ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

'ಮೊದಲ ಪ್ರಯತ್ನ ಸಂತಸ ತಂದಿದೆ'

Srinivasa Murthy VN
Updated On : 26 Mar 2013, 12:41 pm

ಬೆಂಗಳೂರು: ವಿದೇಶಿ ಆಟಗಾರರಿಗೆ ನಮ್ಮ ತಂಡದಲ್ಲಿ ಯಾವತ್ತೂ ಅವಕಾಶವೇ ಇಲ್ಲ. ದೇಶಿಯ ಪ್ರತಿಭೆಗಳನ್ನು ಹುಡುಕಿ ಅವರನ್ನು ಬೆಳೆಸುವುದೇ ನಮ್ಮ ಮುಖ್ಯ ಗುರಿ. ಇದೇ ಮೊದಲ ಬಾರಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ತಂಡ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಪಂದ್ಯಾವಳಿಯಲ್ಲಿ ಬಲಿಷ್ಠ ತಂಡಗಳಾದ ಗೋವಾದ ನಂ.1 ತಂಡ ಎನ್ಆರ್ಬಿ ವಾಸ್ಕೋ ಮತ್ತು ಕೊಲ್ಕತಾದ ಸದರ್ನ್ ಸಮಿತಿ ವಿರುದ್ಧ ನೀಡಿದ ಬಲಿಷ್ಠ ಹೋರಾಟಗಳು ನಮಗೆ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಿವೆ.
ಹೀಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡುತ್ತಾ ಸಾಗಿದ್ದು ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಏಕೈಕ ಸ್ಥಳೀಯ ಸೌತ್ ಯುನೈಟೆಡ್ ತಂಡದ ವ್ಯವಸ್ಥಾಪಕರಾದ ಆರ್. ಗೋಪಾಲ್.
ದೇಶದ ಮೂರು ಸ್ಥಳಗಳಲ್ಲಿ ನಡೆಯುತ್ತಿರುವ ಐ- ಲೀಗ್ ಎರಡನೇ ಡಿವಿಷನ್ ಪಂದ್ಯಗಳು ಇನ್ನೇನು ಮುಕ್ತಾಯದ ಹಂತ ತಲುಪಿವೆ. ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿರುವ ಸೌತ್ ಯುನೈಟೆಡ್ ಸಾಧನೆಯ ಪುಟ್ಟ ವಿವರ ಇಲ್ಲಿದೆ.
'ಸಾಮಾನ್ಯವಾಗಿ ಎಲ್ಲ ತಂಡಗಳು ರಕ್ಷಣಾ ವಿಭಾಗ, ಮಿಡ್ ಫೀಲ್ಡ್ ಹಾಗೂ ಮುನ್ಪಡೆ ವಿಭಾಗಗಳಲ್ಲಿ ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಆದರೆ, ಈ ವಿಭಾಗಗಳಲ್ಲಿ ವಿದೇಶಿ ಆಟಗಾರರಿಗೆ ಅವಕಾಶ ನೀಡಿದರೆ, ನಾವು ದೇಶೀಯ ಆಟಗಾರರನ್ನು ಬೆಳೆಸುವುದು ಯಾವಾಗ? ಭವಿಷ್ಯದಲ್ಲೂ ವಿದೇಶಿ ಆಟಗಾರರನ್ನು ತೆಗೆದುಕೊಳ್ಳಬಾರದು ಎಂದು ತೀರ್ಮಾನಿಸಿದ್ದೇವೆ. ನಮ್ಮ ದೇಶದಲ್ಲಿನ ಪ್ರತಿಭೆಗಳನ್ನು ಹುಡುಕಿ ಅವರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದು ನಮ್ಮ ಮುಖ್ಯ ಉದ್ದೇಶ' ಎಂದು ವಿದೇಶಿ ಆಟಗಾರರಿಗೆ ಯಾಕೆ ಅವಕಾಶ ನೀಡಿಲ್ಲ ಎಂದು ಕೇಳಿದ ಪ್ರಶ್ನೆಗೆ ಗೋಪಾಲ್ ಉತ್ತರಿಸಿದರು.
'ನಾವು ಮೊದಲ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆವು. ನಂತರ 4ನೇ ಪಂದ್ಯದಲ್ಲಿ ಹಿಂದುಸ್ತಾನ್ ಎಫ್ಸಿ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿದೆವು. ನಂತರ 5ನೇ ಪಂದ್ಯದಲ್ಲಿ ಸೋಲನುಭವಿಸಿದೆವು. ಆದರೆ, 6ನೇ ಪಂದ್ಯದಲ್ಲಿ ಈಗಲ್ ವಿರುದ್ಧ 4-0 ಅಂತರದಿಂದ ಜಯ. ಇದೇ ಮೊದಲ ಬಾರಿಗೆ ಹುಟ್ಟಿಕೊಂಡಿರುವ ತಂಡ ಒಟ್ಟು ಎರಡು ಜಯ ಸಾಧಿಸಿರುವುದು ಸಮಾಧಾನ ತಂದಿದೆ. ಅಲ್ಲದೆ ನಾವು ಸೂಪರ್ ಡಿವಿಷನ್ ಲೀಗ್ನಲ್ಲಿ ರನ್ನರ್ ಅಪ್ ಆಗಿದ್ದೇವೆ' ಎನ್ನುತ್ತಾರೆ ಗೋಪಾಲ್.
'ಪಂದ್ಯಾವಳಿಯಲ್ಲಿ ಗೋವಾದ ನಂ.1 ತಂಡ ಎನ್ಆರ್ಬಿ ವಾಸ್ಕೋ ಮತ್ತು ಕೊಲ್ಕತಾದ ಸದರ್ನ್ ಸಮಿತಿ ವಿರುದ್ಧ ನಮ್ಮ ತಂಡ ಸಮರ್ಥ ಹೋರಾಟ ನೀಡಿದ್ದು ತೃಪ್ತಿ ತಂದಿದೆ. ಎರಡನೇ ಪಂದ್ಯದಲ್ಲಿ ಸದರ್ನ್ ಸಮಿತಿ ವಿರುದ್ಧ ನಮ್ಮ ತಂಡ ಸಮಬಲದ ಹೋರಾಟ ನೀಡಿತು. ಪಂದ್ಯದಲ್ಲಿ ನಮ್ಮವರಿಗೆ ಗೋಲು ದಾಖಲಿಸಲು ಹಲವಾರು ಅವಕಾಶ ದೊರಕಿದ್ದವು. ಆದರೆ, ಅನನುಭವಿಗಳಿಂದ ಕೂಡಿದ ತಂಡ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ವೈಫಲ್ಯ ಕಂಡಿತು. ಆದರೆ, ಪಂದ್ಯದ 77ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದ ಸದರ್ನ್ ಸಮಿತಿ ಜಯ ಕಂಡುಕೊಂಡಿತು. ಇನ್ನು 3ನೇ ಪಂದ್ಯದಲ್ಲಿ ವಾಸ್ಕೋ ವಿರುದ್ಧ ಇದೇ ರೀತಿಯ ಫಲಿತಾಂಶ ಪುನರಾವರ್ತನೆಯಾಯಿತು. ಈ ಎರಡು ಪಂದ್ಯಗಳಲ್ಲಿ ತಂಡದ ಹೋರಾಟವನ್ನು ನೋಡಿದರೆ, ಭವಿಷ್ಯದಲ್ಲಿ ಯಶಸ್ಸು ಕಾಣಲಿದೆ' ಎಂದಿದ್ದಾರೆ ಗೋಪಾಲ್.
'ಮಿಡ್ ಫೀಲ್ಡರ್, ಫಾರ್ವರ್ಡ್ ಎರಡೂ ಪಾತ್ರ ನಿರ್ವಹಿಸುವ ಆಮೋಸ್, ವಿನೋದ್ ಹಾಗೂ ಫಾರ್ವರ್ಡ್ ಆಟಗಾರ ಸ್ಟಿಫನ್ ಭರವಸೆಯ ಆಟಗಾರರಾಗಿದ್ದಾರೆ. ಇದುವರೆಗೂ ಯಾವುದೇ ಪಂದ್ಯದಲ್ಲಿ ಹೀನಾಯ ಸೋಲನುಭವಿಸದಿರುವುದು ಮತ್ತು ಎಲ್ಲ ಆಟಗಾರರು 22ರಿಂದ 25ರೊಳಗಿನವರಾಗಿದ್ದು ತಂಡ ಉಜ್ವಲ ಭವಿಷ್ಯ ಹೊಂದಿದೆ' ಎನಿಸುತ್ತಿದೆ ಎಂದಿದ್ದಾರೆ.

- ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement