ವಿವಾದದ ನಂಟು ಬಿಡದ ಐಪಿಎಲ್
ನವದೆಹಲಿ: ಐಪಿಎಲ್‌ಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಹಣದ ಹೊಳೆ ಹರಿಸುವ ಪಂದ್ಯಾವಳಿಯೊಂದಿಗೆ ಬಣ್ಣದಲೋಕ ಬೆರತುಕೊಳ್ಳುವುದರೊಂದಿಗೆ ಎಷ್ಟು ಜನಪ್ರಿಯತೆಯನ್ನು ಗಳಿಸಿದೆಯೋ, ಅಷ್ಟೇ ತನ್ನ ಸುತ್ತ ಮುತ್ತ ವಿವಾದವನ್ನೂ ಹೆಣೆದುಕೊಂಡು ಬೆಳೆದು ಬರುತ್ತಿದೆ. ಪ್ರತಿ ವರ್ಷವೂ ಒಂದಿಲ್ಲ ಒಂದು ವಿವಾದಗಳು ಐಪಿಎಲ್ ಪಂದ್ಯಾವಳಿಯನ್ನು ಬೆಂಬಿಡದೇ ಬೆನ್ನಟ್ಟಿಕೊಂಡು ಬರುತ್ತಿವೆ.
ಇದುವರೆಗೂ ಪಂದ್ಯಾವಳಿ ಆರಂಭವಾದ ನಂತರ ವಿವಾದಗಳು ಹುಟ್ಟುಕೊಳ್ಳುತ್ತಿದ್ದವು ಆದರೆ ಈ ಬಾರಿ ಐಪಿಎಲ್ ಆರಂಭಕ್ಕೂ ಮುನ್ನವೇ ವಿವಾದದ ಮೂಲಕ ಸಾಕಷ್ಟು ಸುದ್ದಿ ಮಾಡಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಶ್ರೀಲಂಕಾದ ಆಟಗಾರರು ಭಾಗವಹಿಸಬಾರದು ಎಂದು ತಮಿಳುನಾಡು ಸರ್ಕಾರ ಪಟ್ಟು ಹಿಡಿಯಿತು. ನಂತರ ತಮಿಳುನಾಡು ಸರ್ಕಾರ ಚೆನ್ನೈನಲ್ಲಿ ಶ್ರೀಲಂಕಾ ಆಟಗಾರರು ಭಾಗವಹಿಸಬಾರದು ಎಂದು ವಿರೋಧಿಸಿದ ನಂತರ ಚೆನ್ನೈನಲ್ಲಿ ಶ್ರೀಲಂಕಾ ಆಟಗಾರರು ಭಾಗವಹಿಸದಂತೆ ಎಲ್ಲಾ ತಂಡಗಳಿಗೆ ಸೂಚಿಸಲಾಯಿತು.
ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಜೆಸ್ಸಿ ರೈಡರ್ ಬಾರ್‌ವೊಂದರಲ್ಲಿ ಜಗಳವಾಡಿ ಕೋಮಾ ಸ್ಥಿತಿಗೆ ಹೋಗಿ ಐಪಿಎಲ್‌ನಿಂದ ದೂರ ಉಳಿದು ಹೆಚ್ಚಿನ ಸುದ್ದಿ ಮಾಡಿತು.
ನಂತರ ಮುಂಬೈ ಕ್ರಿಕೆಟ್ ಸಂಸ್ಥೆಯು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್ ಅವರಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರವೇಶಿಸದಂತೆ ನಿಷೇಧ ಹೇರುವ ಮೂಲಕ ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಕಳೆದ ಆವೃತ್ತಿಯಲ್ಲಿ ಶಾರುಖ್ ಖಾನ್ ಭದ್ರತಾ ಸಿಬ್ಬಂದಿ ಜತೆ ಜಗಳವಾಡಿದ ಹಿನ್ನಲೆಯಲ್ಲಿ ಮುಂಬೈ ಕ್ರಿಕೆಟ ಸಂಸ್ಥೆ 5 ವರ್ಷಗಳ ನಿಷೇಧ ಹೇರಿತ್ತು. ಅಲ್ಲದೇ ಕಳೆದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಲೂಕ್ ಪೊಮರ್ಸ್‌ಬ್ಯಾಚ್ ಇಂಡೋ-ಅಮೆರಿಕನ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಅವರನ್ನು ಬಂಧಿಸಲಾಗಿತ್ತು.
ಈ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಎದುರಾಳಿ ತಂಡದ ಶ್ರೀಶಾಂತ್ ಅವರಿಗೆ ಕಪಾಳ ಮೋಕ್ಷ ಮಾಡಿ 11 ಪಂದ್ಯಗಳ ನಿಷೇಧಕ್ಕೆ ಗುರಿಯಾಗಿದ್ದರು.
ನಂತರ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹಣಕಾಸಿನ ಅವ್ಯವಹಾರದಲ್ಲಿ ಸಿಲುಕಿ ನಂತರ ತಮ್ಮ ಅಧ್ಯಕ್ಷ ಪಟ್ಟದಿಂದ ಕೆಳಕ್ಕಿಳಿದರು.
ನಂತರ 2011ರಲ್ಲಿ ಸೇರ್ಪಡೆಯಾದ ಕೊಚ್ಚಿ ಟಸ್ಕರ್ಸ್ ತಂಡವು ಕೇವಲ ಒಂದು ವರ್ಷದಲ್ಲೇ ಐಪಿಎಲ್‌ನಿಂದ ನಿಷೇಧಕ್ಕೊಳಗಾಯಿತು. ಇದರಿಂದ ಕೇಂದ್ರದ ಸಚಿವರೊಬ್ಬರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇವೆಲ್ಲದರ ಜತೆಗೆ ಪಂದ್ಯಗಳ ನಂತರದ ಲೇಟ್ ನೈಟ್ ಪಾರ್ಟಿಗಳಲ್ಲಿನ ಜಗಳದಿಂದ ಮತ್ತಷ್ಟು ವಿವಾದವನ್ನು ಕಂಡಿತ್ತು.
ಹಾಗಾಗಿ ಈ ಬಾರಿಯ ಆವೃತ್ತಿ ಆರಂಭವಾಗುವ ಮುನ್ನವೇ ಹಲವು ವಿವಾದಗಳು ಉದ್ಭವಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಯಾವ ವಿವಾದಗಳು ಹುಟ್ಟುಕೊಳ್ಳಲಿವೆ ಎಂಬುದನ್ನು ಕಾದು ನೋಡಬೇಕಿದೆ.
ಐಪಿಎಲ್ ಅವಕಾಶ ತಿರಸ್ಕರಿಸಿದ ಚಂಡಿಮಲ್
ಕೊಲಂಬೊ: ಈ ಬಾರಿಯ ಐಪಿಎಲ್ ವೇಳೆ ಚೆನ್ನೈನಲ್ಲಿ ಶ್ರೀಲಂಕಾ ಆಟಗಾರರಿಗೆ ಪ್ರವೇಶ ನಿರಾಕರಿಸಿದ್ದು, ಇದರ ಬೆನ್ನಲ್ಲೇ ಶ್ರೀಲಂಕಾದ ಟಿ20 ತಂಡದ ನಾಯಕ ದಿನೇಶ್ ಚಂಡಿಮಲ್ ಐಪಿಎಲ್ 6ನೇ ಆವೃತ್ತಿಯಲ್ಲಿ ಭಾಗವಹಿಸಲು ಸಿಕ್ಕ ಅವಕಾಶವನ್ನು ತಿರಸ್ಕರಿಸಿದ್ದಾರೆ.
ಜೂನ್‌ನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಪೂರ್ವ ಸಿದ್ಧತೆಯಾಗಿ ನಡೆಸಲಾಗುವ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಹಾಗೂ ಇಂಗ್ಲಿಷ್ ಹಾಗೂ ಮಾಧ್ಯಮ ತರಬೇತಿಯನ್ನು ಪಡೆಯುವ ಸಲುವಾಗಿ ಚಂಡಿಮಲ್ ಈ ಬಾರಿಯ ಐಪಿಎಲ್‌ಗೆ ಭಾಗವಹಿಸಲು ತಿರಸ್ಕರಿಸಿದ್ದಾರೆ.
2013ರ ಆಟಗಾರರ ಹರಾಜು ಪ್ರಕ್ರಿಯೆ ವೇಳೆ ಚಂಡಿಮಲ್ ಅವರನ್ನು ಆಯ್ಕೆ ಮಾಡಿಕೊಳ್ಳಲು ಯಾವುದೇ ತಂಡ ಮುಂದೆ ಬರಲಿಲ್ಲ. ನಂತರ ಪುಣೆ ವಾರಿಯರ್ಸ್ ತಂಡದ ಮೈಕಲ್ ಕ್ಲಾರ್ಕ್ ಗಾಯದ ಸಮಸ್ಯೆಯಿಂದ ಹೊರಗುಳಿದ ಹಿನ್ನಲೆಯಲ್ಲಿ ಅವರ ಸ್ಥಾನವನ್ನು ತುಂಬಲು ಚಂಡಿಮಲ್‌ಗೆ ಅವಕಾಶ ಸಿಕ್ಕಿತ್ತು, ಅಲ್ಲದೇ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರ ಕೆವಿನ್ ಪೀಟರ್ಸನ್ ಕೂಡ ಗಾಯದ ಸಮಸ್ಯೆಯಿಂದ ಹೊರಗುಳಿದ ಹಿನ್ನಲೆಯಲ್ಲಿ ಅವರ ಸ್ಥಾನವನ್ನು ತುಂಬಲು ಅವಕಾಶ ಲಭಿಸಿತ್ತು ಈ ಎರಡೂ ಅವಕಾಶವನ್ನು ಚಂಡಿಮಲ್ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಚಂಡಿಮಲ್ ಅವರು ಐಪಿಎಲ್‌ನಲ್ಲಿ ಭಾಗವಹಿಸಲು ನಿರಾಕ್ಷೇಪಣ ಪತ್ರವನ್ನು ಕೋರಿಲ್ಲ ಹೀಗಾಗಿ ಚಂಡಿಮಲ್ ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯ ಸಿಇಓ ಅಜಿತ್ ಜಯಸೇಕರ ತಿಳಿಸಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ 13 ಶ್ರೀಲಂಕಾ ಆಟಗಾರರು ಭಾಗವಹಿಸಲಿದ್ದು, ರಾಜಕೀಯ ಒತ್ತಡದ ಹಿನ್ನಲೆಯಲ್ಲಿ ಚೆನೈನಲ್ಲಿ ಮಾತ್ರ ಶ್ರೀಲಂಕಾದ ಯಾವುದೇ ಆಟಗಾರರು ಆಡುತ್ತಿಲ್ಲ.
ಶ್ರೀಲಂಕಾ ತಂಡ ಜೂನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನಾಡಲಿದ್ದು, ನಂತರ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತ್ರಿಕೋನ ಸರಣಿ ಆನಂತರ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ.