ಮುಂದುವರಿದ ಕ್ಲಾರ್ಕ್, ವ್ಯಾಟ್ಸನ್ ಮುನಿಸು
ನಾಯಕ ಮೈಕಲ್ ಕ್ಲಾರ್ಕ್ ಮತ್ತು ಉಪ ನಾಯಕ ಶೇನ್ ವ್ಯಾಟ್ಸನ್ ಸಂವಹನ ನಡೆಸದಿರುವುದು, ಇಬ್ಬರ ಸ್ನೇಹ ಹಳಸಿರುವ ಅನುಮಾನ ಮೂಡಿಸಿದೆ.
ನವದೆಹಲಿ: ಭಾರತದ ವಿರುದ್ಧ ಶುಕ್ರವಾರ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡ ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನಲ್ಲಿ ಅಭ್ಯಾಸ ನಡೆಸಿತು. ಮೂರನೇ ಟೆಸ್ಟ್ ಪಂದ್ಯಕ್ಕೆ ಕೈಬಿಡಲಾಗಿದ್ದ ಶೇನ್ ವ್ಯಾಟ್ಸನ್ ಅಭ್ಯಾಸದ ಸಂದರ್ಭದಲ್ಲಿ ಹೆಚ್ಚು ಗಮನ ಸೆಳೆದರು.
ಆದರೆ, ಅಭ್ಯಾಸದ ಸಮಯದಲ್ಲಿ ಆಸೀಸ್ ತಂಡದ ನಾಯಕ ಮೈಕಲ್ ಕ್ಲಾರ್ಕ್ ಮತ್ತು ಉಪ ನಾಯಕ ಶೇನ್ ವ್ಯಾಟ್ಸನ್ ಸಂವಹನ ನಡೆಸದಿರುವುದು, ಇಬ್ಬರ ನಡುವಿನ ಸ್ನೇಹ ಹಳಸಿರುವ ಬಗ್ಗೆ ಅನುಮಾನ ಮೂಡಿಸಿದೆ.
ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಮೊಹಾಲಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಿಂದ ವ್ಯಾಟ್ಸನ್ ಅವರನ್ನು ಕೈಬಿಡಲಾಗಿತ್ತು. ಇದಾದ ನಂತರ, ವ್ಯಾಟ್ಸನ್ ಪತ್ನಿ ಅವರು ಮಗುವಿಗೆ ಜನ್ಮನೀಡಿದ್ದರಿಂದ ಅವರು ಸಿಡ್ನಿಗೆ ಮರಳಿದ್ದರು. ಬೆನ್ನು ನೋವಿನಿಂದ ಬಳಲುತ್ತಿರುವ ಆಸೀಸ್ ನಾಯಕ ಮೈಕಲ್ ಕ್ಲಾರ್ಕ್ ಅಭ್ಯಾಸದಲ್ಲಿ ಭಾಗವಹಿಸಲಿಲ್ಲ. ಆದರೆ, ಕ್ಲಾರ್ಕ್ ಎಂದಿನಂತೆ ತಂಡದ ಎಲ್ಲ ಆಟಗಾರರೊಂದಿಗೆ ಮೈದಾನದಲ್ಲಿ ಚರ್ಚೆ ನಡೆಸಿದ್ದು ಕಂಡುಬಂದಿತು.
ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ದೈಹಿಕ ತಜ್ಞರೊಂದಿಗೆ ಕ್ಲಾರ್ಕ್ ಸಲಹೆಗಳನ್ನು ಪಡೆದರು. ಇದೇ ಸಂದರ್ಭದಲ್ಲಿ ವ್ಯಾಟ್ಸನ್ 35 ನಿಮಿಷಗಳ ಕಾಲ ವೇಗದ ಮತ್ತು ಸ್ಪಿನ್ ಬೌಲರ್ಗಳಿಗೆ ಬ್ಯಾಟಿಂಗ್ ಅಭ್ಯಾಸ ನಡೆಸಿದರು.
ತಂಡದ ತರಬೇತುದಾರ ಮಿಕಿ ಆರ್ಥರ್ ಅವರೊಂದಿಗೆ ವ್ಯಾಟ್ಸನ್ ಸ್ವಲ್ಪ ಹೊತ್ತು ಚರ್ಚೆ ನಡೆಸಿದರು. ಆ ಸಮಯದಲ್ಲಿ ಆರ್ಥರ್ ಸ್ಪಿನ್ನರ್ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಜೇವಿಯರ್ ಡೊಹಾರ್ಟಿ ಅವರಿಗೆ ನಿರ್ಧಿಷ್ಟ ಲೈನ್ನಲ್ಲಿ ಬೌಲಿಂಗ್ ಮಾಡಲು ಸಲಹೆ ನೀಡುತ್ತಿದ್ದರು.
ಯುವ ಆಟಗಾರ ಸ್ಟಿವನ್ ಸ್ಮಿತ್ ಜತೆ ವ್ಯಾಟ್ಸನ್ ದೀರ್ಘ ಕಾಲದವರೆಗೆ ಮಾತುಕತೆ ನಡೆಸಿದರು.
ನಾಯಕ ಕ್ಲಾರ್ಕ್ ನೆಟ್ನಿಂದ ಹೊರಬಂದ ನಂತರ, ವ್ಯಾಟ್ಸನ್ ನೆಟ್ ಅಭ್ಯಾಸದಲ್ಲಿ ತೊಡಗಿದರು. ನಂತರ ವ್ಯಾಟ್ಸನ್ ನೆಟ್ನಿಂದ ಮೈದಾನಕ್ಕೆ ತೆರಳಿದ ನಂತರ ಕ್ಲಾರ್ಕ್ ಇತರ ಆಟಗಾರರ ಅಭ್ಯಾಸವನ್ನು ಪರಿಶೀಲಿಸಿದರು.
ಇಬ್ಬರ ನಡುವೆ ಸಂಬಂಧ ಹಳಸಿರುವ ಕುರಿತು ಹರಡಿರುವ ವದಂತಿಗೆ ಇದು ಸಾಕ್ಷಿಯಂತಿತ್ತು.
ಆಸ್ಟ್ರೇಲಿಯಾದ ಹೆಚ್ಚಿನ ಆಟಗಾರರು ನೆಟ್ ಪ್ರಾಕ್ಟೀಸ್ ಮಾಡಿದರೆ, ವ್ಯಾಟ್ಸನ್ ಮಾತ್ರ ಪ್ರಮುಖ ಅಂಗಣದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ಪಡೆಯುವ ಕುರಿತು ತರಬೇತುದಾರ ಆರ್ಥರ್ ಜತೆ ಸಲಹೆ ಪಡೆಯುತ್ತಿದ್ದರು.
'ಸದ್ಯಕ್ಕೆ ವ್ಯಾಟ್ಸನ್ ತಂಡದ ನಾಯಕರಲ್ಲ. ಆದರೆ, ಕ್ಲಾರ್ಕ್ ಅಲಭ್ಯರಾದರೆ ಮಾತ್ರ ಉಪ ನಾಯಕ ವ್ಯಾಟ್ಸನ್ ನಾಯಕತ್ವ ವಹಿಸಿಕೊಳ್ಳುವ ನಿರೀಕ್ಷೆಗಳಿವೆ' ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಎಡ್ ಕೋವನ್ ಉತ್ತರಿಸಿದರು.
ಬುಧವಾರದ ಅಭ್ಯಾಸದಲ್ಲಿ ಹೆಚ್ಚು ಗಮನ ಸೆಳೆದವರು ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್. ಡೇವಿಡ್ ವಾರ್ನರ್, ಫಿಲಿಪ್ ಹ್ಯೂಸ್, ಪ್ಯಾಟಿನ್ಸನ್ ಅವರು ಲಯ ಕಂಡುಕೊಳ್ಳದ ಕಾರಣ, ಹೆಚ್ಚು ಹೊತ್ತು ಅಭ್ಯಾಸ ನಡೆಸಿದರು. ಹಿಮ್ಮಡಿ ನೋವಿನಿಂದ ತವರಿಗೆ ಮರಳಿದ ಮಿಚೆಲ್ ಸ್ಟಾರ್ಕ್ ಸ್ಥಾನದಲ್ಲಿ ಪ್ಯಾಟಿನ್ಸನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.