ನಂಬಿಕೆ ಹುಸಿಯಾಗಲಿಲ್ಲ: ಶ್ರೀನಿವಾಸನ್
ಆಸೀಸ್ ವಿರುದ್ಧ ಕ್ಲೀನ್ ಸ್ವೀಪ್, ಧೋನಿ ನಾಯಕತ್ವದ ಬಗ್ಗೆ ಬಿಸಿಸಿಐ ಅಧ್ಯಕ್ಷರ ಮೆಚ್ಚುಗೆ
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ ತಂಡ ಕ್ಲೀನ್ ಸ್ವೀಪ್ ಭಾರತ ತಂಡದ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ತಂಡದ ಗೆಲವಿಗೆ ಹರ್ಷ ವ್ಯಕ್ತಪಡಿಸಿದರಲ್ಲದೇ, ಟೀಂ ಇಂಡಿಯಾದ ಆಯ್ಕೆಯನ್ನು ಸಮರ್ಥಿಸಿಕೊಂಡರು.
ಮಾತಿಗೂ ಮುನ್ನ ಆಸೀಸ್ ವಿರುದ್ಧ ಭಾರತ ಗಳಿಸಿದ ಭಾರೀ ಜಯವನ್ನು ಕೊಂಡಾಡಿದ ಅವರು, 'ಟೀಂ ಇಂಡಿಯಾ ಬಗ್ಗೆ ಯಾವಾಗಲೂ ಬಿಸಿಸಿಐ ನಂಬಿಕೆ ಇಟ್ಟಿತ್ತು' ಎಂದು ಹೇಳಿದರು.
'ಭಾರತದ ಗೆಲುವಿನ ಸಂಭ್ರಮ ಸವಿಯಲು ಆನಂದವಾಗುತ್ತಿದೆ. ನಮಗೆ ಟೀಂ ಇಂಡಿಯಾ ಮೇಲೆ ಯಾವಾಗಲೂ ಭರವಸೆಯಿತ್ತು. ಭಾರತ ಕ್ರಿಕೆಟ್ ತಂಡದ ಕೆಲ ಘಟಾನುಘಟಿ ಪ್ರತಿಭೆಗಳು ಇತ್ತೀಚೆಗೆ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾಗ, ಭಾರತೀಯ ಕ್ರಿಕೆಟ್ ರಂಗದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಅನ್ನಿಸತೊಡಗಿತ್ತು. ಆದರೆ, ನಾವು (ಬಿಸಿಸಿಐ) ಭಾರತೀಯ ಕ್ರಿಕೆಟ್ ತಂಡದ ಮೇಲೆ ಭರವಸೆ ಇಟ್ಟಿದ್ದೆವು. ನಮ್ಮ ನಂಬಿಕೆ ಹುಸಿಯಾಗಲಿಲ್ಲ. ಅದು ನೆರವೇರಿದೆ' ಎಂದು ಅವರು ತಿಳಿಸಿದರು.
ಏರು-ಪೇರು ಇದ್ದಿದ್ದೇ: ಸೋಲು, ಗೆಲವಿನ ಪರಾಮರ್ಶೆ ಮಾಡಿದ ಶ್ರೀನಿವಾಸನ್, 'ಕ್ರಿಕೆಟ್ ಒಂದು ಕ್ರೀಡೆ. ಯಾವುದೇ ಕ್ರೀಡೆಯಲ್ಲಿ ತಂಡವೊಂದು ಪದೇ ಪದೇ ಗೆಲ್ಲುವುದಿಲ್ಲ. ಗೆಲವು, ಸೋಲು ಇದ್ದೇ ಇರುತ್ತವೆ. ಹಾಗೆಯೇ, ಭಾರತ ತಂಡ ಈ ಹಿಂದೆ ಸರಣಿ ಸೋತಿದೆ. ನಿಜ. ಆದರೆ, ಸೋಲಲೆಂದೇ ಟೀಂ ಇಂಡಿಯಾ ಕಣಕ್ಕಿಳಿದಿರಲಿಲ್ಲ. ಆದರೂ, ಅವರು ಸೋಲು ಕಾಣಬೇಕಾಯಿತು. ಕೆಲವೊಮ್ಮೆ, ದುರಾದೃಷ್ಟವೂ ಅವರನ್ನು ಬೆಂಬಿಡದೇ ಕಾಡುತ್ತದೆ. ಈಗ, ಸನ್ನಿವೇಶ ಬದಲಾಗಿದೆ. ಹಾಗಾಗಿ, ಅವರು ಗೆದ್ದಿದ್ದಾರೆ. ಈಗ ನಾವದನ್ನು ಆಸ್ವಾದಿಸೋಣ' ಎಂದು ಹೇಳಿದರು.
'ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸಂಪೂರ್ಣವಾಗಿ ವೈಫಲ್ಯಕ್ಕೊಳಗಾಗಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅದು ಸಾಂಘಿಕವಾಗಿ ಒಗ್ಗೂಡಿದೆ. ಟೀಂ ಇಂಡಿಯಾ ಈ ವರ್ಷಾಂತ್ಯಕ್ಕೆ ತನ್ನ ಮುಂದಿನ ಟೆಸ್ಟ್ ಸರಣಿಗಳಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ. ಅವೂ ಭಾರತದ ಸಾಮರ್ಥ್ಯವನ್ನು ಮತ್ತಷ್ಟು ಒರೆಗೆ ಹಚ್ಚಲಿವೆ' ಎಂದು ಶ್ರೀನಿವಾಸನ್ ತಿಳಿಸಿದರು.
ಸೆಹ್ವಾಗ್, ಗಂಭೀರ್ ಬಗ್ಗೆ ಚಕಾರವಿಲ್ಲ: ಟೀಂ ಇಂಡಿಯಾವನ್ನು ಇಷ್ಟೆಲ್ಲಾ ಹಾಡಿ ಹೊಗಳಿದರೂ, ಪದೇ ಪದೇ ವೈಫಲ್ಯಕ್ಕೊಳಗಾಗಿರುವ ತಂಡದ ಆರಂಭಿಕ ಆಟಗಾರರಾದ ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಬಗ್ಗೆ ಶ್ರೀನಿವಾಸನ್ ಏನನ್ನೂ ಹೇಳಲಿಲ್ಲ. ಸೆಹ್ವಾಗ್, ಗಂಭೀರ್ ಬಗ್ಗೆ ಮಾಧ್ಯಮಗಳು ಗಮನ ಸೆಳೆದರಾದರೂ, ಅದಕ್ಕೆ ಉತ್ತರಿಸಲು ಶ್ರೀನಿವಾಸನ್ ಒಪ್ಪಲಿಲ್ಲ.
'ನಾನು ಆಯ್ಕೆ ಮಂಡಳಿಯ ಆಯ್ಕೆಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ, ಭಾರತೀಯ ಕ್ರಿಕೆಟ್ನ ಪ್ರಸ್ತುತ ಸಂದರ್ಭ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಂಡಳಿ ಸದಸ್ಯರು ಉತ್ತಮ ನಿರ್ಧಾರ ಕೈಗೊಂಡಿದ್ದಾರೆ' ಎಂಬ ಭರವಸೆಯಿದೆ.
ಧೋನಿ ಬಗ್ಗೆ ಸಮರ್ಥನೆ: ಏತನ್ಮಧ್ಯೆ, ಧೋನಿ ನಾಯಕತ್ವವನ್ನು ಸಮರ್ಥಿಸಿಕೊಂಡ ಶ್ರೀನಿವಾಸನ್, 'ಟೀಂ ಇಂಡಿಯಾದಲ್ಲಿ ಧೋನಿ ಯಾವಾಗಲೂ ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅವರೊಬ್ಬ ಶ್ರೇಷ್ಠ ಆಟಗಾರ. ಎರಡು ವಿಶ್ವಕಪ್ಗಳಿಗೆ ಭಾರತ ತಂಡದ ನಾಯಕತ್ವವನ್ನು ಧೋನಿ ವಹಿಸಿದ್ದರು ಎಂಬುದನ್ನು ನಾವು ಮರೆಯಬಾರದು. ಅಲ್ಲದೇ, ಒಂದು ವಿಶ್ವಕಪ್ ಅನ್ನೂ ಗೆದ್ದುಕೊಟ್ಟಂಥವರು. ಹಲವಾರು ಏರಿಳಿತಗಳನ್ನು ಕಂಡಿರುವ ಅವರು, ಅನುಭವಿ ಆಟಗಾರ' ಎಂದರು.
ಲಂಕಾ ಆಟಗಾರರ ಬಗ್ಗೆ ಶೀಘ್ರ ತೀರ್ಮಾನ: ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಲ್ಲಿ ಲಂಕಾ ಆಟಗಾರರು ಪಾಲ್ಗೊಳ್ಳುವ ವಿಚಾರ ನೆನೆಗುದಿಗೆ ಬಿದ್ದಿರುವುದರ ಬಗ್ಗೆ ಮಾತನಾಡಿದ ಶ್ರೀನಿವಾಸನ್, ಐಪಿಎಲ್ ಆರಂಭಕ್ಕೂ ಮುನ್ನ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು. 'ಸಮಸ್ಯೆ ಇತ್ಯರ್ಥಕ್ಕಾಗಿ ತಮಿಳುನಾಡು ಸರ್ಕಾರದ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ನಿಜ ಹೇಳಬೇಕೆಂದರೆ, ಕಾನೂನು ಸುವ್ಯವಸ್ಥೆ ಸಮಸ್ಯೆ ಏನಿಲ್ಲ. ಹಾಗಾಗಿ, ಶೀಘ್ರವೇ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು' ಎಂದು ಅವರು ತಿಳಿಸಿದರು.
'ಸಚಿನ್ ನಿವೃತ್ತಿಯ ಬಗ್ಗೆ ಮಾತನಾಡುವುದು ಸರಿಯಲ್ಲ'
ನವದೆಹಲಿ: ಸಚಿನ್ ತೆಂಡೂಲ್ಕರ್ ಅವರು ಭಾರತ ವಿಶ್ವಕ್ಕೆ ನೀಡಿದ ಮಹಾನ್ ಆಟಗಾರರಾಗಿದ್ದು, ಅವರ ನಿವೃತ್ತಿಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅಭಿಪ್ರಾಯಪಟ್ಟರು. ವೈಫಲ್ಯಕ್ಕೊಳಗಾಗಿರುವ ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರನ್ನು ತಂಡದಿಂದ ಆಚೆ ಕಳಿಸಲಾಗಿದ್ದು, ಇದೀಗ ಸಚಿನ್ ತೆಂಡೂಲ್ಕರ್ ಅವರ ಆಟದಲ್ಲೂ ಹಿಂದಿನ ಮೊನಚು ಕಾಣುತ್ತಿಲ್ಲ. ಹಾಗಾಗಿ, ಅವರು ನಿವೃತ್ತಿ ನೀಡಬಹುದಲ್ಲವೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಸಚಿನ್ ತೆಂಡೂಲ್ಕರ್ ಅವರು ಭಾರತದ ನೆಲದಲ್ಲಿ ಬೆಳೆದ ಮಹೋನ್ನತ ಪ್ರತಿಭೆ. ಇತರರೊಂದಿಗೆ ಅವರನ್ನು ಹೋಲಿಸುವುದು ಹಾಗೂ ಪ್ರತಿ ಸರಣಿಯಲ್ಲಿನ ಅವರ ಪ್ರದರ್ಶನವನ್ನು ತೂಕ ಮಾಡಿ ಮಾತಾಡುವುದು ಸರಿಯಲ್ಲ. ಇದು ನನ್ನ ವೈಯಕ್ತಿಕ ಅನಿಸಿಕೆ. ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೋ ಬೇಡವೋ ಎನ್ನುವುದು ಆಯ್ಕೆ ಮಂಡಳಿಗೆ ಬಿಟ್ಟ ವಿಚಾರ' ಎಂದು ಅವರು ತಿಳಿಸಿದರು. ಆಸೀಸ್ ವಿರುದ್ಧದ ಭಾನುವಾರ ಮುಕ್ತಾಯಗೊಂಡ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸಚಿನ್ ಅವರು 81 ರನ್ ಗಳಿಸಿದ್ದರು. ಆದರೆ, ನಂತರದ ಟೆಸ್ಟ್ಗಳಲ್ಲಿ ಅವರಿಂದ ಉತ್ತಮ ಪ್ರದರ್ಶನ ಬಂದಿರಲಿಲ್ಲ.