ಬೆಟ್ಟಿಂಗ್ ವಿಶ್ವರೂಪ
ಕ್ರಿಕೆಟ್ ಬೆಟ್ಟಿಂಗ್ನ ಜಾಲ ಯಾವ ರೀತಿ ಹೆಣೆದುಕೊಂಡಿದೆ, ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ...
ಕ್ರಿಕೆಟ್ ಬೆಟ್ಟಿಂಗ್ನ ದೈತ್ಯಕಾರದ ಜಾಲವೊಂದು ಜಾಗತಿಕ ಮಟ್ಟದಲ್ಲಿ ಹರಡಿಕೊಂಡಿದೆ. ಆ ಮೋಸದ ಬಲೆ ಯಾವ ರೀತಿ ಹೆಣೆದುಕೊಂಡಿದೆ, ಯಾವ ರೀತಿಯಲ್ಲಿ ಅದು ಕಾರ್ಯ ನಿರ್ವಹಿಸುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
1 ಅನೀಸ್ ಇಬ್ರಾಹಿಂ
ಬೆಟ್ಟಿಂಗ್ನಲ್ಲಿ ತೊಡಗಿಸಲಾಗುವ ಹಣದ ಹೊಳೆಯ ಮೂಲ ದುಬೈ. ಬುರ್ಜ್ ಡೇರಾದಲ್ಲಿರುವ ಅನೀಸ್ ಇಬ್ರಾಹೀಂ ಈ ಜಾಲದ ರೂವಾರಿ. ಈತ ಭೂಗತ ದೊರೆ ದಾವೂದ್ ಇಬ್ರಾಹೀಂನ ಕಿರಿಯ ಸಹೋದರ. ಈತ ಮನೋಜ್ ಮೆಟ್ರೊ ಹಾಗೂ ಸುನಿಲ್ ದುಬೈ ಎಂಬ ಇಬ್ಬರು ತನ್ನ ನಿಕಟವರ್ತಿಗಳ ಮೂಲಕ ಜಾಲವನ್ನು ನಿಯಂತ್ರಿಸುತ್ತಾನೆ. ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಇವರ ತಯಾರಿ ಶುರುವಾಗಿರುತ್ತದೆ.
2 ಸುನೀಲ್ ದುಬೈ, ಮನೋಜ್ ಮೆಟ್ರೋ, ಪವನ್ ಜೈಪುರ್
ಮೆಟ್ರೋ ಹಾಗೂ ದುಬೈ - ಈ ಇಬ್ಬರೂ ತಮ್ಮ ಜಾಲವನ್ನು ಭಾರತ, ಪಾಕಿಸ್ತಾನಗಳಲ್ಲಿ ವ್ಯವಸ್ಥಿತ ಜಾಲ ಹೊಂದಿದ್ದಾರೆ. ಈ ದೇಶಗಳಲ್ಲಿ ಬೆಟ್ಟಿಂಗ್ ನಿರ್ವಹಣೆಗಾಗಿ ಒಬ್ಬೊಬ್ಬ ಬಾಸ್ ಇರುತ್ತಾರೆ. ಅವರು ಹಿರಿಯ ಬುಕಿಗಳೊಡನೆ ಸದಾ ಸಂಪರ್ಕದಲ್ಲಿರುತ್ತಾರೆ. ಆ ಹಿರಿಯ ಬುಕಿಗಳು ಐಪಿಎಲ್ ನಡೆಯುವ ಎಲ್ಲಾ ರಾಜ್ಯಗಳಲ್ಲೂ ತಮ್ಮದೇ ಆದ ಜಾಲವನ್ನು ಹೊಂದಿರುತ್ತಾರೆ. ಗುಜರಾತ್, ಮುಂಬೈ, ಜೈಪುರ ಹಾಗೂ ದೆಹಲಿ - ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ನಡೆಯುವ ತಾಣಗಳು.
3 ಭಾರತ ಪಾಕಿಸ್ತಾನ
ಬುಕಿಗಳ ಪ್ರತಿನಿಧಿಗಳು ಕೆಲವೊಮ್ಮೆ ಕೆಲ ತಂಡದ ಆಟಗಾರರನ್ನು ರಹಸ್ಯವಾಗಿ ಸಂಪರ್ಕಿಸುತ್ತಾರೆ. ಇದೀಗ ಸಿಕ್ಕಿಬಿದ್ದಿರುವ ರಾಜಸ್ಥಾನ ರಾಯಲ್ಸ್ ತಂಡದಲ್ಲಿನ ಆಟಗಾರರನ್ನು ಈ ಬುಕಿಗಳು ಸಂಪರ್ಕಿಸಿದ್ದರೆಂದು ಹೇಳಲಾಗಿದೆ. ಒಂದೊಮ್ಮೆ ಆಟಗಾರರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದಿದ್ದರೂ, ಆಟಗಾರರ ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಮೂಲಕ ಲೆಕ್ಕಾಚಾರ ಕುದುರಿಸುತ್ತಾರೆ.
4 ಆಟಗಾರರೊಂದಿಗೆ ವ್ಯವಹಾರ ಕುದುರಿದ ನಂತರವಷ್ಟೇ ಬುಕಿಗಳು 'ಸೀಸನ್ ಶುರುವಾಗಿದೆ'ಯೆಂದು ತಮ್ಮ ಮೂಲಗಳಿಗೆ ಸುದ್ದಿ ನೀಡುತ್ತಾರೆ. ಇದರಿಂದ ಕೆಳ ಹಂತದ ಬುಕಿಗಳೂ ಜಾಗೃತರಾಗಿ 'ಕೆಲಸ'ದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಕೆಳ ಹಂತದ ಬುಕಿಗಳಿಂದಲೇ ಈ ವ್ಯವಹಾರ ವಿಶ್ವರೂಪ ಪಡೆಯುತ್ತದೆ.
5 ಒಮ್ಮೆ ಬೆಟ್ಟಿಂಗ್ ಶುರುವಾದ ಕೂಡಲೇ, ಮಧ್ಯವರ್ತಿಗಳು ವಿಶ್ವವ್ಯಾಪಿಯಾಗಿ ಹರಡಿರುವ ಬೆಟ್ ವ್ಯಕ್ತಿಗಳಿಂದ ಹಣ ಪಡೆಯುತ್ತಾರೆ. ಇದರಲ್ಲಿ ಹೊಸದಾಗಿ ಬೆಟ್ನಲ್ಲಿ ತೊಡಗಿಸಿಕೊಳ್ಳುವವರೂ ಇರುತ್ತಾರೆ. ಬೆಟ್ಟಿಂಗ್ಗೆ ಒಪ್ಪಿಕೊಂಡಿರುವ ಆಟಗಾರರ ಜೊತೆ, ಮೂಲ ಬುಕಿಗಳು ಸದಾ ಸಂಪರ್ಕದಲ್ಲಿರುತ್ತಾರೆ.
ಪ್ರಮುಖ ಹೆಸರುಗಳು
ಅನೀಸ್ ಇಬ್ರಾಹೀಂ
ಈತ, ದಾವೂದ್ ಇಬ್ರಾಹೀಂನ ಕಿರಿಯ ಸಹೋದರ. ಈತ ಜಾಗತಿಕ ಮಟ್ಟದಲ್ಲಿ ನಡೆಯುವ ಬೆಟ್ಟಿಂಗ್ ಜಾಲವನ್ನು ದುಬೈನಿಂದ ಹಾಗೂ ಕರಾಚಿಯಿಂದ ನಿಯಂತ್ರಿಸುತ್ತಾನೆ. ಈತನ ಸಹಚರರು ಭಾರತದಲ್ಲಿರುವ ಬುಕಿಗಳನ್ನು ಸಂಪರ್ಕಿಸುತ್ತಾರೆ. ಇಲ್ಲಿನ ಬುಕಿಗಳು ಬೆಟ್ಟಿಂಗ್ ಶುರು ಮಾಡುತ್ತಾರೆ.
ಸುನಿಲ್, ಮನೋಜ್, ಪವನ್
ಈ ಮೂವರೂ ಡಿ-ಕಂಪನಿ (ದಾವೂದ್ ಕಂಪನಿ)ಗೆ ದುಡಿಯುವ ವ್ಯಕ್ತಿಗಳು. ಇವರೆಲ್ಲರ ಬಾಸ್ ಇಬ್ರಾಹೀಂ. ಈ ಮೂವರೂ ದುಬೈ ಅಥವಾ ಕರಾಚಿಯಿಂದ ನೇರವಾಗಿ ಬೆಟ್ಟಿಂಗ್ ಜಾಲವನ್ನು ನಿಯಂತ್ರಿಸುತ್ತಾರೆ. ಈ ಮೂವರೂ ದೊಡ್ಡ ಮಟ್ಟದ ಬುಕಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡಿರುತ್ತಾರೆ. ಮೂಲಗಳ ಪ್ರಕಾರ, ಕಳೆದೆರಡು ದಶಕಗಳಿಂದ ಇವರದ್ದು ಇದೇ ದಂಧೆ.
ಚಂದ್ರೇಶ್ ಅಲಿಯಾಸ್ ಜ್ಯೂಪಿಟರ್
ದೆಹಲಿ ಮೂಲದವನೆಂದು ಹೇಳಲಾಗುವ ಈತ ಸುನಿಲ್ ದುಬೈ ಹಾಗೂ ಮನೋಜ್ ಮೆಟ್ರೋಗೆ ಆಪ್ತ. ಈತ ಭಾರತದಲ್ಲಿ ಬೆಟ್ಟಿಂಗ್ ಜಾಲವನ್ನು ಹೊಂದಿದ್ದು, ದೆಹಲಿ ಹಾಗೂ ಜೈಪುರ ಈತನ ಜಾಲದ ಪ್ರಮುಖ ಕೇಂದ್ರಗಳು. ಈ ಬಾರಿಯ ಐಪಿಎಲ್ ಶುರುವಾಗುತ್ತಲೇ, ಮೂವರು ಆಟಗಾರರು ಬೆಟ್ಟಿಂಗ್ಗೆ ಒಪ್ಪಿದ್ದಾರೆಂದೂ, ಕೆಲವು ಅಂತಾರಾಷ್ಟ್ರೀಯ ಆಟಗಾರರೂ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಯಾಗಲಿದ್ದಾರೆಂದೂ ಮೆಟ್ರೋಗೆ ಸುದ್ದಿ ಮುಟ್ಟಿಸಿದ್ದ.
ಜೀಜು ಅಲಿಯಾಸ್ ಜನಾರ್ಧನನ್ ಅಲಿಯಾಸ್ ಬಿಜು
ಈತ ಕೇರಳ ಮೂಲದ ಬುಕಿ. ಈತನ ಊರು ಕೊಚಿ. ಈತ ಮಾಜಿ ಕ್ಲಬ್ ಮಟ್ಟದ ಕ್ರಿಕೆಟಿಗ ಹಾಗೂ ಶ್ರೀಶಾಂತ್ಗೆ ಆಪ್ತ. ಈತ ಕೇರಳ ಮೂಲದ ಕ್ರಿಕೆಟ್ ಕ್ಲಬ್ಗಳ, ಆಟಗಾರರ ಸಂಪರ್ಕ ಹೊಂದಿದ್ದಾನೆ. ಈ ಬಾರಿಯ ಐಪಿಎಲ್ ವೇಳೆ ಕರಾಚಿಯಿಂದ ಈತನ ಮೊಬೈಲ್ಗೆ ಸುಮಾರು 20 ಕರೆಗಳು ಬಂದಿವೆ.
ಟಿಕ್ಕು ಮಂಡಿ
ಬೆಟ್ಟಿಂಗ್ನಲ್ಲಿ ಸಾಕಷ್ಟು ಅನುಭವಿ ಹಾಗೂ ಪಂಟರ್ ಈತ ಮೂಲತಃ ದೆಹಲಿಯವನು. ಭಾರತದ ಕೆಲ ದೊಡ್ಡ ಕ್ರಿಕೆಟರ್ಗಳ ಜತೆ ಈತನ ಸಂಪರ್ಕವಿದೆ. ಲಂಡನ್ ಹಾಗೂ ಜೊಹಾನ್ಸ್ಬರ್ಗ್ಗಳಲ್ಲಿ ಈತನ ಹೆಸರಲ್ಲಿ ಆಸ್ತಿಯಿದೆ. ವಿದೇಶಗಳಲ್ಲಿ, ತೀರ ವ್ಯವಸ್ಥಿತವಾದ, ಸುಸಜ್ಜಿತವಾದ ಬೆಟ್ಟಿಂಗ್ ಜಾಲವನ್ನು ಈತ ಹೊಂದಿದ್ದಾನೆ ಎಂದು ಹೇಳಲಾಗಿದೆ. ಐಪಿಎಲ್ ಆಟಗಾರರಿಗೆ ಈತ ಖುದ್ದಾಗಿ ಪಾರ್ಟಿಗಳನ್ನು ಆಯೋಜಿಸಿದ್ದಾನೆಂಬ ಮಾಹಿತಿಗಳೂ ಇವೆ.