ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪ್ಲೇ ಆಫ್ ಕನಸಲ್ಲಿ ಪಂಜಾಬ್

Srinivasa Murthy VN
Updated On : 18 May 2013, 12:06 pm

ಧರ್ಮಶಾಲಾ: ಕಳೆದ ಕೆಲ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತ ಪ್ಲೇ ಆಫ್ ಪ್ರವೇಶದ ಕನಸು ಕಾಣುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಎದುರಿಸಲಿದೆ.
ಮುಂಬೈ ತಂಡ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳೊಂದಿಗೆ ಪ್ಲೇ ಆಫ್ ಹಂತ ಪ್ರವೇಶಿಸಿದೆ. ಈಗ ನಾಲ್ಕನೇ ಸ್ಥಾನಕ್ಕಾಗಿ ಪಂಜಾಬ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪೈಪೋಟಿ ನಡೆಸುತ್ತಿವೆ.
ಈ ಮೂರು ತಂಡಗಳಲ್ಲಿ ಪಂಜಾಬ್ ತೀರಾ ಕಡಿಮೆ ಅವಕಾಶವನ್ನು ಹೊಂದಿದೆ. ಪಂಜಾಬ್ ಆಡಿರುವ 15 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿದೆ. ಆದರೆ, ಹೈದರಾಬಾದ್ ಮತ್ತು ಆರ್‌ಸಿಬಿ ತಂಡಗಳು ತಲಾ 16 ಅಂಕಗಳನ್ನು ಹೊಂದಿವೆ.
ಹೀಗಾಗಿ ಒಂದು ವೇಳೆ ಪಂಜಾಬ್ ಪ್ಲೇ ಆಫ್ ಹಂತ ಪ್ರವೇಶಿಸಬೇಕಾದರೆ, ಮೊದಲು ಮುಂಬೈ ವಿರುದ್ಧ ಜಯ ಸಾಧಿಸಬೇಕು. ಆದರೆ, ಈಗಾಗಲೇ ಪ್ಲೇ ಆಫ್ ಪ್ರವೇಶಿಸಿ ಯಾವುದೇ ಒತ್ತಡವಿಲ್ಲದೆ ಆಡುತ್ತಿರುವ ಮುಂಬೈ ವಿರುದ್ಧ ಇದು ಸಾಧ್ಯವೇ ಎಂಬುದು ಅನುಮಾನ ಮೂಡಿಸಿದೆ. ಈ ಹಿಂದಿನ ಪಂದ್ಯಗಳಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳ ವಿರುದ್ಧ ಜಯ ಸಾಧಿಸಿದ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಶ್ವಾಸ ಹೆಚ್ಚಿಸಿಕೊಂಡಿದೆ. ಆರ್‌ಸಿಬಿ ಮತ್ತು ಡೆಲ್ಲಿ ವಿರುದ್ಧ ರನ್ ಗಳಿಸುವಲ್ಲಿ ಯಶಸ್ವಿಯಾಗಿರುವ ನಾಯಕ ಗಿಲ್‌ಕ್ರಿಸ್ಟ್ ಮುಂಬೈ ವಿರುದ್ಧ ಮಿಂಚಲು ಎದುರು ನೋಡುತ್ತಿದ್ದಾರೆ.
ಆರಂಭದ ಕೆಲ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಪಂಜಾಬ್ ತಂಡ ಅಂತಿಮವಾಗಿ ರನ್ ಗಳಿಸುವಲ್ಲಿ ಯಶಸ್ವಿಯಾಗುತ್ತಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಪಂಜಾಬ್‌ಗೆ ಪ್ರವೀಣ್ ಕುಮಾರ್ ನೆರವಾಗುತ್ತಿದ್ದಾರೆ. ಪ್ರವೀಣ್ ಜತೆ ಸಂದೀಪ್ ಶರ್ಮಾ ಸಹ ತಕ್ಕ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ವೇಗಿ ಅಜರ್ ಮಹ್ಮೂದ್ ಮತ್ತು ಸ್ಪಿನ್ನರ್ ಪಿಯುಶ್ ಚಾವ್ಲಾ ರನ್ ನಿಯಂತ್ರಿಸುವಲ್ಲಿ ವಿಫಲವಾಗಿದ್ದರು.
ಇನ್ನೊಂದೆಡೆ ಮುಂಬೈ ತಂಡ ಯಾವುದೇ ಕಾರಣಕ್ಕೂ ಪಂದ್ಯವನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲಿಲ್ಲ. ಎಲ್ಲ ವಿಭಾಗಗಳಲ್ಲೂ ಪಂಜಾಬ್‌ಗಿಂತ ಬಲಿಷ್ಠವಾಗಿರುವ ಮುಂಬೈ ಪಂದ್ಯದಲ್ಲಿ ಗೆಲ್ಲುವ ಫೇವರಿಟ್. ದಿನೇಶ್ ಕಾರ್ತಿಕ್, ಕೀರನ್ ಪೊಲಾರ್ಡ್ ಹಾಗೂ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮುಂಬೈ ತಕ್ಕ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ.
ಇತ್ತೀಚೆಗೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಮುಂಬೈ ಕಣಕ್ಕಿಳಿಸಿದೆ. ಮಿಚೆಲ್ ಜಾನ್ಸನ್ ನಾಯಕತ್ವದ ಮುಂಬೈ ವೇಗದ ಬೌಲಿಂಗ್ ವಿಭಾಗ ಉತ್ತಮ ಪ್ರದರ್ಶನ ತೋರುತ್ತಿದೆ. ಜಾನ್ಸನ್, ಲಸಿತ್ ಮಾಲಿಂಗ, ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡಕ್ಕೆ ಸೂಕ್ತ ಕೊಡುಗೆಯನ್ನು ನೀಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement