ನಾಕೌಟ್ ನಿರೀಕ್ಷೆಯಲ್ಲಿ ವಿನಯ್ ಪಡೆ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ.20-
ಬಿಸಿಸಿಐ ಮುಷ್ತಾಕ್ ಅಲಿ ಟ್ರೋಫಿ- ದಕ್ಷಿಣ ವಲಯ ಅಂತಾರಾಜ್ಯ ಟಿ-20 ಕ್ರಿಕೆಟ್ ಪಂದ್ಯಾವಳಿಯ ಪೂರ್ವಾರ್ಧ ಮುಕ್ತಾಯವಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡು ತಂಡ ನಾಕೌಟ್ ಸುತ್ತಿಗೆ ತೇರ್ಗಡೆಯಾಗುವುದು ಬಹುತೇಕ ಖಚಿತವಾಗಿದೆ.
ಆಡಿರುವ 3 ಪಂದ್ಯಗಳಲ್ಲಿ ಈ ಎರಡೂ ತಂಡಗಳು ತಲಾ 10 ಅಂಕ ಗಳಿಸಿದ್ದು, ರಾಂಚಿಯಲ್ಲಿ ನಡೆಯುವ ನಾಕೌಟ್ ಹಂತದ ಪಂದ್ಯಗಳಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸಲಿವೆ.
ಪಂದ್ಯಾವಳಿಯ ಉತ್ತರಾರ್ಧದಲ್ಲಿ ತಮಿಳುನಾಡು ತಂಡಕ್ಕೆ ಕೇರಳ ಹಾಗೂ ಹೈದ್ರಾಬಾದ್ ಎದುರಾಳಿಯಾದರೆ, ಕರ್ನಾಟಕಕ್ಕೆ ಹೈದ್ರಾಬಾದ್ ಹಾಗೂ ಆಂಧ್ರ ತಂಡ ಎದುರಾಳಿ. ಸದ್ಯದಕ್ಕೆ ಈ ಎರಡೂ ತಂಡಗಳ ಬಲಾಬಲದ ಮುಂದೆ ಎದುರಾಳಿಗಳು ದುರ್ಬಲವೇ.
ಹೈದ್ರಾಬಾದ್ ಆಡಿರುವ ಮೂರು ಪಂದ್ಯಗಳಲ್ಲಿ ಸೋತು ಸುಣ್ಣವಾಗಿದೆ. ಆಂಧ್ರ ತಂಡ ಒಂದು ಪಂದ್ಯದಲ್ಲಷ್ಟೇ ಗೆಲುವು ಕಂಡಿದೆ. ತಮಿಳುನಾಡು ತಂಡದ ಮುಂದಿನ ಎದುರಾಳಿಗಳ ಪೈಕಿ ಕೇರಳ ಇದ್ದಿದ್ದರಲ್ಲಿ ವಾಸಿ. ಆ ತಂಡ ಎರಡು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಗೋವಾ ಒಂದು ಪಂದ್ಯ ಗೆದ್ದ ತೃಪ್ತಿಯಲ್ಲಿದೆ.
ಅತಿ ಆತ್ಮವಿಶ್ವಾಸವೇ ಮುಳು: ಪ್ರಸ್ತುತ ಕರ್ನಾಟಕ ತಂಡ ಬಲಿಷ್ಠ. ರಾಂಚಿಯಲ್ಲಿ ನಡೆಯುವ ಪಂದ್ಯಾವಳಿಯಗೂ ಕರ್ನಾಟಕವೂ ಹಾಟ್ ಫೇವರಿಟ್. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಮಾಯಾಂಕ ಅಗರ್ವಾಲ್, ಮನೀಷ್ ಪಾಂಡೆ, ಕೆ.ಎಲ್. ರಾಹುಲ್, ಕರುಣ್ ನಾಯರ್ ಫಾರ್ಮನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿನಯ್ ಕುಮಾರ್, ಹಾಗೂ ಅಭಿಮನ್ಯು ಮಿಥುನ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರು.
ಇಷ್ಟಾದರೂ ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಪ್ರಕಾರ ಕರ್ನಾಟಕಕ್ಕೆ ಅತಿಯಾದ ಅತ್ಮವಿಶ್ವಾಸ ಎಂಬುದು ಪದೇ ಪದೇ ಎಡವುವಂತೆ ಮಾಡುತ್ತಿದೆ. ಕಳೆದ ಸಾಲಿನ ರಣಜಿ ಪಂದ್ಯವೂ ಇದಕ್ಕೆ ಒಂದು ಸ್ಪಷ್ಟ ನಿದರ್ಶನ ಎಂದು ಕ್ರಿಕೆಟ್ ಪಂಡಿತರು ಉದಾಹರಣೆ ಸಹಿತ ವಿವರಿಸುತ್ತಾರೆ. ಲೀಗ್ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡ ಅಂತಿಮ ಹಂತಗಳಲ್ಲಿ ಎಡವುತ್ತಿದೆ. ಹೀಗಾಗಿ ಈ ಸಮಸ್ಯೆಗೊಂದು ಮದ್ದು ಬೇಕೆಂದು ಹಿರಿಯ ಕ್ರಿಕೆಟ್ ಆಟಗಾರರೊಬ್ಬರು ಅಭಿಪ್ರಾಯಪಡುತ್ತಾರೆ.
ಕರ್ನಾಟಕ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಅಭಿರಾಮ್ ಹೇಳುವಂತೆ, ತಂಡ ಬಲಿಷ್ಠವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ಸಮರ್ಥ ಪ್ರದರ್ಶನ ತೋರುತ್ತಿದೆ. ಶಿವಮೊಗ್ಗದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ ಪಂದ್ಯಗಳನ್ನಾಡುತ್ತಿರುವ ಆಟಗಾರರು ಉತ್ಸಾಹದಲ್ಲಿದ್ದಾರೆಂದು ವಿವರಿಸಿದ್ದಾರೆ.
ಐಪಿಎಲ್ ಕಣ್ಣು: ಐಪಿಎಲ್ ಪಂದ್ಯಾವಳಿಯಲ್ಲಿ ಆಡಬೇಕೆಂಬುದು ಬಹುತೇಕ ಆಟಗಾರರ ಕನಸು. ಇದಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಎಲ್ಲಾ 6 ತಂಡದ ಆಟಗಾರರು ತಮ್ಮ ಸಾಮರ್ಥ್ಯ ಒರೆಗೆ ಹಚ್ಚಿದ್ದಾರೆ. ಈ ನಡೆಯುವೆಯೇ ಆರ್ಸಿಬಿ ತಂಡದ ಆಯ್ಕೆಗಾರರು ಶಿವಮೊಗ್ಗದ ಪಂದ್ಯಾವಳಿಯ ಮೇಲೆ ಕಣ್ಣಿಟ್ಟಿದ್ದು, ಕಳೆದ ಮೂರು ದಿನಗಳಿಂದ ಇಲ್ಲೇ ಬೀಡು ಬಿಟ್ಟಿದ್ದು ಆಟಗಾರರ ಬಲಾಬಲವನ್ನು ಅರಿಯುವ ಪ್ರಯತ್ನ ನಡೆಸಿದ್ದಾರೆ. ಕೆಲವು ಪ್ರಮುಖ ಆಟಗಾರರಿಗೆ ಅನೇಕ ಸಲಹೆಗಳನ್ನೂ ನೀಡಿದ್ದು ಕಂಡುಬಂದಿದೆ.
ಸಿಟ್ಟಾದ್ರು ವಿನಯ್, ಕೆರಳಿದ್ರು ಮಿಥುನ್
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪಂದ್ಯ ಸಿಟ್ಟಾದ ವಿನಯ್, ಕೆರಳಿದ ಮಿಥುನ್ ದರ್ಶನಕ್ಕೆ ಸಾಕ್ಷಿಯಾಯಿತು. ಅದು ಮೊದಲೇ ಹೈ ಟೆನ್ಷನ್ ಪಂದ್ಯ, ವಿಜಯಲಕ್ಷ್ಮಿ ಅತ್ತಿಂದಿತ್ತ ಆಗುತ್ತಲೇ ಇದ್ದಳು. ಒಂದು ಬಾರಿ ಕರ್ನಾಟಕ ಪರವಾಗಿದ್ದರೆ, ಒಂದು ಕ್ಷಣ ತಮಿಳುನಾಡು ಕಡೆಗೆ ಪಂದ್ಯ ಒಲಿಯುತ್ತಿತ್ತು. ಇಂತಹ ಸಂದರ್ಭದಲ್ಲಿ ಆಫ್ ಸ್ಪಿನರ್ ಗೌತಮ್ ಬೌಲಿಂಗ್ ವೇಳೆ ವಿನಯ್ ಕುಮಾರ್ ಕೆರಳಿದ ಪ್ರಸಂಗ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೊಳಿಸಿತು. ಗೌತಮ್ ಬಾಲನ್ನು ತಮಿಳುನಾಡು ತಂಡದ ವ್ಯೋಮಕೇಶನ್ ಸತತವಾಗಿ ಎರಡು ಬೌಂಡರಿ ಬಾರಿಸಿದರು. ಇದರಿಂದ ಅಸಮಾಧಾನಗೊಂಡ ವಿನಯ್ ಕುಮಾರ್ ನೇರವಾಗಿ ಏರಿದ ದನಿಯಲ್ಲಿ ಗೌತಮ್ ಮೇಲೆ ಸಿಟ್ಟಾದರು. ಈ ಸಂಗತಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಅದೇ ರೀತಿ, ಡೀಪ್ ಸ್ಕ್ವೇರ್ ಲೆಗ್ ವಿಭಾಗದಲ್ಲಿ ಫೀಲ್ಡಿಂಗ್ನಲ್ಲಿದ್ದ ಮಿಥುನ್ ಪ್ರೇಕ್ಷಕರೊಬ್ಬರ ಮಾತಿನಿಂದ ಕೆರಳಿ, ಫೀಲ್ಡ್ ಒಳಗೆ ಬಂದು ಮಾತನಾಡು ನೋಡ್ತಿನಿ ಎಂದು ಗದರಿ ತಮ್ಮ ಸಿಟ್ಟು ಪ್ರದರ್ಶಿಸಿದ್ದರು. ಎರಡು ಬಾರಿ ಪ್ರೇಕ್ಷಕರತ್ತ ಕೈ ಸನ್ನೆಯ ಮೂಲಕವೇ ತಮ್ಮ ಅಸಮಾಧಾನ ಹೊರಹಾಕಿದರು. ಅಂತಿಮವಾಗಿ 19ನೇ ಓವರರ್ನಲ್ಲಿ 2 ವಿಕೆಟ್ ಕಿತ್ತು ಪಂದ್ಯದ ದಿಕ್ಕು ಬದಲಿಸಿದ ಮಿಥುನ್ಗೆ ಅದೇ ಪ್ರೇಕ್ಷಕ ವರ್ಗ ಚಪ್ಪಾಳೆ ಹೊಡೆದು ಗೌರವ ಸಲ್ಲಿಸಿದ್ದು ವಿಶೇಷ.
ಪಂದ್ಯಾವಳಿ ಉತ್ತರಾರ್ಧ
ಮಾ.21 ಗೋವಾ-ಕರ್ನಾಟಕ (ಜೆಎನ್ಎನ್ಸಿಇ), ಕೇರಳ-ತಮಿಳುನಾಡು (ಪೆಸೆಟ್), ಹೈದ್ರಾಬಾದ್-ಕರ್ನಾಟಕ (ವಿಐಎಸ್ಎಲ್, ಭದ್ರಾವತಿ)
ಮಾ.22 ಆಂಧ್ರ-ಕರ್ನಾಟಕ (ಜೆಎನ್ಎನ್ಸಿಇ), ಹೈದ್ರಾಬಾದ್-ತಮಿಳುನಾಡು (ಪೆಸೆಟ್), ಕೇರಳ-ಗೋವಾ (ವಿಐಎಸ್ಎಲ್, ಭದ್ರಾವತಿ)
ಪಾಯಿಂಟ್ ಪಟ್ಟಿ
ತಂಡ ಆಡಿರುವ ಪಂದ್ಯ ಪಾಯಿಂಟ್
ಕರ್ನಾಟಕ 3 10
ತಮಿಳುನಾಡು 3 10
ಕೇರಳ 3 8
ಗೋವಾ 3 4
ಆಂಧ್ರ 3 4
ಹೈದ್ರಾಬಾದ್ 3 0
- ಶ್ರೀಕಾಂತ ಭಟ್