ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಐ ಲೀಗ್ 2ನೇ ಡಿವಿಷನ್: ಮುಂಬೈಗೆ ಮಣಿದ ಹಿಂದುಸ್ತಾನ

Srinivasa Murthy VN
Updated On : 26 Mar 2013, 12:40 pm

ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐ- ಲೀಗ್ 2ನೇ ಡಿವಿಷನ್ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಟೈಗರ್ಸ್ ತಂಡ ಹಿಂದುಸ್ತಾನ ಎಫ್ಸಿ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿತು.
ಪಂದ್ಯ ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಎಷ್ಟೇ ಪ್ರಯತ್ನಪಟ್ಟರೂ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ, ಪಂದ್ಯದ 58ನೇ ನಿಮಿಷದಲ್ಲಿ ಮೊಹ್ಮದ್ ಮುಂಬೈ ತಂಡದ ಪರ ಗೋಲು ದಾಖಲಿಸಿದರು. ಆಗ ಮುಂಬೈ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿತು. ನಂತರ 65ನೇ ನಿಮಿಷದಲ್ಲಿ ಮುಂಬೈ ಪರ ಮತ್ತೊಂದು ಗೋಲು ದಾಖಲಿಸಿದ ಪರೆಶ್ ಶಿವಾಲ್ಕರ್ 2-0 ಅಂತರದ ಮುನ್ನಡೆ ತಂದುಕೊಟ್ಟರು.
ಆದರೆ, ಹಿಂದುಸ್ತಾನ ಎಫ್ಸಿ ಪಂದ್ಯದಲ್ಲಿ ಗೋಲು ದಾಖಲಿಸಲು ತೀವ್ರ ಪ್ರಯತ್ನಿಸಿತಾದರೂ ಸಫಲವಾಗಲಿಲ್ಲ.
ಮಂಗಳವಾರದ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಸ್ಥಳೀಯ ಸೌತ್ ಯುನೈಟೆಡ್ ಮತ್ತು ಕೋಲ್ಕತಾದ ಕಾಳಿಘಾಟ್ ನಡುವೆ ನಡೆಯಲಿದೆ. ನಂತರ ಎರಡನೇ ಪಂದ್ಯ ಮಿಜೋರಾಮ್ನ ಲೂನಾಂಗ್ಮಲ್ ಮತ್ತು ಗೋವಾದ ಎನ್ಆರ್ಬಿ ವಾಸ್ಕೋ ತಂಡಗಳ ನಡುವೆ ನಡೆಯಲಿದೆ.

ಅಭ್ಯಾಸ ಆರಂಭಿಸಿದ ಮುಂಬೈ ಇಂಡಿಯನ್ಸ್
ಮುಂಬೈ:
ಐಪಿಎಲ್ನ ಮುಂಬೈ ಇಂಡಿಯನ್ಸ್ ತಂಡ 6ನೇ ಆವೃತ್ತಿಗೆ ಸೋಮವಾರದಿಂದ ಅಭ್ಯಾಸ ಆರಂಭಿಸಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ ತಂಡಕ್ಕೆ ತರಬೇತುದಾರ ಜಾನ್ ರೈಟ್ ಮತ್ತು ಮುಖ್ಯ ತಾಂತ್ರಿಕ ಸಲಹೆಗಾರರಾದ ಅನಿಲ್ ಕಂಬ್ಳೆ ಮಾರ್ಗದರ್ಶನ ನೀಡಿದರು. ಮುಂಬೈ ರಣಜಿ ತಂಡದ ಆಟಗಾರರಾದ ಧವಳ್ ಕುಲಕರ್ಣಿ, ಆದಿತ್ಯ ತಾರೆ, ಸುಶಾಂತ್ ಮರಾಠೆ ಹಾಗೂ ಸೂರ್ಯಕುಮಾರ್ ಯಾದವ್ ಅಭ್ಯಾಸದಲ್ಲಿ ಭಾಗವಹಿಸಿದ್ದರು ಎಂದು ತಂಡದ ವಕ್ತಾರ ತಿಳಿಸಿದ್ದಾರೆ. 'ಇತರ ಆಟಗಾರರು ದೇಶೀಯ ಕ್ರಿಕೆಟ್ ಪಂದ್ಯಾವಳಿಗಳು ಮುಕ್ತಾಯದ ತಕ್ಷಣ ತಂಡವನ್ನು ಸೇರಲಿದ್ದಾರೆ' ಎಂದು ವಕ್ತಾರ ಹೇಳಿದರು. ಏಪ್ರಿಲ್ 3ರಿಂದ ಆರಂಭವಾಗಲಿರುವ ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ ತಂಡವನ್ನು  ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಮುನ್ನಡೆಸಲಿದ್ದಾರೆ.

ಹೀನಾ ಸೋಲಿನ ನಂತರವೂ ಆರ್ಥರ್ ಬೆನ್ನಿಗೆ ಕ್ರಿಕೆಟ್ ಆಸ್ಟ್ರೇಲಿಯಾ
ಮೆಲ್ಬರ್ನ್:
ಭಾರತದ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ 4-0 ಅಂತರದಿಂದ ಹೀನಾಯ ಸೋಲನುಭವಿಸಿದ ಆಸ್ಟ್ರೇಲಿಯಾ ತಂಡದ ತರಬೇತುದಾರ ಮಿಕಿ ಅರ್ಥರ್ ಅವರನ್ನು ತೆಗೆದು ಹಾಕುವ ಸಾಧ್ಯತೆಗಳಿದ್ದವು. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್ ಆರ್ಥರ್ ಬೆಂಬಲಕ್ಕೆ ನಿಂತಿದ್ದು, ತಂಡದ ತರಬೇತಿದಾರರಾಗಿ ಮುಂದುವರಿಸಿದೆ. ತಂಡದ ವ್ಯವಸ್ಥಾಪಕ, ತರಬೇತುದಾರ ಆರ್ಥರ್ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಜಾನ್ ಇನ್ವೆರರಿಟಿ ಅವರನ್ನು ಕ್ರಿಕೆಟ್ ಮಂಡಳಿ ಹಾಗೇ ಉಳಿಸಿಕೊಂಡಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ಸುದರ್ಲೆಂಡ್ ಹೇಳಿದ್ದಾರೆ. ನವೆಂಬರ್ 2011ರಲ್ಲಿ ತಂಡದ ತರಬೇತುದಾರರಾಗಿ ನೇಮಕಗೊಂಡಿರುವ ಆರ್ಥರ್, 2015ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ವರೆಗೂ ಗುತ್ತಿಗೆ ಪಡೆದಿದ್ದಾರೆ. ಆದರೆ, 34 ವರ್ಷಗಳ ನಂತರ ಆಸ್ಟ್ರೇಲಿಯಾ ಹೀನಾಯವಾಗಿ ಸೋಲನುಭವಿಸಿದ್ದು, ಆರ್ಥರ್ ಹುದ್ದೆಗೆ ಕತ್ರಿ ಹಾಕಿಸಬಹುದು ಎನ್ನಲಾಗಿತ್ತು. 'ಅಭಿಮಾನಿಗಳು ಆಟಗಾರರು ಮತ್ತು ನಾವೆಲ್ಲರೂ ಭಾರತದಲ್ಲಿ ತಂಡದ ಸೋನಿಂದ ಬೇಸರಗೊಂಡಿದ್ದೇವೆ. ಆದರೆ, ಭಾರತದಲ್ಲಿ ತಂಡ ಕಠಿಣ ಪರಿಸ್ಥಿತಿಯನ್ನು ಎದುರಿಸಿತು ಎಂಬುದು ನಮಗೆ ಅರ್ಥವಾಗಿದೆ. ತಂಡ ನೂತನ ಮತ್ತು ಅನನುಭವಿ ಆಟಗಾರರಿಂದ ಕೂಡಿತ್ತು' ಎಂದು ಅವರು ಹೇಳಿದ್ದಾರೆ.

ಐಪಿಎಲ್ಗೆ ಕ್ಲಾರ್ಕ್ ಡೌಟ್
ಸಿಡ್ನಿ:
ಬೆನ್ನು ನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ನಾಯಕ ಮೈಕಲ್ ಕ್ಲಾರ್ಕ್ ಅವರು ಐಪಿಎಲ್ನ 6ನೇ ಆವೃತ್ತಿಯಲ್ಲಿ ಭಾಗವಹಿಸುವುದು ಅನುಮಾನ ಮೂಡಿಸಿದೆ. 'ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಬೇಕು ಅಥವಾ ಬೇಡ ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಆದರೆ, ವೈದ್ಯರು ಯಾವ ರೀತಿ ಸಲಹೆ ನೀಡುತ್ತಾರೆ ಹಾಗೆ ಮಾಡುತ್ತೇನೆ' ಎಂದಿದ್ದಾರೆ ಕ್ಲಾರ್ಕ್.'ಈಗಲೇ ಆ ಕುರಿತು ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ತಜ್ಞರನ್ನು ಸಂಪರ್ಕಿಸಿ ಅವರ ಸಲಹೆ ಪಡೆದು, ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement