ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತ ಸಾಧಿಸುವುದು ಸಾಕಷ್ಟಿದೆ

Srinivasa Murthy VN
Updated On : 18 May 2013, 12:07 pm

ರನ್ನಿಂಗ್‌ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಹಾಗೂ ಒಂದು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಮಾರಿಯಾ ಮುಟೋಲಾ ಅವರು, ಮೇ 19ರಂದು ನಡೆಯಲಿರುವ 'ವಿಶ್ವ 10 ಕೆ' ಬೆಂಗಳೂರು ಮ್ಯಾರಥಾನ್‌ನ ರಾಯಭಾರಿಯಾಗಿದ್ದಾರೆ. ಆಫ್ರಿಕಾದ ಮೊಝಾಂಬಿಕ್ ದೇಶದ ಮಹಿಳಾ ಅಥೀಟ್ ಆದ ಇವರು, 800 ಮೀ. ಓಟದ ಸ್ಪರ್ಧೆಯ ಸ್ಪೆಷಲಿಸ್ಟ್. ವಿಶ್ವ ಅಥ್ಲೆಟಿಕ್ಸ್ ಲೋಕದಲ್ಲಿ 'ಮಾಪುಟು ಎಕ್ಸ್‌ಪ್ರೆಸ್‌' ಎಂದೇ ಕರೆಯಲ್ಪಡುವ ಇವರು, ತಮ್ಮ ವೃತ್ತಿಜೀವನದಲ್ಲಿ ಒಲಿಂಪಿಕ್ಸ್, ವಿಶ್ವ ಚಾಂಪಿಯನ್ಸ್ ಪಂದ್ಯಾವಳಿ, ವಿಶ್ವ ಒಳಾಂಗಣ ಕ್ರೀಡೆಗಳ ಪಂದ್ಯಾವಳಿ ಹಾಗೂ ಕಾಮನ್ವೆಲ್ತ್ ಪಂದ್ಯಾವಳಿಗಳು ಸೇರಿದಂತೆ ಒಟ್ಟು 11 ಚಿನ್ನದ ಪದಕ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗಳಿಸಿದ್ದಾರೆ. 'ಕನ್ನಡಪ್ರಭ'ದೊಂದಿಗೆ ಮುಖಾಮುಖಿಯಾದ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

1.   ಬೆಂಗಳೂರು ವಿಶ್ವ 10ಕೆ ಮ್ಯಾರಥಾನ್ ಬಗ್ಗೆ ನಿಮ್ಮ ಅನಿಸಿಕೆ ?
ಬೆಂಗಳೂರು ಮ್ಯಾರಥಾನ್‌ನ ರಾಯಭಾರಿಯಾಗಿ ಆಗಮಿಸಿರುವ ನನಗೆ ಮೇ 19ರಂದು ನಡೆಯಲಿರುವ ಮ್ಯಾರಥಾನ್‌ಗಾಗಿ ನಡೆಸಿರುವ ತಯಾರಿ ನೋಡಿ ಖುಷಿಯಾಗಿದೆ. ಯಾವುದೇ ಲೋಪ-ದೋಷಗಳಿಲ್ಲದೆಯೇ ಎಲ್ಲಾ ತಯಾರಿಗಳನ್ನು ಅಚ್ಚುಕಟ್ಟಾಗಿ ಪೂರ್ತಿಗೊಳಿಸಲಾಗಿದೆ. ಅಲ್ಲದೇ, ಸ್ಪರ್ಧೆಗಳ ಆಯೋಜಕರಿಂದ ಹಿಡಿದು, ಸ್ವಯಂಸೇವಕರು, ಸ್ಪರ್ಧೆಯಲ್ಲಿ ಭಾಗವಹಿಸಿರುವವರೂ ಎಲ್ಲರೂ ಉತ್ಸಾಹ ತೋರುತ್ತಿದ್ದಾರೆ. ಇದು ಸಂತಸ ತಂದಿದೆ.

2.   ಮ್ಯಾರಥಾನ್‌ಗಳ ಮೇಲೂ ಈಗ ಉಗ್ರರ ಕರಿನೆರಳು ಬಿದ್ದಿದೆ. ಬೋಸ್ಟನ್‌ನಲ್ಲಿ ನಡೆದ ಅವಳಿ ಸ್ಫೋಟಗಳೇ ಇದಕ್ಕೆ ಉದಾಹರಣೆ. ಇದರ ಬಗ್ಗೆ ತಾವೇನು ಹೇಳಲು ಬಯಸುತ್ತೀರಿ ?
ಇದು (ಭಯೋತ್ಪಾದಕರ ದಾಳಿ) ನಿಜಕ್ಕೂ ಆತಂಕಪಡುವಂಥ ವಿಚಾರ. ಇತ್ತೀಚೆಗೆ, ಬಹುತೇಕ ಎಲ್ಲಾ ಪಂದ್ಯಾವಳಿಗಳಿಗೂ ಬಿಗಿಭದ್ರತೆಯನ್ನು ಒದಗಿಸಲಾಗುತ್ತಿದೆ. ಆದರೂ, ಇಂಥ ಘಟನೆಗಳು ನಡೆಯುತ್ತಿರುವದು ಆತಂಕ ಹೆಚ್ಚಲು ಕಾರಣವಾಗಿದೆ. ಆದರೆ, ಕ್ರೀಡೆಗಳು ನಡೆಯುವ ಪ್ರಾಂತ್ಯಗಳಲ್ಲಿನ ಸರ್ಕಾರ, ಅಲ್ಲಿನ ಕಾನೂನು- ಸುವ್ಯವಸ್ಥೆ ಪಾಲಕರು,ಪಂದ್ಯಾವಳಿಯ ಆಯೋಜಕರು ಒಟ್ಟಾಗಿ ಭಯೋತ್ಪಾದಕರ ನಿಗ್ರಹಕ್ಕೆ ಪಣ ತೊಟ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ, ಇಂಥ ದುರ್ಘಟನೆಗಳಿಂದ ಕ್ರೀಡಾಳುಗಳನ್ನು, ಜನಸಾಮಾನ್ಯರನ್ನು ರಕ್ಷಿಸಬಹುದು. ಕ್ರೀಡೆಗಳು ನಡೆಯುವ ಆಯಾ ಪ್ರಾಂತ್ಯಗಳ ಜನರೂ ಸಹ ಇದಕ್ಕೆ ಸಹಕಾರ ನೀಡಬೇಕು.

3.    ವಿಶ್ವ ಕ್ರೀಡಾಲೋಕವನ್ನು 'ಡೋಪಿಂಗ್‌' ಎಂಬ ಭೂತ ಬೃಹದಾಕಾರವಾಗಿ ಬೆಳೆದು ನಿಂತು ಕಾಡುತ್ತಿದೆ. ಅಥ್ಲೆಟಿಕ್ಸ್ ಕೂಡ ಇದರಿಂದ ಹೊರತಾಗಿಲ್ಲ. ಈ ಬಗ್ಗೆ ಏನು ಹೇಳುತ್ತೀರಿ ?
ಈ ಬಗ್ಗೆ ವಿಶ್ವವ್ಯಾಪಿಯಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇಂಥಾ ಘಟನೆಗಳು ನನಗೆ ಬೇಸರ ತರಿಸಿವೆ. ಮಾರಿಯನ್ ಜೋನ್ಸ್ ಹಾಗೂ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಅವರ ಪ್ರಕರಣಗಳು ನಿಜಕ್ಕೂ ಖೇದಕರ. ಆದರೆ, ಡ್ರಗ್ಸ್ ಇಲ್ಲದೆಯೇ ನಾವು ಕ್ರೀಡಾಕ್ಷೇತ್ರದಲ್ಲಿ ಸಾಧಿಸಬಲ್ಲೆವು ಎಂಬ ಆತ್ಮವಿಶ್ವಾಸ ಹಾಗೂ ಛಲಗಳನ್ನು ಕ್ರೀಡಾಳುಗಳು ಮೈಗೂಡಿಸಿಕೊಳ್ಳಬೇಕು. ಆಗ, ಮಾತ್ರ ಈ ಪಿಡುಗನ್ನು ನಾವು ನಿರ್ಮೂಲನೆ ಮಾಡಬಹುದು.
ಇಂದು, ಉದ್ದೀಪನಾ ಮದ್ದು ಸೇವನೆ ನಿಗ್ರಹ ದಳಗಳೂ ವಿಶ್ವಮಟ್ಟದಲ್ಲಿ ಹಾಗೂ ಆಯಾ ದೇಶಗಳಲ್ಲಿ ಈ ಪಿಡುಗನ್ನು ತೊಡೆದು ಹಾಕಲು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೂ, ಕೆಲ ಕ್ರೀಡಾಳುಗಳು ಈ ಅಧಿಕಾರಿಗಳ ಕಣ್ಣುತಪ್ಪಿಸಲು ನಾನಾ ರೀತಿಯ ಉಪಾಯಗಳನ್ನು ಹುಡುಕುತ್ತಲೇ ಇರುತ್ತಾರೆ. ಆದ್ದರಿಂದ, ಅಂತಿಮವಾಗಿ, ಇದು ಕ್ರೀಡಾಳುಗಳ ವೈಚಾರಿಕತೆಗೆ ಬಿಟ್ಟ ವಿಷಯ. ಅವರೆ, ತಮ್ಮನ್ನು ತಾವು ಉದ್ದೀಪನಾ ಮದ್ದು ಸೇವನೆಗಳಿಂದ ದೂರವಿಟ್ಟುಕೊಳ್ಳಬೇಕು.

4.   ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಭಾರತ ಈವರೆಗೆ ನಡೆದು ಬಂದ ಹಾದಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಇತ್ತೀಚಿನ ವರ್ಷಗಳಲ್ಲಿ ಭಾರತದ ಕ್ರೀಡಾಳುಗಳು ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಆದರೆ, ಪ್ರಾಮಾಣಿಕವಾಗಿ ಹೇಳುವುದಾದರೆ, ಭಾರತ ವಿಶ್ವಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಈವರೆಗೆ ಸಾಧಿಸಿರುವುದು ಏನೇನೂ ಸಾಲದು. ಭಾರತದ ಆಟಗಾರರು ಇನ್ನೂ ಸಾಕಷ್ಟು ದೂರ ಸವೆಸಬೇಕಿದೆ.
ಯುವ ಅಥ್ಲೀಟ್‌ಗಳನ್ನು ತರಬೇತುಗೊಳಿಸಲು ಭಾರತದಲ್ಲಿ ಈಗಿರುವ ವ್ಯವಸ್ಥೆಗಿಂತ ಉನ್ನತಮಟ್ಟದ ವ್ಯವಸ್ಥೆ ಜಾರಿಯಾದರೆ ಚೆನ್ನ. ಅದರಲ್ಲೂ, ವಿಶೇಷವಾಗಿ ಶಾಲಾಮಟ್ಟದಿಂದಲೇ ಅಥ್ಲೀಟ್‌ಗಳನ್ನು ಬೆಳೆಸುವ ವಿಚಾರದಲ್ಲಿ ಹಲವು ಉತ್ತಮ ಯೋಜನೆಗಳನ್ನು ಜಾರಿಗೊಳಿಸುವ ಅಗತ್ಯವಿದೆ.
ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಭಾರತದ ಯುವ ಕ್ರೀಡಾ ಪ್ರತಿಭೆಗಳು ಭರವಸೆ ಮೂಡಿಸಿದ್ದಾರೆ. ಅವರಲ್ಲಿ, ಆಡುವ, ಸಾಧಿಸುವ ಉತ್ಸಾಹಗಳಿವೆ. ಇದು, ಭಾರತ ಮುಂದೊಂದು ದಿನ ವಿಶ್ವ ಕ್ರೀಡಾಲೋಕದಲ್ಲಿ ಉತ್ತಮ ಸಾಧನೆ ಮಾಡುವ ಆಶಾಭಾವನೆಯನ್ನು ನನ್ನಲ್ಲಿ ಮೂಡಿಸಿದೆ.

5.   ಇದು ಬೆಂಗಳೂರಿಗೆ ನಿಮ್ಮ ಮೊದಲ ಭೇಟಿ. ಬೆಂಗಳೂರಿನ ಬಗ್ಗೆ ನಿಮ್ಮ ಅನಿಸಿಕೆ ?
ಹೌದೌದು... (ನಸುನಗುತ್ತಾ...) ಇದು ನನ್ನ ಮೊದಲ ಬೆಂಗಳೂರು ಭೇಟಿ. ಇಲ್ಲಿನ ಹವಾಮಾನ, ಜನಜೀವನ ನನಗೆ ತುಂಬಾ ಹಿಡಿಸಿತು. ಇಲ್ಲಿನ ಜನ ಸಾಕಷ್ಟು ಸರಳ, ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡದವರು. ಇಲ್ಲಿಗೆ ಬಂದು ಎರಡು ದಿನದಲ್ಲೇ ಇಲ್ಲಿನ ಆಹಾರ ಪದ್ಧತಿ ಹಾಗೂ ಉಡುಗೆ-ತೊಡುಗೆ ನನನ್ನು ಆಕರ್ಷಿಸಿದವು. ಇಲ್ಲಿನ ಆಹಾರವನ್ನು ತೃಪ್ತಿಯಾಗಿ ಸವಿದೆ. ನಂತರ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಇಲ್ಲಿನ ಸಾಂಪ್ರದಾಯಿಕ ಶೈಲಿಯ ಹಲವಾರು ಉಡುಪುಗಳನ್ನು ಖರೀದಿಸಿದೆ. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್‌ಗಾಗಿ ಅಡ್ಡಾಡಿದ್ದು, ಮರೆಯಾಗದ ಘಳಿಗೆ.
ಅಲ್ಲದೇ, ಬೆಂಗಳೂರಿನ ಸುತ್ತಮುತ್ತಲಿನ ಕೆಲ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡಿದೆ. ಇಲ್ಲಿನ ಜನರ ಪ್ರೀತಿ, ಆದರಣೆ, ಆತ್ಮೀಯತೆಗಳು ನನಗೆ ಹಿಡಿಸಿವೆ. ಆದರೆ, ನನಗೆ ಕೊಂಚ ಕಿರಿಕಿರಿ ಮಾಡಿದ್ದೆಂದರೆ ಇಲ್ಲಿನ ಟ್ರಾಫಿಕ್. ಅದೊಂದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ನನಗೆ ಇಷ್ಟವಾದವು. ಪದೇಪದೇ ಇಲ್ಲಿಗೆ ಬರುವಾಸೆಯಿದೆ.

6.   ಯುವ ಆಟಗಾರರಿಗೆ ನಿಮ್ಮ ಕಿವಿಮಾತು..... ?
ಯುವ ಆಟಗಾರರು ಮೊದಲು ತಮ್ಮ ತರಬೇತುದಾರರು ಹೇಳಿದ್ದನ್ನು ಕಲಿಯಬೇಕು. ಉದ್ಧಟತನ ತೋರಬಾರದು. ಕ್ರೀಡಾಲೋಕಕ್ಕೆ ಕಾಲಿಡುವ ಪ್ರತಿಯೊಬ್ಬ ಯುವ ಕ್ರೀಡಾಳುವೂ, ಸಾಧನೆಯ ಹಾದಿಯಲ್ಲಿ ತಾನು ಎಲ್ಲಿ ಹೋಗಬೇಕು. ಯಾವ ಗುರಿ ಮುಟ್ಟಬೇಕು ಎಂಬುದನ್ನು ಮೊದಲ ನಿರ್ಧರಿಸಿಕೊಳ್ಳಬೇಕು. ಸಾಧನೆಯ ಹಾದಿಯಲ್ಲಿ, ಸೋಲು, ಗೆಲವು, ವೈಫಲ್ಯಗಳು ಇರುತ್ತವೆ. ಆದರೆ, ಧೃತಿಗೆಡದೇ ಮುಂದೆ ಸಾಗುವ ಛಲ ಬೇಕು.

7.  ಭಾರತೀಯ ಕ್ರೀಡಾಲೋಕಕ್ಕೆ ನಿಮ್ಮಿಂದ ಯಾವ ರೀತಿಯ ಸಹಾಯವನ್ನು ಮುಂದೆ ನಾವು ನಿರೀಕ್ಷಿಸಬಹುದು ?
ಈ ಬಗ್ಗೆ ನಾನೂ ಯೋಚಿಸಿದ್ದೇನೆ. ಈ ಹಿನ್ನೆಲೆಯಲ್ಲಿ, ಇಲ್ಲಿನ ಕೆಲ ಅಥ್ಲೆಟಿಕ್ಸ್ ತರಬೇತುದಾರರೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ. ದಕ್ಷಿಣ ಆಫ್ರಿಕಾದಲ್ಲಿನಾನು ನಡೆಸುತ್ತಿರುವ ತರಬೇತು ಶಾಲೆಯಲ್ಲಿ ವಿಶ್ವದ ನಾನಾ ದೇಶಗಳಿಂದ ಮಕ್ಕಳು ಬಂದು ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮುಂದೆ, ಭಾರತದ ಮಕ್ಕಳಿಗೂ ತರಬೇತಿ ನೀಡುವ ಅವಕಾಶ ಸಿಕ್ಕಿದಲ್ಲಿ ಅದು ಭಾರತೀಯ ಕ್ರೀಡಾಲೋಕಕ್ಕೆ ನನ್ನ ಸೇವೆಯೆಂದು ಭಾವಿಸುತ್ತೇನೆ.  

-ಸಂದರ್ಶನ: ಚೇತನ್ ಓ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement