ನಾನು ಗುಣಮುಖನಾಗಿದ್ದೇನೆ: ಜೆಸ್ಸಿ ರೈಡರ್
ವೆಲ್ಲಿಂಗ್ಟನ್: ಬಾರೊಂದರ ಹೊರಗೆ ಹಲ್ಲೆಗೊಳಗಾಗಿ ಚಿಂತಾಜನಕ ಸ್ಥಿತಿ ತಲುಪಿದ್ದ ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ ಜೆಸ್ಸಿ ರೈಡರ್ ಭಾನುವಾರ ಮತ್ತಷ್ಟು ಚೇತರಿಸಿಕೊಂಡಿದ್ದು ತಮ್ಮ ಆಪ್ತರೊಂದಿಗೆ ಮಾತನಾಡಿದ್ದಾರೆ.
ತುರ್ತು ನಿಗಾ ಘಟಕದಿಂದ ಹೊರಗೆ ಬಂದಿರುವ ರೈಡರ್ ಅವರನ್ನು ಸಾಮಾನ್ಯ ವಾರ್ಡ್ನಲ್ಲಿ ದಾಖಲಿಸಲಾಗಿದೆ.
'ನಾನು ಚೆನ್ನಾಗಿದ್ದೇನೆ. ನಾನು ಗುಣಮುಖನಾಗಿರುವುದು ಎಲ್ಲರಿಗೂ ಗೊತ್ತಾಗಬೇಕು. ಈಗ ಆರೋಗ್ಯ ಚೇತರಿಸಿಕೊಂಡಿದೆ ಎನಿಸುತ್ತಿದೆ. ಆದರೆ, ಇನ್ನೂ ಆಯಾಸ ನನ್ನನ್ನು ಕಾಡುತ್ತಿದೆ' ಎಂದು ನ್ಯೂಜೆಲೆಂಡ್ ಕ್ರಿಕೆಟ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ರೈಡರ್ ತಿಳಿಸಿದ್ದಾರೆ.
'ನನ್ನ ಆರೋಗ್ಯ ಚೇತರಿಸಿಕೊಳ್ಳಲು ನೀವು ಕಳುಹಿಸಿದ ಸಂದೇಶಗಳನ್ನು ನಾನು ಓದುತ್ತಿದ್ದೇನೆ. ನನ್ನ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಕೃತಜ್ಞತೆಗಳು. ನನ್ನೊಂದಿಗೆ ಇರುವ ನನ್ನ ಕುಟುಂಬ ಮತ್ತು ಸ್ನೇಹಿತರಿಗೂ ನಾನು ಋಣಿಯಾಗಿದ್ದೇನೆ' ಎಂದಿದ್ದಾರೆ ರೈಡರ್. ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ರೈಡರ್ ಸದ್ಯಕ್ಕೆ ಹೆಚ್ಚಿನ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಅವರ ಮ್ಯಾನೇಜರ್ ಅರೋನ್ ಕ್ಲೀ ಹೇಳಿದ್ದಾರೆ.