15 ಪಂದ್ಯಗಳ ಮೇಲೆ ಕಣ್ಣು
ನವದೆಹಲಿ: ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಹಿನ್ನೆಲೆಯಲ್ಲಿ ಬಂಧಿಸಲಾಗಿರುವ ಬುಕ್ಕಿಗಳ ವಿಚಾರಣೆ ನಡೆಸಿರುವ ದೆಹಲಿ ಪೊಲೀಸರು, ಇನ್ನು 15 ಪಂದ್ಯಗಳಲ್ಲಿ ಫಿಕ್ಸಿಂಗ್ ನಡೆದಿರುವ ಅನುಮಾನ ವ್ಯಕ್ತ ಪಡಿಸಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ 15 ಪಂದ್ಯಗಳು ಐಪಿಎಲ್ 6ನೇ ಆವೃತ್ತಿಯ ಪಂದ್ಯಗಳಾಗಿದ್ದು, ರಾಜಸ್ಥಾನ ತಂಡವಷ್ಟೇ ಅಲ್ಲ, ಉಳಿದ ತಂಡಗಳ ಆಟಗಾರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಂತರಿಕ ತನಿಖೆ: ಏತನ್ಮಧ್ಯೆ, ರಾಜಸ್ಥಾನ ರಾಯಲ್ಸ್ ವ್ಯವಸ್ಥಾಪಕ ಮಂಡಳಿ ತನ್ನ ಆಟಗಾರರ ಬಗ್ಗೆ ಎದ್ದಿರುವ ಫಿಕಿಂಗ್ಸ್ ಆರೋಪದ ಕುರಿತು ಆಂತರಿಕ ತನಿಖೆ ಆರಂಭಿಸಿದೆ.
ಅಂಕಿತ್ ತಪ್ಪೊಪ್ಪಿಗೆ
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನಲೆಯಲ್ಲಿ ಬಂಧಿತರಾಗಿರುವ ಅಂಕಿತ್ ಚೌವಾಣ್, ಶುಕ್ರವಾರ ಪೊಲೀಸರ ವಿಚಾರಣೆ ಸಮಯದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾನು ಹಣದ ಆಸೆಗೆ ಆಕರ್ಷಿತನಾಗಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿ ದೊಡ್ಡ ತಪ್ಪು ಮಾಡಿದೆ ಎಂದಿರುವ ಬಗ್ಗೆ ಮೂಲಗಳು ತಿಳಿಸಿವೆ. ಲಭ್ಯವಾಗಿರುವ ದೂರವಾಣಿ ದಾಖಲೆಗಳ ಪ್ರಕಾರ ಅಂಕಿತ್ ಆರಂಭದಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಲು ನಿರಾಕರಿಸಿದರು. ಆ ನಂತರ ಬುಕ್ಕಿ ಹಣದ ಸಂಭಾವನೆಯನ್ನು ಹೆಚ್ಚಿಸುತ್ತಿದ್ದಂತೆ ಅಂಕಿತ್ ಇದಕ್ಕೆ ಒಪ್ಪಿಕೊಂಡಿರುವುದು ಕಂಡು ಬಂದಿದೆ.ಅಂಕಿತ್ ಚೌವಾಣ್ ಹಾಗೂ ಬುಕ್ಕಿಯ ನಡುವೆ ಮದ್ಯವರ್ತಿಯಾಗಿ ಅಜಿತ್ ಚಾಂಡಿಲಾ ಕಾರ್ಯ ನಿರ್ವಹಿಸಿದ್ದು, ಅಂಕಿತ್ ಅವರನ್ನು ಫಿಕ್ಸಿಂಗ್ಗೆ ಕರೆ ತಂದಿದ್ದು ಚಾಂಡಿಲಾ. ಅಲ್ಲದೆ ಚೌವಾಣ್ರ ಸಂಭಾವನೆಯನ್ನು ಚಾಂಡಿಲಾ ಬುಕ್ಕಿಯಿಂದ ಪಡೆದು ಚೌವಾಣ್ಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದೆಯೂ ಚಾಂಡಿಲಾ ಫಿಕ್ಸ್
ನವದೆಹಲಿ: ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಬಂಧಿತರಾಗಿರುವ ಅಜಿತ್ ಚಾಂಡಿಲಾ, ಕಳೆದ ಐಪಿಎಲ್ ಆವೃತ್ತಿಯಲ್ಲೂ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಪಂದ್ಯದ ವೇಳೆ ತಮ್ಮ ಬುಕ್ಕಿಗೆ ಸೂಚನೆ ನೀಡಲು ಮರೆತ ಚಂಡಿಲಾ ನಂತರ ಬುಕ್ಕಿ ಜತೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ 'ಕಳೆದ ವರ್ಷ ಯಾವಾಗಲಾದರೂ ಈ ರೀತಿಯ ಸಮಸ್ಯೆಗಳು ಎದುರಾಗಿದ್ದವೇ?' ಎಂಬ ಅಂಶ ಇರುವ ಸಂಭಾಷಣೆಯನ್ನು ಪೊಲೀಸರು ವಿಶ್ಲೇಷಿಸಿದ್ದಾರೆ. ಅಲ್ಲದೆ ಚಾಂಡಿಲಾ ಇನ್ನು ಹೆಚ್ಚಿನ ಆಟಗಾರರನ್ನು ಸ್ಪಾಟ್ ಫಿಕ್ಸಿಂಗ್ಗೆ ತರುವುದಾಗಿ ಭರವಸೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ತಿಂಗಳ ಮೊದಲೇ ವ್ಯವಹಾರ
ನವದೆಹಲಿ: ಐಪಿಎಲ್ನ 6ನೇ ಆವೃತ್ತಿ ಪಂದ್ಯಗಳು ನಡೆಯುವ ಒಂದು ತಿಂಗಳಿಗೂ ಹೆಚ್ಚಿನ ಅವಧಿಗೆ ಮುನ್ನವೇ ಚಾಂಡಿಲಾ ಬುಕ್ಕಿಗಳೊಂದಿಗೆ ಫಿಕ್ಸ್ ಮಾಡಿಕೊಳ್ಳುತ್ತಿದ್ದನಂತೆ. ಚಾಂಡಿಲಾ ಮತ್ತು ಮುಂಬೈ ಮೂಲದ ಬುಕ್ಕಿ ಚಂದ್ರಶ್ ಪಟೇಲ್ ಏಪ್ರಿಲ್ 6ರಂದೇ ಗುರ್ಗಾಂವ್ನ ಕಂಟ್ರಿ ಕ್ಲಬ್ನಲ್ಲಿ ಭೇಟಿಯಾಗಿದ್ದರಂತೆ. ಓವರ್ ಒಂದಕ್ಕೆ ರು. 20 ಲಕ್ಷ ಫಿಕ್ಸಿಂಗ್ ಮಾಡಿಕೊಂಡಿರುವ ಸಾಧ್ಯತೆಗಳಿವೆ ಎಂದು ಡೆಲ್ಲಿ ಪೊಲೀಸ್ ಮೂಲಗಳು ಹೇಳಿವೆ. ಏಪ್ರಿಲ್ 8ರಂದು ಕೆಕೆಆರ್ ಮತ್ತು ರಾಜಸ್ಥಾನ ನಡುವೆ ನಡೆದ ಪಂದ್ಯದಲ್ಲಿ ಅಂಕಿತ್ ಚೌಹಣ್ ಫಿಕ್ಸಿಂಗ್ ಮಾಡಿಕೊಂಡಿದ್ದನಂತೆ. ಅಜಿತ್ ಚಾಂಡಿಲಾ ಎರಡು ಬಾರಿ ಬುಕ್ಕಿಗಳಿಂದ ಮುಂಗಡ ಹಣ ಪಡೆದಿದ್ದಾನೆ. ಮೊದಲ ಬಾರಿ ರು. 9 ಲಕ್ಷ ಮತ್ತು ನಂತರ ರು. 3 ಲಕ್ಷ ಪಡೆದಿದ್ದಾನೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.