್ 26/1, ಎ.ಮಿಥುನ್ 29/3, ಎಸ್.ಎಲ್. ಅಕ್ಷಯ್ 29/1, ಸ್ಟುವರ್ಟ್ ಬಿನ್ನಿ 18/1
- ಶ್ರೀಕಾಂತ ಭಟ್