ಸಚಿನ್ ಜೊತೆ ಭಿನ್ನಾಭಿಪ್ರಾಯ ಇರುತ್ತಿತ್ತು: ಧೋನಿ
ನವದೆಹಲಿ: 'ಸಚಿನ್ ತೆಂಡೂಲ್ಕರ್ ಅವರು ನನ್ನ ಪಾಲಿನ ಹೀರೋ ಆಗಿದ್ದರೂ, ಪಂದ್ಯದ ವೇಳೆ ಮಾಡುತ್ತಿದ್ದ ತಂತ್ರಗಾರಿಕೆ ವಿಷಯದಲ್ಲಿ ನನ್ನ ಹಾಗೂ ಅವರ ನಡುವೆ ಹಲವಾರು ಬಾರಿ ಭಿನ್ನಾಭಿಪ್ರಾಯಗಳು ಇರುತ್ತಿದ್ದವು' ಎಂದು ಧೋನಿ ಹೇಳಿದ್ದಾರೆ. ಬುಧವಾರ ಬಿಡುಗಡೆಗೊಂಡ 'ತೆಂಡೂಲ್ಕರ್: ದ ಕ್ರಿಕೆಟರ್ ಆಫ್ ದ ಸೆಂಚುರಿ' ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಧೋನಿ, ಈ ಮಾತುಗಳನ್ನು ಹೇಳಿದರು.
ತಮ್ಮ ಮೆಚ್ಚಿನ ನಾಯಕ ಹಾಗೂ ತಮ್ಮ ನಡುವಿನ ಆಂತರಿಕ ವಿಷಯಗಳ ಬಗ್ಗೆ ಇದೇ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿರುವ ಧೋನಿ, 'ಪಂದ್ಯದಲ್ಲಿನ ತಂತ್ರಗಾರಿಕೆ ವಿಷಯದಲ್ಲಿ ಕೆಲವೊಮ್ಮೆ ನನ್ನ ಹಾಗೂ ಸಚಿನ್ ಇಬ್ಬರ ಆಲೋಚನೆಗಳಲ್ಲಿ ಭಿನ್ನತೆ ಇರುತ್ತಿದ್ದವು. ನಾನು ನಾಯಕನಾಗುವ ಮೊದಲೇ ಇಂಥ ಅನೇಕ ಪರಿಸ್ಥಿತಿಗಳು ಉದ್ಭವಿಸುತ್ತಿದ್ದವು' ಎಂದು ಅವರು ಹೇಳಿದರು.