12 ಬಾರಿ ಡ್ರಗ್ಸ್ ಸೇವಿಸಿದ ವಿಜಿ
ಇತ್ತೀಚೆಗೆ ಡ್ರಗ್ಸ್ ಸೇವನೆ ವಿವಾದದಲ್ಲಿ ಸಿಲುಕಿದ್ದ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್...
ನವದೆಹಲಿ: ಇತ್ತೀಚೆಗೆ ಡ್ರಗ್ಸ್ ಸೇವನೆ ವಿವಾದದಲ್ಲಿ ಸಿಲುಕಿದ್ದ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಇದೀಗ ಡ್ರಗ್ಸ್ ಸೇವನೆ ಮಾಡಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಡಿ.2012 ರಿಂದ ಫೆ.2013 ರವರೆಗೆ ವಿಜೇಂದರ್ ಸಿಂಗ್ 12 ಬಾರಿ ಡ್ರಗ್ಸ್ ಸೇವನೆ ಮಾಡಿರುವುದಾಗಿ ತಿಳಿಸಿದ್ದಾರೆ.
ಇದರ ಜೊತೆಗೆ ವಿಜೇಂದರ್ ಸಿಂಗ್ ಡ್ರಗ್ಸ್ ಕಳ್ಳ ವ್ಯಾಪಾರಿಗಳ ಜತೆ ನಿರಂತರ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗುತ್ತಿದೆ.
ಕೆನಡಾದ ಡ್ರಗ್ಸ್ ಕಳ್ಳ ವ್ಯಾಪಾರಿ ಎಂಬ ಆರೋಪದ ಹಿನ್ನಲೆಯಲ್ಲಿ ಬಂಧಿತನಾಗಿರುವ ಅನೂಪ್ ಸಿಂಗ್ ಕಹ್ಲೊನ್ (ರೂಬಿ) ಜತೆ ನಿರಂತರ ಸಂಪರ್ಕ ಹೊಂದಿರುವ ಬಗ್ಗೆ ಪೊಲೀಸರು ದಾಖಲೆ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವೇಳೆ ಲೂಧಿಯಾನ ಪ್ರದೇಶದ ಡಿಐಜಿ ಎಂ.ಎಫ್. ಫಾರೂಕಿ ಈ ಪ್ರಕರಣದ ಕುರಿತು ಕೆಲವು ಮಾಹಿತಿ ನೀಡಿದ್ದು, ವಿಜೇಂದರ್ ಸಿಂಗ್ ಇತ್ತೀಚೆಗೆ ಡ್ರಗ್ಸ್ ಕಳ್ಳ ವ್ಯಾಪಾರಿ ಎಂಬ ಆರೋಪದಲ್ಲಿ ಬಂಧಿತರಾಗಿರುವ ಕಹ್ಲೊನ್ ಜತೆ 80 ಬಾರಿ ದೂರವಾಣಿ ಮುಖಾಂತರ ಮಾತನಾಡಿದ್ದು ಈ ಇಬ್ಬರೂ ಪರಸ್ಪರ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ಮತ್ತೋರ್ವ ಬಾಕ್ಸರ್ ರಾಮ್ ಸಿಂಗ್ ವಿಚಾರಣೆ ವೇಳೆ ವಿಜೇಂದರ್ ಸಿಂಗ್ ಡ್ರಗ್ಸ್ ಸೇವನೆ ಮಾಡಿದ್ದರು ಹಾಗೂ ಕಹ್ಲೊನ್ ಜತೆ ಸಂಪರ್ಕ ಹೊಂದಿದ್ದರು ಎಂಬ ಹೇಳಿಕೆ ಪಡೆದ ಹಿನ್ನಲೆಯಲ್ಲಿ ವಿಜೇಂದ್ರ ಸಿಂಗ್ ತಮ್ಮ ರಕ್ತ ಹಾಗೂ ಕೂದಲಿನ ಮಾದರಿಯನ್ನು ಪೊಲೀಸರಿಗೆ ನೀಡಲು ನಿರಾಕರಿಸಿದ್ದರು. ಈ ಹಿನ್ನಲೆಯಲ್ಲಿ ಅವರ ರಕ್ತ ಹಾಗೂ ಕೂದಲಿನ ಮಾದರಿಯನ್ನು ಪಡೆಯಲು ಅನುಮತಿ ನೀಡಲು ಕೋರ್ಟ್‌ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಫಾರೂಕಿ ತಿಳಿಸಿದರು.
ಕಹ್ಲೊನ್ ಅವರನ್ನು ಫತೇಹಗಡ್ ಶಾಹಿಬ್ ಪೊಲೀಸರು ಮಾ.3ರಂದು ಬಂಧಿಸಿದ್ದರು.
ನಂತರ ಶಿವಾಲಿಕ್ ಜಿರಾಕ್‌ಪುರದಲ್ಲಿರುವ ಕಹ್ಲೊನ್‌ರ ನಿವಾಸದಲ್ಲಿ ಪೊಲೀಸರು 26 ಕೆ.ಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದರು. ಈ ಹೆರಾಯಿನ್ 130 ಕೋಟಿ ಬೆಲೆಯದ್ದು ಎಂದು ಅಂದಾಜಿಸಲಾಗಿತ್ತು.
ಡ್ರಗ್ಸ್ ಕಳ್ಳ ವ್ಯಾಪಾರಿ ಜತೆ ವಿಜೇಂದರ್ ಸಿಂಗ್ ಹಾಗೂ ರಾಮ್ ಸಿಂಗ್ ನಿಕಟ ಸಂಪರ್ಕ ಹೊಂದಿರುವ ಹಿನ್ನಲೆಯಲ್ಲಿ ವಿಜೇಂದರ್ ಸಿಂಗ್ ವಿರುದ್ಧ ಪೊಲೀಸರು ಕಟ್ಟುನಿಟ್ಟಾದ ಪ್ರಕರಣ ದಾಖಲಿಸಲು ನಿರ್ಧರಿಸಿದ್ದು, 2012 ರಿಂದ ಈಚೆಗೆ ಕಹ್ಲೊನ್ ಜತೆ ಸಂಪರ್ಕ ಹೊಂದಿರುವ ಬಗ್ಗೆ ಬಲವಾದ ಸಾಕ್ಷ್ಯಾಧಾರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.