ಅಗ್ರ ನಾಲ್ವರು ಪ್ರಧಾನ ಸುತ್ತಿಗೆ
ಬೆಂಗಳೂರು: ಅರ್ಹತಾ ಸುತ್ತಿನಲ್ಲಿ ಅಗ್ರ ನಾಲ್ಕು ಶ್ರೇಯಾಂಕ ಪಡೆದಿದ್ದ ಬಾಲಕಿಯರು ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ನಡೆಯುತ್ತಿರುವ ಏಷ್ಯನ್ ರ್ಯಾಂಕಿಂಗ್ ಜೂನಿಯರ್ ಟೆನಿಸ್ ಚಾಂಪಿಯನ್ಷಿಪ್ನ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ. ಅಗ್ರ ಶ್ರೇಯಾಂಕ ಪಡೆದಿದ್ದ ಸ್ವಾತೀಶಿ ಸುರೇಶ್, ಸೋನಾಶೀ ಭಟ್ನಾಗಾರ್, ಚೆಲ್ಸೀ ಮತ್ತು ತನ್ಯಾ ಬಾತ್ರಾ ಅರ್ಹತಾ ಸುತ್ತಿನಲ್ಲಿ ಅಗ್ರ ಶ್ರೇಯಾಂಕ ಪಡೆದ ಆಟಗಾರ್ತಿಯರಾಗಿದ್ದಾರೆ. ಸ್ಥಳೀಯ ಆಟಗಾರ್ತಿ ಚೆಲ್ಸೀ ಅವರು ಮಿರ್ಚಿ ಜೈಸ್ವಾಲ್ ವಿರುದ್ಧ 7-5, 7-5 ಸೆಟ್ಗಳಿಂದ ಜಯ ಸಾಧಿಸಿದರೆ, ಇನ್ನೊಬ್ಬ ಸ್ಥಳೀಯ ಆಟಗಾರ್ತಿ ಸೋನಾಶೀ ಭಟ್ನಾಗರ್, ಮಿಚೆಲ್ಲೆ ಜೋ ಜೋಸೆಫ್ ಅವರನ್ನು 6-3, 7-5 ಸೆಟ್ಗಳಿಂದ ಪರಾಭವಗೊಳಿಸಿದರು. ಇನ್ನು ತೀವ್ರ ಪೈಪೋಟಿಯಿಂದ ನಡೆದ ಬಾಲಕರ ವಿಭಾಗದ ಮೊದಲ ಸುತ್ತಿನ ಮ್ಯಾರಥಾನ್ ಪಂದ್ಯದಲ್ಲಿ ಎಸ್. ಸರಣ್ ಅಲನ್ ಎಸ್. ರಾಡಿಕ್ ಅವರನ್ನು 3-6, 7-6(4), 7-6 ( 4 ) ಸೆಟ್ಗಳಿಂದ ಸೋಲಿಸಿ ಅಂತಿಮ ಸುತ್ತು ಪ್ರವೇಶಿಸಿದರು. ತೀವ್ರ ಹಣಾಹಣಿಯಿಂದ ಕೂಡಿದ್ದ ಇನ್ನೊಂದು ಪಂದ್ಯದಲ್ಲಿ ಎ. ಹರ್ಷಿತ್ ರಿಶಿಕೇಶ್ ನಂಬೋದರಿ ಅವರನ್ನು 4-6, 6-4, 6-3 ಸೆಟ್ಗಳಿಂದ ಸೋಲಿಸಿದರು. ಭಾನುವಾರ ಬೆಳಗ್ಗೆ ದ್ವಿತೀಯ ಸುತ್ತಿನ ಪಂದ್ಯಗಳು ನಡೆಯಲಿದ್ದು, ಮಧ್ಯಾಹ್ನ ಪ್ರಧಾನ ಸುತ್ತಿನ ಪಂದ್ಯಗಳು ನಡೆಯಲಿವೆ.
ಆನಂದ್ಗೆ ಜಯ
ಸ್ಯಾಂಡೆನ್ಸ್ (ನಾರ್ವೆ): ಭಾರತದ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರು, ಶನಿವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಾರ್ವೆಯವರೇ ಆದ ಜೋನ್ ಲುಡ್ವಿಗ್ ಹ್ಯಾಮರ್ ಅವರನ್ನು ಸೋಲಿಸಿ, ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.