ಧೋನಿ ಪಡೆಗೆ ಐತಿಹಾಸಿಕ ಗೆಲುವು
81 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 4-0 ದೊಡ್ಡ ಅಂತರದಲ್ಲಿ ಟೆಸ್ಟ್ ಸರಣಿಯೊಂದನ್ನು ಗೆದ್ದ ಹಿರಿಮೆ ಧೋನಿ ಪಡೆಗೆ.
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿದ್ದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಜಯ ಸಾಧಿಸುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದೆ. 81 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 4-0 ದೊಡ್ಡ ಅಂತರದಲ್ಲಿ ಟೆಸ್ಟ್ ಸರಣಿಯೊಂದನ್ನು ಗೆದ್ದ ಹಿರಿಮೆಗೆ ಧೋನಿ ಪಡೆ ಪಾತ್ರವಾಗಿದೆ.
ಪಂದ್ಯದ ಮೂರನೇ ದಿನವಾದ ಭಾನುವಾರ, ಬ್ಯಾಟ್ಸ್ಮನ್ಗಳಿಗೆ ಪ್ರತಿಕೂಲವಾಗಿದ್ದ ಪಿಚ್ನಲ್ಲಿ ತನ್ನ ಮೊದಲ ಇನಿಂಗ್ಸ್ ಮುಂದುವರೆಸಿದ್ದ ಭಾರತ, 272ಕ್ಕೆ ಆಲೌಟ್ ಆಯಿತು.
ಆನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ, ಕೇವಲ 167 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು, ಗೆಲುವಿಗಾಗಿ ಭಾರತಕ್ಕೆ 155 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ, 31.1 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ, ಜಯದ ನಗೆ ಬೀರಿತು. ಚೇತೇಶ್ವರ ಪೂಜಾರ ಅವರ ಅಜೇಯ 82 (95 ಎಸೆತಗಳಲ್ಲಿ) ರನ್, ಭಾರತದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಸಂಕಷ್ಟದಲ್ಲೂ ದಿಟ್ಟ ನಡೆ: ಶುಕ್ರವಾರ ಆರಂಭವಾಗಿದ್ದ ಐದು ದಿನಗಳ ಪಂದ್ಯ, ಭಾನುವಾರ ಮುಟ್ಟುವಷ್ಟರಲ್ಲಿ, ಪಿಚ್ ಬ್ಯಾಟ್ಸ್ಮನ್ಗಳ ವೈರಿಯಂತೆ ವರ್ತಿಸಿತು. ಬ್ಯಾಟ್ ಮಾಡಲು ತೀರಾ ಪ್ರಯಾಸ ಪಡಬೇಕಾದ ಪರಿಸ್ಥಿತಿ ಬ್ಯಾಟ್ಸ್ಮನ್ಗಳದ್ದು. ಇದರಿಂದಾಗಿ, ಪಿಚ್ನ ನೇರ ಲಾಭ ಪಡೆದಿದ್ದು ಬೌಲರ್ಗಳು.
ಆಸೀಸ್ನ ದ್ವಿತೀಯ ಇನಿಂಗ್ಸ್ ಅನ್ನು 164 ರನ್ಗಳಿಗೆ ಮೊಟಕುಗೊಳಿಸುವಲ್ಲಿ ಯಶಸ್ವಿಯಾದ ಭಾರತದ ದ್ವಿತೀಯ ಇನಿಂಗ್ಸ್ ಅನ್ನು ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ಆರಂಭಿಸಿದರು.
ಆದರೆ, ಕೇವಲ 1 ರನ್ ಗಳಿಸಿದ ವಿಜಯ್, ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ ಅನವಶ್ಯಕವಾಗಿ ರಿವರ್ಸ್ ಸ್ವೀಪ್ ಮಾಡಲು ಹೋಗಿ, ಕ್ಲೀನ್ಬೌಲ್ಡ್ ಆಗಿ ಹೊರನಡೆದರು.
ಈ ಹಂತದಲ್ಲಿ ಚೇತೇಶ್ವರ ಪೂಜಾರ ಅವರಿಗೆ ಜೋಡಿಯಾದ ವಿರಾಟ್ ಕೊಹ್ಲಿ ಉತ್ತಮ ಸಾಥ್ ನೀಡಿದರು. ಎಚ್ಚರಿಕೆಯ ಆಟವಾಡಿದ ಈ ಇಬ್ಬರೂ 2ನೇ ವಿಕೆಟ್ಗೆ 104 ರನ್ ಸೇರಿಸಿ, ಭಾರತದ ಗೆಲುವಿನ ಹಾದಿಯನ್ನು ಸುಲಭವಾಗಿಸಿದರು. ಈ ಹಂತದಲ್ಲಿ ಸ್ಟ್ರೋಕ್ ಪ್ಲೇಗೆ ಮುಂದಾದ ಪೂಜಾರ ಕೆಲವು ಉತ್ತಮ ಹೊಡೆತಗಳಿಗೆ ಕೈ ಹಾಕಿದರು. ಈ ಇಬ್ಬರ ಉತ್ತಮ ಜುಗಲ್ ಬಂದಿಯಿಂದಾಗಿ, ಭಾರತ 9ನೇ ಓವರ್ನಲ್ಲಿ 50 ರನ್ ಗಡಿ ಮುಟ್ಟಿತು.
ಮಿಚೆಲ್ ಜಾನ್ಸನ್ ಮಾಡಿದ ಇನಿಂಗ್ಸ್ನ 12ನೇ ಓವರ್ನಲ್ಲಿ ಮೂರು ಬೌಂಡರಿಗಳನ್ನು ಚಚ್ಚಿದ ಪೂಜಾರ, ತಂಡದ ರನ್ ಗತಿಯನ್ನು ಮತ್ತಷ್ಟು ಹೆಚ್ಚಿಸಿದರು. 18ನೇ ಓವರ್ ಮುಕ್ತಾಯವಾಗುವ ವೇಳೆಗೆ, 54 ಎಸೆತಗಳಿಂದ ಪೂಜಾರ ವೈಯಕ್ತಿಕವಾಗಿ 50 ರನ್ ಕಲೆಹಾಕಿದರೆ, ಭಾರತ ನೂರ ರನ್ ಗಡಿ ದಾಟಿತು.
ವೈಯಕ್ತಿಕವಾಗಿ 60 ರನ್ ಗಳಿಸಿದ್ದ ಕೊಹ್ಲಿ, ಲಯಾನ್ ಎಸೆತದಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾದರು. ಅವರ ನಂತರ, ಕ್ರೀಸ್ಗೆ ಆಗಮಿಸಿದ್ದು ಸಚಿನ್ ತೆಂಡೂಲ್ಕರ್. ಆದರೆ, ಕೇವಲ 1 ರನ್ ಗಳಿಸಿದ ದೇವರು, ಲಯಾನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು ಪೆವಿಲಿಯನ್ ಸೇರಿಕೊಂಡರು.
ಅವರ ಹಿಂದೆಯೇ ಕ್ರೀಸ್ಗೆ ಹೀಗೆ ಬಂದು ಹಾಗೆ ಹೋಗಿದ್ದು ಅಜಿಂಕ್ಯ ರಹಾನೆ.ಅವರೂ ಗಳಿಸಿದ್ದು ಕೇವಲ 1 ರನ್. ಹೀಗೆ, ಬೋಜನ ವಿರಾಮದ ನಂತರ ಪಟಪಟನೇ 3 ವಿಕೆಟ್ಗಳನ್ನು ಕಳೆದುಕೊಂಡಿದ್ದರಿಂದ ಭಾರತ ಪಾಳಯದಲ್ಲಿ ಕೊಂಚ ಆತಂಕದ ಛಾಯೆ ಆವರಿಸಿತ್ತು. ಆದರೆ, ಧೋನಿ- ಪೂಜಾರ ಜೊತೆಯಾಟ ಈ ಆತಂಕವನ್ನು ಮಂದಹಾಸವಾಗಿಸುವಲ್ಲಿ ಯಶಸ್ವಿಯಾಯಿತು.
ವಿಕೆಟ್ ಚೆಲ್ಲದೇ ನಿಧಾನವಾಗಿ ರನ್ ಪೇರಿಸುತ್ತಾ ಸಾಗಿದ ಈ ಜೋಡಿ, ತಂಡವನ್ನು ಮೆಲ್ಲಗೇ ಗೆಲವಿನ ಗಡಿಯತ್ತ ಹೊರಳಿಸಿತು. ಇನಿಂಗ್ಸ್ನ 31ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ ಬೌಲಿಂಗ್ನಲ್ಲಿ ಸತತ ಮೂರು ಬೌಂಡರಿ ಬಾರಿಸಿದ ಪೂಜಾರ, ತಂಡವನ್ನು ಗೆಲವಿನ ಸನಿಹಕ್ಕೆ ಕೊಂಡೊಯ್ದರು.
32ನೇ ಓವರ್ನ 2ನೇ ಎಸೆತದಲ್ಲಿ ಲಯಾನ್ ಎಸೆತಕ್ಕೆ ವಿನ್ನಿಂಗ್ ಬೌಂಡರಿ ಬಾರಿಸಿದ ಧೋನಿ, ಭಾರತಕ್ಕೆ 6 ವಿಕೆಟ್ ಗೆಲುವು ತಂದಿತ್ತರು.
ಬೇಗನೇ ಮುಗಿದ ಇನಿಂಗ್ಸ್: ದಿನದ ಆರಂಭದಲ್ಲಿ ಭಾರತದ ಮೊದಲ ಇನಿಂಗ್ಸ್ ಮುಂದುವರೆಸಿದ್ದ ತನ್ನ ಕೊನೆಯ ಎರಡು ವಿಕೆಟ್ಗಳನ್ನು (ಇಶಾಂತ್ ಶರ್ಮಾ ಹಾಗೂ ಪ್ರಗ್ಯಾನ್ ಓಜಾ) ಕೇವಲ 8 ನಿಮಿಷಗಳಲ್ಲಿ ಕಳೆದುಕೊಂಡು 272 ರನ್ಗಳಿಗೆ ಆಲೌಟ್ ಆಯಿತು.
ಆಸೀಸ್ ಕುಸಿತ: ಆನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ, ಆರಂಭದಿಂದಲೇ ಮುಗ್ಗರಿಸಿತು.
ಸ್ಪಿನ್ನರ್ ರವೀಂದ್ರ ಜಡೇಜಾ (5 ವಿಕೆಟ್), ಅಶ್ವಿನ್ (2 ವಿಕೆಟ್) ಬೌಲಿಂಗ್ಗೆ ತತ್ತರಿಸಿದ ಕಾಂಗರೂ ಪಡೆ, 46.3 ಓವರ್ಗಳಲ್ಲಿ 164 ರನ್ಗಳಿಗೆ ಆಲೌಟ್ ಆಯಿತು.
ಕೊನೆಯ ಕ್ರಮಾಂಕದ ಪೀಟರ್ ಸಿಡ್ಲ್ ಮಾತ್ರ ಕೆಚ್ಚೆದೆಯ ಹೋರಾಟ ತೋರಿ, ವೈಯಕ್ತಿಕ 50 ರನ್ ಗಳಿಸಿದರು.
ಅಶ್ವಿನ್ ಸಾಧನೆ
ಪ್ರಸಕ್ತ ಸರಣಿಯಲ್ಲಿ 29 ವಿಕೆಟ್ ಪಡೆದ ಅಶ್ವಿನ್, 4 ಪಂದ್ಯಗಳ ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್ ಎನಿಸಿದರು. 2004-05ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅನಿಲ್ ಕುಂಬ್ಳೆ 27 ವಿಕೆಟ್ ಗಳಿಸಿದ್ದರು.
ಇಶಾಂತ್ಗೆ ದಂಡ
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾಗೆ ಪಂದ್ಯ ಶುಲ್ಕದ ಶೇ. 15ರಷ್ಟು ದಂಡ ವಿಧಿಸಲಾಗಿದೆ.
ಆಸ್ಟ್ರೇಲಿಯಾದ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ಬೌಲ್ಡ್ ಮಾಡಿದ ಇಶಾಂತ್, ಅವರಿಗೆ ಪೆವಿಲಿಯನ್ ಕಡೆ ಕೈ ತೋರಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ.
ಇಶಾಂತ್ ಶರ್ಮಾ ನಿಯಮ ಉಲ್ಲಂಘಿಸಿರುವುದು ಸಾಬೀತಾದ ನಂತರ ಐಸಿಸಿ ಮ್ಯಾಚ್ ರೆಫ್ರೀ ರಂಜನ್ ಮುದಗಲ್ ದಂಡ ವಿಧಿಸಿದ್ದಾರೆ.
ಶರ್ಮಾ, ಪ್ಯಾಟಿನ್ಸನ್ ಅವರೊಂದಿಗೆ ಆ ರೀತಿ ವರ್ತಿಸಿದ ಹಿನ್ನೆಲೆಯಲ್ಲಿ ಐಸಿಸಿ ನೀತಿ ಸಂಹಿತೆಯ ಕಲಂ 2.1.6 ಪ್ರಕಾರ 1ನೇ ಸ್ತರದ ಅಪರಾಧ ಎಸಗಿದ್ದಾರೆ. ಆಟಗಾರರು ಆಟಗಾರರನ್ನು ಬೆಂಬಲಿಸಬೇಕು ಎಂಬುದನ್ನು ಈ ಕಲಂ ಹೇಳುತ್ತದೆ. ಅದರಂತೆ, ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಬೌಲರ್ ಅಥವಾ ಕ್ಷೇತ್ರ ರಕ್ಷಕರು ಬ್ಯಾಟ್ಸ್ಮನ್ ಔಟ್ ಮಾಡಿದಾಗ, ಪೆವಿಲಿಯನ್ ಕಡೆಗೆ ಕೈ ತೋರಿಸುವಂತಿಲ್ಲ.
ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದಾಗ ಪೆವಿಲಿಯ ಕಡೆ ಕೈ ತೋರಿಸಿದ ರವೀಂದ್ರ ಜಡೇಜಾ ಮತ್ತು ಇಶಾಂತ್ ಶರ್ಮಾ ಅವರಿಗೆ ಅಂಪೈರ್ ಅಲೀಂ ದಾರ್ ಎಚ್ಚರಿಕೆ ನೀಡಿದ್ದರು.
ಭಾರತದಲ್ಲಿ ಸಚಿನ್ ಕೊನೆ ಪಂದ್ಯ?
ನವದೆಹಲಿ: ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಭಾರತದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದರೆ? ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಭಾನುವಾರ ಅಭಿಮಾನಿಗಳಲ್ಲಿ ಇದೇ ಚರ್ಚೆ.
ಆದರೆ, ಯಾರೂ ಸಚಿನ್ ಗುಡ್ ಬೈ ಎಂದು ಕೂಗಲಿಲ್ಲ. ಸಚಿನ್ ಬ್ಯಾಟ್ ಶಕ್ತಿಯೇ ಅಂತಹದ್ದು. ಸಚಿನ್ ಟೆಸ್ಟ್ ಕ್ರಿಕೆಟ್ಗೆ ಯಾವಾಗ ವಿದಾಯ ಹೇಳುತ್ತಾರೆ ಎಂಬುದನ್ನು ನಿರೀಕ್ಷೆ ಮಾಡಲಾಗದು. 2014 ಮಧ್ಯದವರೆಗೂ ಭಾರತದಲ್ಲಿ ಟೆಸ್ಟ್ ಪಂದ್ಯಗಳು ನಡೆಯುವುದಿಲ್ಲ. ಹೀಗಾಗಿಯೇ ಸಚಿನ್ ಭಾರತದಲ್ಲಿ ಇನ್ನು ಟೆಸ್ಟ್ ಆಡುವುದಿಲ್ಲವೇ? ಎಂಬ ಅನುಮಾನ ಅಭಿಮಾನಿಗಳನ್ನು ಕಾಡತೊಡಗಿದೆ. ಕಳೆದ 24 ವರ್ಷಗಳಲ್ಲಿ 198 ಟೆಸ್ಟ್ ಪಂದ್ಯಗಳು ಮತ್ತು 463 ಏಕದಿನ ಪಂದ್ಯಗಳು ಹಾಗೂ 1 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಚಿನ್ ಬ್ಯಾಟ್ ಹಿಡಿದು ಅಂಗಣಕ್ಕಿಳಿದಾಗ ಅಥವಾ ಪೆವಿಲಿಯನ್ಗೆ ತೆರಳುವಾಗ ಅಭಿಮಾನಿಗಳ ಘೋಷಣೆಗಳು ಕೇಳಿಬರುತ್ತಿದ್ದವು. ಆದರೆ, ಭಾನುವಾರ ಆಸ್ಟ್ರೇಲಿಯಾ ವಿರುದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಸಚಿನ್ ಪಿಚ್ಗೆ ಆಗಮಿಸಿದಾಗ ಮತ್ತು ನಿರ್ಗಮಿಸಿದಾಗ ಪರಿಸ್ಥಿತಿ ಇದಕ್ಕೆ ಭಿನ್ನವಾಗಿತ್ತು.
ಈ ಪಂದ್ಯದಲ್ಲಿ ಸಚಿನ್ ಜಯದ ರನ್ ಬಾರಿಸುತ್ತಾರೆ ಎಂದೇ ಹಲವಾರು ಅಭಿಮಾನಿಗಳು ಭಾವಿಸಿದ್ದರು. ಆದರೆ, ಐದು ಎಸೆತಗಳನ್ನು ಎದುರಿಸಿದ ಸಚಿನ್ ಒಂದು ರನ್ ಗಳಿಸಿ ನೇಥನ್ ಲಯಾನ್ ಎಸೆತದಲ್ಲಿ ಎಲ್ಬಿಗೆ ಬಲಿಯಾಗುವ ಮೂಲಕ ನಿರಾಸೆ ಮೂಡಿಸಿದರು. ಆಗ ಇಡೀ ಮೈದಾನದ ತುಂಬಾ ಮೌನ ಆವರಿಸಿಕೊಂಡಿತ್ತು. ಆದರೆ, ಡ್ರೆಸ್ಸಿಂಗ್ ತಲುಪಿದ ನಂತರವೂ ಸಚಿನ್ ಪರ ಅಭಿಮಾನಿಗಳು ಘೋಷಣೆಗಳನ್ನು ಕೂಗಿದ್ದು ಕೇಳಿಬಂದಿತು. ಸಚಿನ್ ಮತ್ತೆ ಆಡದಿದ್ದರೇನಂತೆ, ಅವರನ್ನು ಮಾತ್ರ ಕ್ರಿಕೆಟ್ ಎಂದೂ ಮರೆಯುವುದಿಲ್ಲ. ಅಷ್ಟು ಸಾಕಲ್ಲವೇ?
ಸ್ಪಿನ್ನರ್ಗಳಿಗೆ ಪಿಚ್ ಹೆಚ್ಚು ಸಹಕಾರಿಯಾಗಿತ್ತು. ಇದರ ಲಾಭವನ್ನು ಪಡೆದು ಉತ್ತಮ ಪ್ರದರ್ಶನ ನೀಡಿದೆ. ನಾನು ಸರಿಯಾದ ಜಾಗದಲ್ಲಿ ಚೆಂಡು ಎಸೆಯುತ್ತಿದ್ದೆ ಅಷ್ಟೇ. ಪಿಚ್ ಸಹಕಾರಿಯಾಗಿದ್ದರಿಂದ ನನಗೆ ವಿಕೆಟ್ ಲಭಿಸಿದವು. ಆದರೆ, ಬ್ಯಾಟಿಂಗ್ನಲ್ಲಿನ ವೈಫಲ್ಯ ಬೇಸರ ತರಿಸಿದೆ.
- ರವೀಂದ್ರ ಜಡೇಜಾ
ಪಂದ್ಯಶ್ರೇಷ್ಠ ಗೌರವ ಪಡೆದ ಭಾರತೀಯ ಬೌಲರ್
ಆಸೀಸ್ ವಿರುದ್ಧದ ಸರಣಿಗಾಗಿ ಅಭ್ಯಾಸ ನಡೆಸುವಾಗ ನಾನು ನನ್ನ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ತಂದುಕೊಂಡಿದ್ದೆ. ಚೆಂಡನ್ನು ಎಸೆಯುವ ಶೈಲಿಯಲ್ಲೇ ಬದಲಾವಣೆ ಮಾಡಿಕೊಳ್ಳಲು ನನ್ನ ಕೋಚ್ ಸೂಚಿಸಿದ್ದರು. ಅದರಂತೆ, ನಾನು ಅಭ್ಯಾಸ ನಡೆಸಿದ್ದೆ. ಇದು ಫಲ ನೀಡಿದೆ.
- ರವಿಚಂದ್ರನ್ ಅಶ್ವಿನ್
'ಸರಣಿ ಶ್ರೇಷ್ಠ' ಗೌರವ ಪಡೆದ ಭಾರತೀಯ ಬೌಲರ್
ಸ್ಕೋರ್ ಬೋರ್ಡ್
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 262
ಭಾರತ ಪ್ರಥಮ ಇನಿಂಗ್ಸ್ 272
(ಶನಿವಾರ ದಿನಾಂತ್ಯಕ್ಕೆ 266/8)
ಭುವನೇಶ್ವರ ಕುಮಾರ್ ಅಜೇಯ 14, ಇಶಾಂತ್ ಶರ್ಮಾ ಬಿ ಲಯಾನ್ 0, ಪ್ರಗ್ಯಾನ್ ಓಜಾ ಎಲ್ಬಿಡಬ್ಲ್ಯೂ ಬಿ ಲಯಾನ್ 0.
ವಿಕೆಟ್ ಪತನ: 9-272, 10-272.
ಬೌಲಿಂಗ್: ಮಿಚೆಲ್ ಜಾನ್ಸನ್ 17-3-44-0, ಪ್ಯಾಟಿನ್ಸನ್ 14-1-54-1, ಪೀಟರ್ ಸಿಡ್ಲ್ 12-3-38-1, ನೇಥನ್ ಲಯಾನ್ 23.2-4-94-7, ಮ್ಯಾಕ್ಸ್ವೆಲ್ 4-0-12-1.
ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 164
ವಾರ್ನರ್ ಎಲ್ಬಿಡಬ್ಲ್ಯೂ ಜಡೇಜಾ 8, ಮ್ಯಾಕ್ಸ್ವೆಲ್ ಬಿ ಜಡೇಜಾ 8, ಕೋವನ್ ಎಲ್ಬಿಡಬ್ಲ್ಯೂ ಬಿ ಜಡೇಜಾ 24, ಫಿಲಿಪ್ ಹ್ಯೂಸ್ ಎಲ್ಬಿಡಬ್ಲ್ಯೂ ಬಿ ಅಶ್ವಿನ್ 6, ಶೇನ್ ವ್ಯಾಟ್ಸನ್ ಬಿ ಪ್ರಗ್ಯಾನ್ ಓಜಾ 5, ಸ್ಮಿತ್ ಬಿ ಜಡೇಜಾ 18, ಮ್ಯಾಥ್ಯೂ ವೇಡ್ ಸಿ ಧೋನಿ ಬಿ ಪ್ರಗ್ಯಾನ್ ಓಜಾ 19, ಮಿಚೆಲ್ ಜಾನ್ಸನ್ ಬಿ ಜಡೇಜಾ 0, ಪೀಟರ್ ಸಿಡ್ಲ್ ಸ್ಟಂಪ್ಡ್ ಧೋನಿ ಬಿ ಅಶ್ವಿನ್ 50, ಪ್ಯಾಟಿನ್ಸನ್ ಬಿ ಇಶಾಂತ್ ಶರ್ಮಾ 11, ನೇಥನ್ ಲಯಾನ್ ಅಜೇಯ 5, ಇತರೆ 10.
ವಿಕೆಟ್ ಪತನ: 1-15, 2-20, 3-41, 4-51, 5-53, 6-94, 7-94, 8- 122, 9-157, 10- 164.
ಬೌಲಿಂಗ್: ಭುವನೇಶ್ವರ್ ಕುಮಾರ್ 2-0-9-0, ಅಶ್ವಿನ್ 15.3-2-55-2, ಜಡೇಜಾ 16-2-58-5, ಪ್ರಗ್ಯಾನ್ 11-2-19-2, ಇಶಾಂತ್ ಶರ್ಮಾ 2-0-13-1.
ಭಾರತ ದ್ವಿತೀಯ ಇನಿಂಗ್ಸ್ 158/4(31.2 ಓವರ್)
ಮುರಳಿ ವಿಜಯ್ ಬಿ ಮ್ಯಾಕ್ಸ್ವೆಲ್ 11, ಚೇತೇಶ್ವರ ಪೂಜಾರ ಅಜೇಯ 82, ವಿರಾಟ್ ಕೊಹ್ಲಿ ಎಲ್ಬಿಡಬ್ಲ್ಯೂ ಬಿ ಲಯಾನ್ 41, ಸಚಿನ್ ತೆಂಡೂಲ್ಕರ್ ಎಲ್ಬಿಡಬ್ಲ್ಯೂ ಬಿ ಲಯಾನ್ 1, ಅಜಿಂಕ್ಯ ರಹಾನೆ ಸಿ ಲಯಾನ್ ಬಿ ಮ್ಯಾಕ್ಸ್ವೆಲ್ 1, ಧೋನಿ ಅಜೇಯ 12. ಇತರೆ 10.
ವಿಕೆಟ್ ಪತನ: 1-19, 2-123, 3-127, 4-128.
ಬೌಲಿಂಗ್: ಲಯಾನ್ 15.2-0-71-2, ಮ್ಯಾಕ್ಸ್ವೆಲ್ 11-0-54-2, ಜಾನ್ಸನ್ 2-0-16-0, ಪ್ಯಾಟಿನ್ಸನ್ 3-0-7-0.