ಫುಟ್ಬಾಲ್: ಗಜಾನನ ತಂಡಕ್ಕೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿ ಡಿವಿಷನ್ ಪಂದ್ಯಾವಳಿಯ ಗುರುವಾರದ ಪಂದ್ಯದಲ್ಲಿ ಗಜಾನನ ತಂಡವು ಭಾರತೀಯ ರಿಸರ್ವ್ ಬ್ಯಾಂಕ್ ತಂಡದ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು.
ಗಜಾನನ ತಂಡದ ಪರ ವಿಕ್ರಮ್ 12 ಮತ್ತು 27ನೇ, ಮದನ್ 45ನೇ, ಸುಮನ್ 69ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಭಾರತೀಯ ರಿಸರ್ವ್ ಬ್ಯಾಂಕ್ ತಂಡದ ಪರ ಕ್ಲಿಂಟನ್ 23ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಇನ್ನು ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ ತಂಡವು ನೈರುತ್ಯ ರೈಲ್ವೆ ತಂಡದ ವಿರುದ್ಧ 4-0 ಅಂತರದ ಭರ್ಜರಿ ಜಯ ಸಾಧಿಸಿದೆ. ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಬೆಂಗಳೂರು ಇಂಡಿಪೆಂಡೆಂಟ್ ತಂಡದ ಪರ ಜಬೇ 32ನೇ, ಶಿವಶಂಕರ್ 34ನೇ, ಜೇಮ್ಸ್ 38ನೇ ಮತ್ತು 55ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.