ಪ್ಲೇ ಆಫ್ ಕನಸಲ್ಲಿ ಸನ್
ಹೈದರಾಬಾದ್: ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್ ತಂಡವು ಶುಕ್ರವಾರ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ಮಾನಸಿಕ ಒತ್ತಡದಲ್ಲಿ ಕಣಕ್ಕಿಳಿಯಲಿದೆ.
ಈಗಾಗಲೇ ರಾಜಸ್ಥಾನ ತಂಡ ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆದಿದ್ದು, ಈ ಪಂದ್ಯ ರಾಯಲ್ಸ್ ಪಾಲಿಗೆ ಮಹತ್ವದ್ದೇನಲ್ಲ. ಆದರೆ ಆರ್ಸಿಬಿ ತಂಡದೊಂದಿಗೆ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲು ಪೈಪೋಟಿ ನಡೆಸುತ್ತಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಈ ಪಂದ್ಯವನ್ನು ಗೆಲ್ಲಲೆಬೇಕಾದ ಅನಿವಾರ್ಯತೆಯಲ್ಲಿದೆ. ಸ್ಪಾಟ್ ಫಿಕ್ಸಿಂಗ್ನಿಂದಾಗಿ ರಾಯಲ್ಸ್ ತಂಡದ ಮೂವರು ಆಟಗಾರರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದು, ಈ ಘಟನೆಯಿಂದ ತಂಡ ಮಾಲೀಕರು ಸೇರಿದಂತೆ ಆಟಗಾರರೂ ಪಂದ್ಯದ ಮೇಲೆ ಯಾವರೀತಿಯ ಗಮನ ಹರಿಸಲಿದ್ದಾರೆ ಎಂಬುದು ಕಾದು ನೋಡಬೇಕು. ಅಲ್ಲದೆ ಈ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ತವರಿನಲ್ಲಿ ಆಡುತ್ತಿರುವ ಹಿನ್ನಲೆಯಲ್ಲಿ ಹೈದರಾಬಾದ್ ತಂಡ ಗೆಲ್ಲುವ ಫೇವರಿಟ್ ಎನಿಸಿದೆ.
ಹೈದರಾಬಾದ್ ತಂಡ ಉತ್ತಮ ಬೌಲಿಂಗ್ ಪಡೆ ಹೊಂದಿದ್ದು, ರಾಜಸ್ಥಾನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ ಹಾಗಾಗಿ ಈ ಪಂದ್ಯದಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಯುವ ನಿರೀಕ್ಷೆ ಅಭಿಮಾನಿಗಳದ್ದು. ಹೈದರಾಬಾದ್ ತಂಡದಲ್ಲಿ ಡೇಲ್ ಸ್ಟೇಯ್ನ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ತಿಸಾರ ಪೆರೇರಾ ಸಂಘಟಿತವಾದ ದಾಳಿ ನಡೆಸುತ್ತಿರುವುದು ತಂಡದ ಯಶಸ್ಸಿನ ಪ್ರಮುಖ ಅಂಶವಾಗಿದೆ. ಇದೇ ರೀತಿ ರಾಜಸ್ಥಾನದ ಬ್ಯಾಟಿಂಗ್ ವಿಭಾಗದಲ್ಲಿ ಅಜಿಂಕ್ಯ ರಹಾನೆ ಹಾಗೂ ರಾಹುಲ್ ದ್ರಾವಿಡ್ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದು, ನಂತರ ವ್ಯಾಟ್ಸನ್, ಸಂಜು ಸ್ಯಾಮ್ಸನ್, ಸ್ಟುವರ್ಟ್ ಬಿನ್ನಿ, ಬ್ರಾಡ್ ಹಾಡ್ಜ್ ರಂತಹ ಪ್ರಮುಖ ಬ್ಯಾಟ್ಸ್ಮನ್ಗಳನ್ನು ಹೊಂದಿದೆ.
ಇನ್ನು ಹೈದರಾಬಾದ್ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಪಾರ್ತಿವ್ ಪಟೇಲ್, ಶಿಖರ್ ಧವನ್, ವಿಹಾರಿ, ಕೆಮರೂನ್ ವೈಟ್, ತಿಸಾರ ಪೆರೇರಾ, ಡರೆನ್ ಸಾಮಿರಂತಹ ಬ್ಯಾಟ್ಸ್ಮನ್ಗಳನ್ನು ಹೊಂದಿದೆ. ಹೈದರಾಬಾದ್ ತಂಡದ ಬ್ಯಾಟ್ಸ್ಮನ್ಗಳಿಗೆ ಸವಾಲೊಡ್ಡಲು ರಾಜಸ್ಥಾನ ತಂಡದಲ್ಲಿ ವ್ಯಾಟ್ಸನ್, ಫಾಕ್ನರ್, ಬಿನ್ನಿ, ಕೂಪರ್, ಚವಾಣ್, ಪ್ರವಿಣ್ ತಂಬೆಯಂತಹ ಉತ್ತಮ ಬೌಲರ್ಗಳಿದ್ದಾರೆ.
ಒಟ್ಟಾರೆಯಾಗಿ ಪ್ಲೇ ಆಫ್ ಸುತ್ತಿನ ಕನಸು ಕಾಣುತ್ತಿರುವ ಹೈದರಾಬಾದ್ ಹಾಗೂ ಪಂದ್ಯಾವಳಿಯಲ್ಲಿ ಸಂಘಟಿತ ಪ್ರದರ್ಶನ ನೀಡಿರುವ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ಅಭಿಮಾನಿಗಳಿಗೆ ಉತ್ತಮ ಪಂದ್ಯ ನೀಡುವಲ್ಲಿ ಯಾವುದೇ ಅನುಮಾನವಿಲ್ಲ.
ತಂಡಗಳು
ರಾಜಸ್ಥಾನ ರಾಯಲ್ಸ್
ರಾಹುಲ್ ದ್ರಾವಿಡ್ (ನಾಯಕ), ಅಜಿಂಕ್ಯ ರಹಾನೆ, ಅಶೋಕ್ ಮನೇರಿಯಾ, ಬ್ರಾಡ್ ಹಾಡ್ಜ್, ಬ್ರಾಡ್ ಹಾಗ್, ದಿಶಾಂತ್ ಯಗ್ನಿಕ್, ಫಿಡೆಲ್ ಎಡ್ವರ್ಡ್ಸ್, ಹರ್ಮೀತ್ ಸಿಂಗ್, ಜೇಮ್ಸ್ ಫಾಕ್ನರ್, ಕೆವಿನ್ ಕೂಪರ್, ಒವೈಸ್ ಶಾ, ಪ್ರವೀಣ್ ತಂಬೆ, ರಾಹುಲ್ ಶುಕ್ಲಾ, ಸಚಿನ್ ಬೇಬಿ, ಸಂಜು ಸ್ಯಾಮ್ಸನ್, ಶೇನ್ ವ್ಯಾಟ್ಸನ್, ಶಾನ್ ಟೈಟ್, ಸಿದ್ಧಾರ್ಥ್ ತ್ರಿವೇದಿ, ಸ್ಟುವರ್ಟ್ ಬಿನ್ನಿ.
ಸನ್ರೈಸರ್ಸ್ ಹೈದರಾಬಾದ್
ಕೆಮೆರೂನ್ ವೈಟ್ (ನಾಯಕ), ಕುಮಾರ ಸಂಗಕ್ಕಾರ, ಅಕ್ಷತ್ ರೆಡ್ಡಿ, ಅಮಿತ್ ಮಿಶ್ರಾ, ಅಂಕಿತ್ ಶರ್ಮಾ, ಆಶೀಶ್ ರೆಡ್ಡಿ, ಬಿಪ್ಲಾಪ್ ಸಮಾಂತ್ರೇ, ಡೇಲ್ ಸ್ಟೇನ್, ಡರೇನ್ ಸಾಮಿ, ದ್ವಾರಕ ರವಿತೇಜ, ಹನುಮ ವಿಹಾರಿ, ಇಶಾಂತ್ ಶರ್ಮಾ, ಜೆಪಿ ಡುಮಿನಿ, ಕರಣ್ ಶರ್ಮಾ, ಪಾರ್ಥೀವ್ ಪಟೇಲ್, ಕ್ವಿಂಟನ್ ಡಿ ಕಾಕ್, ಶಿಖರ್ ಧವನ್, ತಿಸಾರಾ ಪರೇರಾ.