ಕೆವಿನ್ ಪೀಟರ್ಸನ್ ಐಪಿಎಲ್‌ನಿಂದ ದೂರ
ನವದೆಹಲಿ: ನ್ಯೂಜಿಲೆಂಡ್ ಪ್ರವಾಸದ ವೇಳೆ ಮೊಣಕಾಲು ನೋವು ಮಾಡಿಕೊಂಡಿರುವ ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಐಪಿಎಲ್ 6ನೇ ಆವೃತ್ತಿಗೆ ಅಲಭ್ಯರಾಗಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಇದು ಆಘಾತ ಉಂಟುಮಾಡಿದೆ. ಕಾರಣ ಪೀಟರ್ಸನ್ ಡೆಲ್ಲಿ ತಂಡ ಸ್ಟಾರ್ ಬ್ಯಾಟ್ಸ್‌ಮನ್ ಆಗಿದ್ದಾರೆ.
ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ಕ್ವೀನ್‌ಸ್ಟೌನ್‌ನಲ್ಲಿ ಅಭ್ಯಾಸ ನಡೆಸಿದ್ದಾಗ ಪೀಟರ್ಸನ್ ತಮ್ಮ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಚೇತರಿಸಿಕೊಳ್ಳಲು ನಿರ್ಧಿಷ್ಟ ಸಮಯ ಬೇಕಾಗುತ್ತದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ತಿಳಿಸಿದೆ. 'ಬಲ ಮೊಣಕಾಲಿಗೆ ಗಂಭೀರ ಗಾಯವಾಗಿರುವುದು ಸ್ಕ್ಯಾನ್‌ನಿಂದ ಬಹಿರಂಗವಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ 32 ವರ್ಷದ ಪೀಟರ್ಸನ್ ದೆಹಲಿಗೆ ತೆರಳುತ್ತಿದ್ದಾರೆ. ಅಲ್ಲಿ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ' ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ನ್ಯೂಜಿಲೆಂಡ್ ವಿರುದ್ಧ ಶುಕ್ರವಾರದಿಂದ ಆರಂಭವಾಗಲಿರುವ 3ನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೂ ಪೀಟರ್ಸನ್ ಲಭ್ಯರಾಗುವುದಿಲ್ಲವಂತೆ.
'ಗಾಯದ ಹಿನ್ನೆಲೆಯಲ್ಲಿ ಪೀಟರ್ಸನ್ ಆರರಿಂದ ಏಳು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆಯಂತೆ. ಹೀಗಾಗಿ ಪೀಟರ್ಸನ್ ಅದುವರೆಗೂ ಐಪಿಎಲ್ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ ಆಡುವುದರಿಂದ ಹಿಂದೆ ಸರಿದಿದ್ದಾರೆ' ಎಂದು ಅದು ತಿಳಿಸಿದೆ.
ಏಪ್ರಿಲ್ 3ರಂದು ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಐಪಿಎಲ್‌ನ ಆರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ ತಂಡ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. 2011ರಲ್ಲಿ ಡೆಕ್ಕನ್ ಚಾರ್ಜರ್ ತಂಡದಲ್ಲಿದ್ದ ಕೆವಿನ್ ಪೀರ್ಟಸನ್ ಪಂದ್ಯಾವಳಿಯಲ್ಲಿ ಯಾವುದೇ ಪಂದ್ಯದಲ್ಲಿ ಆಡಿರಲಿಲ್ಲ. 2012ರ ಆವೃತ್ತಿಯಲ್ಲಿ ಪೀಟರ್ಸನ್ ಡೇರ್ ಡೆವಿಲ್ ತಂಡಕ್ಕೆ ಮಾರಾಟವಾಗಿದ್ದರು.