ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಕ್ಲೆಂಡ್ ಟೆಸ್ಟ್ ಡ್ರಾದಲ್ಲಿ ಅಂತ್ಯ

Srinivasa Murthy VN
Updated On : 26 Mar 2013, 11:52 am

ಆಕ್ಲೆಂಡ್: ಮ್ಯಾಟ್ ಪ್ರಯಾರ್ (ಅಜೇಯ 110) ಶತಕದ ನೆರವಿನೊಂದಿಗೆ ಸೋಲಿನಂಚಿನಲ್ಲಿದ್ದ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಅಂತಿಮ ಮತ್ತು 3ನೇ ಟೆಸ್ಟ್ ಪಂದ್ಯದಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದ ಐತಿಹಾಸಿಕ ಜಯದ ನಿರೀಕ್ಷೆಯಲ್ಲಿದ್ದ ಕಿವೀಸ್ ಪಡೆಗೆ ನಿರಾಸೆಯುಂಟಾಗಿದೆ.
9 ವಿಕೆಟ್ ಕಳೆದುಕೊಂಡು ಸೋಲಿನ ತುತ್ತ ತುದಿಯಲ್ಲಿದ್ದ ಇಂಗ್ಲೆಂಡ್‌ಗೆ ದಿನಾಂತ್ಯದವರೆಗೆ ಕ್ರೀಸ್‌ನಲ್ಲಿದ್ದ ಮ್ಯಾಟ್ ಪ್ರಯಾರ್ ನೆರವಾದರು. ಅಂತ್ಯದಲ್ಲಿ ಮಾಂಟಿ ಪನೇಸರ್ (2) ಕ್ರೀಸ್‌ನಲ್ಲಿದ್ದರು. ಇದರೊಂದಿಗೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 315 ರನ್ ಗಳಿಸಿ ಡ್ರಾ ಕಂಡಿತು.
ಭೋಜನ ವಿರಾಮಕ್ಕೂ ಮುನ್ನ ಅಂತಿಮ ಓವರ್‌ನಲ್ಲಿ ನ್ಯೂಜಿಲೆಂಡ್ ಎರಡು ಕ್ಯಾಚ್ ಕೈಬಿಟ್ಟಿದ್ದು ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳಲು ಪ್ರಮುಖ ಕಾರಣವಾಯಿತು. ಮೂರೂ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಳ್ಳುವುದರೊಂದಿಗೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವ ಕಿವೀಸ್ ಕನಸು ಕಮರಿತು. ಇದುವರೆಗೂ ಇಂಗ್ಲೆಂಡ್ ವಿರುದ್ಧ 32 ಸರಣಿಗಳನ್ನು ಆಡಿರುವ ಕಿವೀಸ್ ಪಡೆ, ಕೇವಲ 3 ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ. 1999ರಲ್ಲಿ ಕಿವೀಸ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆದ್ದುಕೊಂಡಿತ್ತು.
ನ್ಯೂಜಿಲೆಂಡ್ ತಂಡ ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 443 ರನ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಹೀಗಾಗಿ ದ್ವಿತೀಯ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 481 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಬೇಕಾಯಿತು. ಆದರೆ, ದೊಡ್ಡ ಗುರಿಯನ್ನು ಬೆನ್ನಟ್ಟಿದ ಆಂಗ್ಲರು ಗಂಭೀರವಾಗಿ ಹೋರಾಟ ನೀಡಿದ್ದು ಕಂಡುಬರಲಿಲ್ಲ. ಸೋಮವಾರ 90 ರನ್ ಗಳಿಸಿದ್ದ ಆಂಗ್ಲ ಪಡೆ, ಅಂತಿಮ ಮತ್ತು 5ನೇ ದಿನವಾದ ಮಂಗಳವಾರ 381 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಜಯ ಕಾಣುವುದಕ್ಕಿಂತ ಡ್ರಾ ಸಾಧಿಸಲು ಯತ್ನಿಸಿದ್ದು ಕಂಡುಬಂದಿತು. ಭೋಜನ ವಿರಾಮದವರೆಗೂ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲ್ಲಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಈ ನಿರೀಕ್ಷೆಯನ್ನು ತಲೆ ಕೆಳಗಾಗಿಸಿದರು. ಇಯಾನ್ ಬೆಲ್ ಮತ್ತು ಜಾನಿ ಬೇರ್‌ಸ್ಟೋ ಇಬ್ಬರ ಕ್ಯಾಚ್ ಕೈಚೆಲ್ಲಿದ್ದು, ಇಂಗ್ಲೆಂಡ್‌ನ ಅದೃಷ್ಟವೆಂದೇ ಹೇಳಬಹುದು.
ಆದರೆ, ಭೋಜನ ವಿರಾಮದ ನಂತರ ತಕ್ಷಣವೇ ಬೇರ್‌ಸ್ಟೋ (6) ಸೌಥೀ ಬೌಲಿಂಗ್‌ನಲ್ಲಿ ಟೈಲರ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ತೆರಳಿದರು. ಆದರೆ, ಇನ್ನೊಂದು ಬದಿಯಲ್ಲಿ ಕ್ರೀಸ್‌ಗೆ ಕಚ್ಚಿ ನಿಂತುಕೊಂಡಿದ್ದ ಪ್ರಯಾರ್ ನಿಧಾನಗತಿಯಲ್ಲಿ ತಮ್ಮ ಇನಿಂಗ್ಸ್ ಮುಂದುವರಿಸಿದ್ದರು. ಹೀಗಾಗಿ ಪ್ರಯಾರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 7ನೇ ಶತಕ ಪೂರೈಸಿದರು.
ಪಂದ್ಯದ ಅಂತಿಮ ಕ್ಷಣಗಳಲ್ಲಿ ಜಯದ ನಿರೀಕ್ಷೆಯಲ್ಲಿದ್ದ ನ್ಯೂಜಿಲೆಂಡ್ ನಾಯಕ ಬ್ರೆಂಡಾನ್ ಮೆಕಲಂ, ಅರೆಕಾಲಿಕ ಸ್ಪಿನ್ ಬೌಲರ್ ಕೇನ್ ವಿಲಿಯಮ್ಸನ್ ಅವರಿಗೆ ಬೌಲಿಂಗ್ ನೀಡಿದರು. ಇದಕ್ಕೂ ಮುನ್ನ ವಿಲಿಯಮ್ಸನ್ ಅಲಸ್ಟೇರ್ ಕುಕ್ ಮತ್ತು ನೈಟ್‌ವಾಚ್ಮನ್ ಸ್ಟೀವನ್ ಫಿನ್ ವಿಕೆಟ್ ಕಬಳಿಸಿದ್ದರು. ಅವಕಾಶವನ್ನು ಉಪಯೋಗಿಸಿಕೊಂಡ ವಿಲಿಯಮ್ಸನ್ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆ್ಯಂಡ್ರಸನ್ ವಿಕೆಟ್ ಪೆಡೆದರು. ಆದರೆ, ಅಂತಿಮ 19 ಎಸೆತಗಳು ಬಾಕಿ ಇದ್ದಾಗ ಪನೇಸರ್ ಅಂಗಣಕ್ಕೆ ಬಂದರು. ಆಗ ನ್ಯೂಜಿಲೆಂಡ್ ಬೌಲರ್‌ಗಳು ಇನ್ನೊಂದು ವಿಕೆಟ್ ಪಡೆಯುಲ್ಲಿ ವೈಫಲ್ಯ ಕಂಡರು.  ಕ್ರೀಸ್‌ನ ಇನ್ನೊಂದು ಬದಿಯಲ್ಲಿದ್ದ ಪ್ರಯಾರ್, ಪನಸೇರ್ ವಿಕೆಟ್ ಉಳಿಸಿಕೊಳ್ಳುವ  ಯತ್ನದಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 443
ಇಂಗ್ಲೆಂಡ್ ಮೊದಲ ಇನಿಂಗ್ಸ್ 204
ನ್ಯೂಜಿಲೆಂಡ್ 2ನೇ ಇನಿಂಗ್ಸ್ 241/6 (ಡಿ)
ಇಂಗ್ಲೆಂಡ್ 2ನೇ ಇನಿಂಗ್ಸ್ 90/4
ಪ್ರಯಾರ್ 110, ಇಯಾನ್ ಬೆಲ್ 75
ಬೌಲಿಂಗ್: ವಿಲಿಯಮ್ಸನ್ 44/4, ವಾಗ್ನರ್ 61/2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement