ಐಪಿಎಲ್ ನಡುಗಿಸಿದ ಸ್ಪಾಟ್ ಭೂತ
ಮುಂಬೈ ಭೂಗತ ಜಗತ್ತು ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದೆ ಎಂಬ ನಿರ್ದಿಷ್ಟ...
ಸ್ಪಾಟ್ ಫಿಕ್ಸಿಂಗ್
ಮುಂಬೈನಲ್ಲಿ 3 ರಾಜಸ್ಥಾನ ರಾಯಲ್ಸ್ ಆಟಗಾರರನ್ನು ಬಂಧಿಸಿದ ದೆಹಲಿ ಪೊಲೀಸರು
ಪ್ರಕರಣ: ಐಪಿಸಿ ಸೆಕ್ಷನ್ 420 (ಮೋಸದ) ಮತ್ತು 120ಬಿ (ಅಪರಾಧ ಪಿತೂರಿ)
ಕ್ರಮ: ಆಟಗಾರರನ್ನು ಅಮಾನತು ಮಾಡಿರುವ ಬಿಸಿಸಿಐ
ಸಾಕ್ಷ್ಯ: ಬಿಬಿಎಂ ಮೂಲಕ ಸಂದೇಶ ರವಾನೆ ಮತ್ತು ವಾಟ್‌ಆ್ಯಪ್ ದೂರವಾಣಿ ದಾಖಲೆಗಳು
ಬುಕ್ಕಿಗಳ ಬಂಧನ: ಮುಂಬೈನಲ್ಲಿ 7, ದೆಹಲಿಯಲ್ಲಿ 3 ಬುಕ್ಕಿಗಳ ಬಂಧನ ಮತ್ತು ದೆಹಲಿಯಲ್ಲಿ 2 ಬಂಧನ ಸಾಧ್ಯತೆ
ಮೂವರ ಮೇಲೆ ನಿಷೇಧ
ಫಿಕ್ಸಿಂಗ್ ಸುದ್ದಿ ತಿಳಿದ ಬಿಸಿಸಿಐ ತಕ್ಷಣ ಮೂವರೂ ಆಟಗಾರರ ಮೇಲೆ ನಿಷೇಧ ಹೇರಿದೆ. ಅಲ್ಲದೆ ಮುಂದಿನ ಕ್ರಮ ತೆಗೆದುಕೊಳ್ಳಲು ಅದು ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅರುಣ್ ಜೇಟ್ಲಿ ನೇತೃತ್ವದಲ್ಲಿ ಶಿಸ್ತು ಸಮಿತಿಯೊಂದನ್ನು ರಚಿಸಿದೆ. ಮೂವರ ಮೇಲೆ ಆಜೀವ ನಿಷೇಧ ಹೇರಬಹುದು ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿವೆ.
ಮುಂಬೈ ಭೂಗತ ಜಗತ್ತು ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದೆ ಎಂಬ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ನಾವು ಪ್ರಕರಣದ ಬೆನ್ನಟ್ಟಿದೆವು ಎಂದು ಪೊಲೀಸ್ ಆಯುಕ್ತ ನೀರಜ್ ಹೇಳಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳು
2010ರಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನದ ನಡುವಣ ಟೆಸ್ಟ್ ಪಂದ್ಯದಲ್ಲಿ ಬುಕ್ಕಿಗಳಿಂದ ಹಣ ಪಡೆದಿದ್ದ ಮಹಮದ್ ಅಮೀರ್ ಉದ್ದೇಶ ಪೂರ್ವಕವಾಗಿ ನೋಬಾಲ್ ಎಸೆದಿದ್ದರು. ಇದು ಇಂಗ್ಲೆಂಡ್‌ನ ಮಾಧ್ಯಮಗಳು ಬುಕ್ಕಿ ಮಜಾರ್ ಮಜೀದ್ ಮೇಲೆ ರಹಸ್ಯ ಕಾರ್ಯಚರಣೆ ನಡೆಸುವ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿತು.
ದಾವೂದ್ ಸಂಪರ್ಕದ ಶಂಕೆ
ಐಪಿಎಲ್‌ನ ಮೂವರು ಆಟಗಾರರು ಬಂಧನಕ್ಕೊಳಗಾಗಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಪಾಕಿಸ್ತಾನದ ಸಂಪರ್ಕ ಹೊಂದಿರಬಹುದು ಎಂದು ಮುಂಬೈ ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ. ದೆಹಲಿ ಪೊಲೀಸರು ಬಂಧಿಸಿರುವ ಆಟಗಾರರು ಮತ್ತು ಬುಕ್ಕಿಗಳಿಗೆ ಬಂದಿರುವ ದೂರವಾಣಿ ಕರೆಗಳಲ್ಲಿ ಪಾಕಿಸ್ತಾನದಿಂದ ಹೆಚ್ಚಿನ ಕರೆಗಳು ಬಂದಿರುವುದೇ ಪೊಲೀಸರು ಶಂಕೆ ವ್ಯಕ್ತಪಡಿಸಲು ಕಾರಣವಾಗಿದೆ. ಬಂಧಿಸಲಾಗಿರುವ 7 ಬುಕ್ಕಿಗಳಲ್ಲಿ ಇಬ್ಬರು, ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿರುವ ಭೂಗತ ದೊರೆ ದಾವೂದ್ ಇಬ್ರಾಹಿಂ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ದಾವೂದ್ ಇಬ್ರಾಹಿಂ ಕ್ರಿಕೆಟ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಳಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಪೊಲೀಸ್ ಆಯುಕ್ತ ನೀರಜ್ ಕುಮಾರ್, ಭೂಗತ ಗುಂಪೊಂದರ ಕೈವಾಡವಿರುವ ಬಗ್ಗೆ ಶಂಕೆ ಇದೆ. ಆದರೆ ಇದೇ ಗುಂಪು ಕಾರ್ಯನಿರ್ವಹಿಸಿದೆ ಎಂದು ಹೇಳುವುದು ಕಷ್ಟ ಎಂದಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ನಡೆದದ್ದು ಹೇಗೆ?
ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಬಂಧಿತರಾಗಿರುವ ಮೂವರೂ ಆಟಗಾರರು ಬುಕ್ಕಿಗಳಿಗೆ ಸೂಚನೆ ನೀಡಲು ವಿಭಿನ್ನ ಸನ್ನೆಗಳನ್ನು ಬಳಸಿದ್ದಾರೆ. ಪಂದ್ಯದ ವೇಳೆ ಟವೆಲ್, ವ್ರಿಸ್ಟ್‌ಬ್ಯಾಂಡ್ ಮತ್ತು ತಮ್ಮ ಜೆರ್ಸಿಯ ತೊಡುಗೆಯಲ್ಲಿ ಸನ್ನೆ ಮಾಡುವ ಮೂಲಕ ಬುಕ್ಕಿಗಳಿಗೆ ಸೂಚನೆ ನೀಡಿದ್ದಾರೆ.
ಫಿಕ್ಸ್ ಆದ ಮ್ಯಾಚ್‌ಗಳು ಯಾವುವು?
ಮೇ 5, 9 ಹಾಗೂ 15ರಂದು ನಡೆದ ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿದೆ. ಈ ಮೂರು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಪುಣೆ ವಾರಿಯರ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿತ್ತು. ಸ್ಪಾಟ್ ಫಿಕ್ಸಿಂಗ್‌ಗೆ ಬುಕ್ಕಿಗಳು ಆಟಗಾರರಿಗೆ ಪಂದ್ಯದಲ್ಲಿ ತಾವು ಹೇಳಿದಂತೆ ಪ್ರದರ್ಶನ ನೀಡಲು ಕೆಲ ಸಂಕೇತಗಳನ್ನು ಬಳಸಿಕೊಂಡಿದ್ದಾರೆ.
ಮತ್ತಷ್ಟು ಬಂಧನ
ಐಪಿಎಲ್ ಪಂದ್ಯಾವಳಿ ವೇಳೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನ ರಾಯಲ್ಸ್‌ನ ಶ್ರೀಶಾಂತ್, ಚಂಡಿಲಾ, ಚೌವಾಣ್ ಅವರನ್ನು ಬಂಧಿಸಿರುವ ದೆಹಲಿ ಪೊಲೀಸರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬುಕ್ಕಿಗಳ ಬಂಧನ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಆದರೆ ಅದು ಕೇವಲ ಬುಕ್ಕಿಗಳೇ ಹೊರತು ಆಟಗಾರರಲ್ಲ. ಈ ಮೂವರು ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದು, ಯಾವುದೇ ವಿದೇಶಿ ಆಟಗಾರರು ಭಾಗವಹಿಸಿಲ್ಲ ಎಂದಿದ್ದಾರೆ.
ಈ ಮಧ್ಯೆ ಬಂಧಿಸಲಾಗಿರುವ ಮೂವರು ಆಟಗಾರರನ್ನು ದೆಹಲಿ ನ್ಯಾಯಾಲಯ 5 ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಿದೆ.
ಚಾಂಡಿಲಾ, ಚೌವಣ್ ಅಮಾನತು
ನವದೆಹಲಿ: ಸ್ಪಾಟ್ ಫಿಕ್ಸಿಂಗ್‌ನಿಂದ ಕಳಂಕಿತರಾಗಿರುವ ರಾಜಸ್ಥಾನ ರಾಯಲ್ಸ್‌ನ ಆಟಗಾರರಾದ ಅಜಿತ್ ಚಾಂಡಿಲಾ ಹಾಗೂ ಅಂಕಿತ್ ಚೌವಣ್ ಏರ್ ಇಂಡಿಯಾದ ನೌಕರರಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಇವರನ್ನು ಏರ್‌ಇಂಡಿಯಾ ಅಮಾನತು ಮಾಡಿದೆ.
ನಮ್ಮ ನೌಕರರು ಯಾವುದೇ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದರೆ ಅವರನ್ನು ತಕ್ಷಣವಾಗಿ ಅಮಾನತು ಮಾಡಲಾಗುವುದು ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಒಂದುವೇಳೆ ಸರ್ಕಾರಿ ನೌಕರರು ಐಪಿಸಿ ಸೆಕ್ಷನ್ 120ಬಿ, 420 ಕಾಯ್ದೆಯಡಿ ಬಂಧಿಸಲಾದರೆ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಲಾಗುವುದು. ಈ ಪ್ರಕರಣದಲ್ಲಿ ಏರ್ ಇಂಡಿಯಾ ತನಿಖೆ ನಡೆಸುವ ಅಧಿಕಾರ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಬೆಟ್ಟಿಂಗ್‌ನಲ್ಲಿ ದೆಹಲಿಶಾಲಾ ಮಕ್ಕಳು
ಇತ್ತೀಚೆಗಷ್ಟೇ ರಾಜಧಾನಿ ದೆಹಲಿಯಲ್ಲಿ ಶಾಲಾ ಮಕ್ಕಳು ಬೆಟ್ಟಿಂಗ್ ಜಾಲದಲ್ಲಿ ಸಿಲುಕಿರುವುದು ಬೆಳಕಿಗೆ ಬಂದಿತ್ತು. ಬುಕ್ಕಿಗಳ ಮೂಲಕವೇ ಶಾಲಾ ಮಕ್ಕಳು ಬೆಟ್ಟಿಂಗ್‌ನಲ್ಲಿ ತೊಡಗುತ್ತಾರೆ ಎನ್ನಲಾಗಿತ್ತು. ಈಗ ಸ್ಪಾಟ್ ಫಿಕ್ಸಿಂಗ್ ಬಯಲಾಗುವುದರೊಂದಿಗೆ ಮಕ್ಕಳು ಬೆಟ್ಟಿಂಗ್ ಜಾಲದಲ್ಲಿ ಸಿಲುಕಿದ್ದಾರೆ ಎಂಬುದು ಸಾಬೀತಾದಂತಾಗಿದೆ. ಬೆಟ್ಟಿಂಗ್ ಜಾಲದಲ್ಲಿ ಸಿಲುಕಿದ ಏಳು ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರ ಹಾಕಿದ ಪ್ರಕರಣ ರಾಜಧಾನಿಯಲ್ಲಿ ನಡೆದಿದೆ.
2 ವರ್ಷದಲ್ಲಿ 2ನೇ ಪ್ರಕರಣ
ಕಳೆದ ಎರಡು ವರ್ಷಗಳಲ್ಲಿ ಐಪಿಎಲ್‌ನಲ್ಲಿ ಬಹಿರಂಗವಾಗಿರುವುದು ಇದು ಎರಡನೇ ಸ್ಪಾಟ್ ಫಿಕ್ಸಿಂಗ್ ಪ್ರಕರಣವಾಗಿದೆ. 2012ರಲ್ಲಿ ವಿವಿಧ ರೀತಿಯ ಫಿಕ್ಸಿಂಗ್‌ಗಳಲ್ಲಿ ಭಾಗಿಯಾಗಿದ್ದ ಐವರು ಕ್ರಿಕೆಟ್‌ರ್‌ಗಳ ಮೇಲೆ ನಿಷೇಧ ಹೇರಲಾಗಿತ್ತು. ಅಲ್ಲದೆ, ಒಂದು ವರ್ಷ ನಿಷೇಧ ಎದುರಿಸುತ್ತಿದ್ದ ಅಮಿತ್ ಯಾದವ್, ಮೋಹ್ನಿಶ್ ಮಿಶ್ರಾ ಹಾಗೂ ಅಭಿನವ್ ಬಾಲಿ ಅವರ ಮೇಲಿನ ನಿಷೇಧ ವಾರ ಅಂತ್ಯಗೊಳ್ಳಲಿದೆ. ಟಿಪಿ ಸುಧೀಂದ್ರಗೆ ಆಜೀವನ ನಿಷೇಧ ಹೇರಿದರೆ, ಶಲಭ ಸ್ರಿವಾಸ್ತವ್‌ಗೆ 5 ವರ್ಷಗಳ ನಿಷೇಧ ಹೇರಲಾಗಿದೆ.
ಪ್ರತಿಕ್ರಿಯೆಗಳು
'ಅಜೀತ್ ಕಳೆದ ಮೂರು ವರ್ಷಗಳಿಂದ ರಾಜಸ್ಥಾನ ರಾಯಲ್ಸ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳದ ಜನರು ಅವರ ವಿರುದ್ಧ ಸಂಚು ರೂಪಿಸಿದ್ದಾರೆ. ಇಂತಹ ಚಟುವಟಿಕೆಗಳಲ್ಲಿ ಅಜೀತ್ ಭಾಗಿಯಾಗಲು ಸಾಧ್ಯವೇ ಇಲ್ಲ'
-ಸರಿತಾ ಚಾಂಡಿಲಾ, ಅಜಿತ್ ಚಾಂಡಿಲಾ ಪತ್ನಿ
'ತಪ್ಪು ಸಾಬೀತಾಗುವವರೆಗೂ ಆರೋಪಿಗಳು ಮುಗ್ಧರು ಎಂಬುದನ್ನು ನಾವು ಮರೆಯಬಾರದು. ಟಿ20 ಮಾದರಿ ಕ್ರಿಕೆಟ್‌ನಲ್ಲಿ ಕೆಲ ಬಾರಿ ಇಂತಹ ಅಹಿತಕರ ಘಟನೆಗಳು ನಡೆಯುತ್ತವೆ. ಕೆಲ ಬಾರಿ ಅವು ಹೊರಬರುತ್ತವೆ. ಇನ್ನು ಕೆಲ ಸಮಯ ಹೊರಗೆ ಬರುವುದಿಲ್ಲ. ನನಗೆ ಬಂದಿರುವ ಈ ಅಚ್ಚರಿಯ ಸುದ್ದಿಯಂತೆ ಐಪಿಎಲ್‌ನಲ್ಲಿ ಏನಾದರೂ ನಡೆದಿದೆ ಎಂದು ನನಗೆ ಅನಿಸುತ್ತಿಲ್ಲ'
-ಸುನಿಲ್ ಗವಾಸ್ಕರ್, ಭಾರತ ತಂಡದ ಮಾಜಿ ನಾಯಕ
'ಶ್ರೀಶಾಂತ್ ಬಂಧಿಸಲಾಗಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಕಪಾಳ ಮೋಕ್ಷ ಪ್ರಕರಣದಲ್ಲಿ ಭಾಗಿಯಾಗಿದ್ದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಹರ್ಭಜನ್ ಸಿಂಗ್ ಕೈವಾಡವಿದೆ'.
-ಶಾಂತಕುಮಾರನ್ ನಾಯರ್, ಶ್ರೀಶಾಂತ್ ತಂದೆ